ಇಡೀ ದೇಶಕ್ಕೆ ವ್ಯಾಪಿಸಿದ ಬೆಂಗಳೂರಿನ ನಕಲಿ ಔಷಧಿ ದಂಧೆ: ಎಸ್‌ಐಟಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು

ಬೆಂಗಳೂರಿನಲ್ಲಿ ಬೃಹತ್ ನಕಲಿ ಮತ್ತು ಅವಧಿ ಮುಗಿದ ಔಷಧಿಗಳ ಜಾಲವನ್ನು ವಿಶೇಷ ತನಿಖಾ ದಳ (SIT) ಮತ್ತು ಆರೋಗ್ಯ ಇಲಾಖೆ ಪತ್ತೆಹಚ್ಚಿದ್ದು, ಈ ನಕಲಿ ಔಷಧಿ ದಂಧೆ ಇಡೀ ದೇಶಕ್ಕೆ ವ್ಯಾಪಿಸಿರುವುದು ಎಸ್​​ಐಟಿ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ. ಇನ್ನು ಇದರ ಕಿಂಗ್ ಪಿನ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಸಾಧ್ಯತೆಗಳಿವೆ. ಹಾಗಾದ್ರೆ, ಬೆಂಗಳೂರಿನಿಂದ ಬೇರೆ ಬೇರೆ ರಾಜ್ಯಗಳಿಗೆ ವ್ಯಾಪಿಸಿದ್ಹೇಗೆ ಎನ್ನುವ ಡಿಟೇಲ್ಸ್ ಇಲ್ಲಿದೆ.

ಇಡೀ ದೇಶಕ್ಕೆ ವ್ಯಾಪಿಸಿದ ಬೆಂಗಳೂರಿನ ನಕಲಿ ಔಷಧಿ ದಂಧೆ: ಎಸ್‌ಐಟಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು
Bengaluru Fake Medicine
Edited By:

Updated on: Sep 20, 2026 | 8:37 AM

ಬೆಂಗಳೂರು, (ಸೆಪ್ಟೆಂಬರ್ 20): ಬೆಂಗಳೂರಿನಲ್ಲಿ ಪತ್ತೆಯಾದ ನಕಲಿ ಔಷಧಿ ದಂಧೆಯ ಜಾಲ ಇದೀಗ ಹಲವು ರಾಜ್ಯಗಳಿಗೆ ವ್ಯಾಪಿಸಿರುವುದು ಎಸ್‌ಐಟಿ ತನಿಖೆಯಲ್ಲಿ ಬಯಲಾಗಿದೆ. ಬೆಂಗಳೂರು ಸೇರಿದಂತೆ ಹತ್ತು ಕಡೆಗಳಲ್ಲಿ ದಾಳಿ ನಡೆಸಿ ದಾಖಲೆಗಳು ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಿರುವ ಎಸ್‌ಐಟಿ, ಈಗಾಗಲೇ ಐದಾರು ರಾಜ್ಯಗಳಲ್ಲೂ ತನಿಖೆ ನಡೆಸಿದೆ. ಹಲವು ಆಸ್ಪತ್ರೆಗಳಿಗೆ ನಕಲಿ ಔಷಧಿ ಪೂರೈಕೆ ಮಾಡಿರುವುದು ಪತ್ತೆಯಾಗಿದ್ದು, ಪ್ರಕರಣದ ತನಿಖೆಯನ್ನ ತೀವ್ರಗೊಳಿಸಲಾಗಿದೆ. ಆದ್ರೆ ಹೊರ ರಾಜ್ಯಗಳಲ್ಲಿ ತನಿಖೆ ನಡೆಸುವುದು, ಆರೋಪಿಗಳಿಂದ ದಾಖಲೆ ಹಾಗೂ ಸಾಕ್ಷ್ಯ ಸಂಗ್ರಹಿಸುವುದು ಎಸ್‌ಐಟಿಗೆ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನ ಸಿಬಿಐಗೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ.ಶೀಘ್ರದಲ್ಲೇ ಗೃಹ ಇಲಾಖೆಯಿಂದ ಅನುಮತಿ ಪಡೆದು, ಸಿಬಿಐ ತನಿಖೆಗೆ ವರ್ಗಾವಣೆ ಸಂಬಂಧ ಪತ್ರ ವ್ಯವಹಾರ ನಡೆಸುವ ಸಾಧ್ಯತೆ ಇದೆ.

ಸರ್ಕಲ್ ರೀತಿಯಲ್ಲಿ ಈ ಜಾಲ ಕಾರ್ಯ

ಇನ್ನು ಎಸ್‌ಐಟಿ ತನಿಖೆ ವೇಳೆ ನಕಲಿ ಔಷಧಿ ಜಾಲದ ಮತ್ತಷ್ಟು ಕರಾಳ ಮುಖ ಬಯಲಾಗಿದ್ದು, ಒಂದು ಸರ್ಕಲ್ ರೀತಿಯಲ್ಲಿ ಈ ಜಾಲ ಕಾರ್ಯನಿರ್ವಹಿಸುತ್ತಿತ್ತು ಎನ್ನುವುದು ಗೊತ್ತಾಗಿದೆ. ಡಿಸ್ಟ್ರಿಬ್ಯೂಟರ್, ಸಬ್ ಡಿಸ್ಟ್ರಿಬ್ಯೂಟರ್, ಹೋಲ್‌ಸೇಲ್ ರಿಟೇಲರ್ ಹಾಗೂ ರಿಟೇಲರ್ ಮೂಲಕ ನಕಲಿ ಔಷಧಿಗಳನ್ನು ಮಾರಾಟ ಮಾಡಲಾಗ್ತಿತ್ತು. ಒಂದು ಮಾತ್ರೆ ತಯಾರಿಸಲು ಕೇವಲ 150ರಿಂದ 200 ರೂಪಾಯಿ ವೆಚ್ಚವಾಗ್ತಿತ್ತು.ಆದ್ರೆ ಅದೇ ಮಾತ್ರೆಯನ್ನ ಸಾವಿರಾರು ರೂಪಾಯಿಗೆ ಮಾರಾಟ ಮಾಡಲಾಗ್ತಿತ್ತು.ಎರಡು ರೀತಿಯಲ್ಲಿ ನಕಲಿ ಮೆಡಿಸಿನ್ ತಯಾರಿಸುತ್ತಿದ್ದ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ..ಅಸಲಿ ಔಷಧಿಗಳಿಗೆ ಬೇರೆ ಬೇರೆ ಪೌಡರ್‌ಗಳನ್ನು ಬೆರೆಸಿ ನಕಲಿ ಔಷಧಿಯಾಗಿ ಮಾರಾಟ ಮಾಡಲಾಗ್ತಿತ್ತು.

ಇದನ್ನೂ ಓದಿ: ಕೆಪಿಎಸ್​​ಸಿ ಹಗರಣ: ಸಿಐಡಿ ಆಯ್ತು ಈಗ ಇಡಿ ಇಕ್ಕಳದಲ್ಲಿ ಸಿಲುಕಿದ ಐಎಎಸ್ ಅಧಿಕಾರಿ

ಮತ್ತೊಂದು ಕಡೆ ಒರಿಜಿನಲ್ ಮ್ಯಾನಿಫ್ಯಾಕ್ಚರಿಂಗ್ ಲೈಸೆನ್ಸ್ ನಂಬರ್ ಹಾಗೂ ಮೆಡಿಸಿನ್ ನಂಬರ್‌ಗಳನ್ನೇ ಬಳಸಿ ಅದೇ ರೀತಿಯ ನಕಲಿ ಔಷಧಿ ತಯಾರಿಸಲಾಗ್ತಿತ್ತು. ಅಷ್ಟೇ ಅಲ್ಲ ಅಸಲಿ ಔಷಧಿಯ ಬಾಟಲ್, ಸ್ಟ್ರಿಪ್ ಹಾಗೂ ರ್ಯಾಪರ್ ರೀತಿಯಲ್ಲೇ ನಕಲಿ ಪ್ಯಾಕಿಂಗ್ ಮಾಡಲಾಗ್ತಿತ್ತು. ಡಾಕ್ಟರ್‌ಗಳು ಔಷಧಿಯ ಐಡೆಂಟಿಟಿ ನಂಬರ್ ಚೆಕ್ ಮಾಡಿದಾಗಲೂ ನಂಬರ್ ಸೇಮ್ ಬರುತ್ತಿದ್ದ ಕಾರಣ, ನಕಲಿ ಔಷಧಿ ಅನ್ನೋ ಅನುಮಾನವೇ ಬಾರದಂತೆ ಜಾಲ ಕಾರ್ಯನಿರ್ವಹಿಸುತ್ತಿತ್ತು ಎನ್ನುವುದು ಎಸ್​ಐಟಿ ತನಿಖೆ ವೇಳೆ ಬಯಲಾಗಿದೆ.

ವಿದೇಶದಲ್ಲಿ ತಲೆಮರೆಸಿಕೊಂಡಿರೊ ಕಿಂಗ್ ಪಿನ್

ಇನ್ನು ಈ ಪ್ರಕರಣದ ಕಿಂಗ್‌ಪಿನ್ ಪ್ರಶಾಂತ್ ಇನ್ನೂ ಅಜರ್‌ಬೈಜಾನ್‌ನಲ್ಲೇ ವಾಸ್ತವ್ಯ ಹೂಡಿದ್ದಾನೆ.
ಕಳೆದ 9ನೇ ತಾರೀಖಿಗೆ ಪ್ರಶಾಂತ್‌ನ ವೀಸಾ ಅವಧಿ ಮುಗಿದಿದ್ದು, ಸದ್ಯ ಅಜರ್‌ಬೈಜಾನ್‌ನ ಕಸ್ಟಮ್ಸ್ ಅಧಿಕಾರಿಗಳ ವಶದಲ್ಲಿರೊ ಮಾಹಿತಿ ಇದೆ. ಭಾರತ ಮತ್ತು ಅಜರ್‌ಬೈಜಾನ್ ನಡುವೆ ಆರೋಪಿಯನ್ನು ಹಸ್ತಾಂತರಿಸುವ ಸಂಬಂಧಿತ ಟ್ರೀಟಿ ಇಲ್ಲದ ಹಿನ್ನೆಲೆ, ಪ್ರಶಾಂತ್‌ನನ್ನ ನೇರವಾಗಿ ಭಾರತಕ್ಕೆ ಕರೆತರಲು ಸಾಧ್ಯವಾಗ್ತಿಲ್ಲ.ಪ್ರಶಾಂತ್ ಅಲ್ಲಿನ ಸಮಸ್ಯೆ ಬಗೆಹರಿಸಿಕೊಂಡು ತಾನೇ ಭಾರತಕ್ಕೆ ವಾಪಸ್ ಬರಬೇಕಿದೆ. ಆ ಬಳಿಕ ಈಗಾಗಲೇ ಜಾರಿ ಮಾಡಿರುವ ಲುಕ್‌ಔಟ್ ನೋಟಿಸ್ ಆಧಾರದಲ್ಲಿ ಏರ್‌ಪೋರ್ಟ್‌ನಲ್ಲೇ ಆತನನ್ನ ಬಂಧಿಸುವ ಸಾಧ್ಯತೆ ಇದೆ.

ಸದ್ಯ ನಕಲಿ ಔಷಧಿ ದಂಧೆಯ ಜಾಲ ಎಷ್ಟು ದೊಡ್ಡದಾಗಿದೆ,ಇನ್ನೆಷ್ಟು ರಾಜ್ಯಗಳಿಗೆ ಇದರ ಕನೆಕ್ಷನ್ ಇದೆ, ಅನ್ನೋದರ ಬಗ್ಗೆ ಎಸ್‌ಐಟಿ ತನಿಖೆ ಮುಂದುವರಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಕಾಸ್​ ಬಿಎಂ

ವಿಕಾಸ್​ ಬಿಎಂ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ. ಮೈಸೂರು ಯೂನಿವರ್ಸಿಟಿ ಯಲ್ಲಿ ಶಿಕ್ಷಣ ಮುಗಿಸಿ, 2014 ರಿಂದ ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ಸದ್ಯ ಬೆಂಗಳೂರು ಕ್ರೈಂ ವರದಿಗಾರನಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. ಕ್ರೈಂ ರಿಪೋರ್ಟಿಂಗ್ ಹಾಗು ಇನ್ವೆಷ್ಟಿಗೇಟಿವ್ ವರದಿಗಾರರಾಗಿ ಹಾಗು ಸ್ಟಿಂಗ್ ಆಪರೇಷನ್​ಗಳನ್ನ ಮಾಡಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಸುದ್ದಿ ಮೊದಲು ಬ್ರೇಕ್ ಮಾಡಿದ್ದಲ್ಲದೆ, ಶಂಕಿತರ ಸಿಸಿ ಕ್ಯಾಮರಾ ವಿಡಿಯೋಗಳನ್ನ ಪ್ರಸರಣ ಮಾಡಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರನಾಗಿದ್ದಾರೆ. ಅಲ್ಲದೇ ಬೆಂಗಳೂರಲ್ಲಿ ಟೈಡಾಲ್ ಡ್ರಗ್ ಸೇವನೆಯ ಸ್ಟಿಂಗ್ ಆಪರೇಷನ್ ಮಾಡಿ, ಮೆಡಿಕಲ್ ಗಳಲ್ಲಿ ಟೈಡಾಲ್ ಮಾತ್ರೆಯ ಮಾರಟ ನಿಯಂತ್ರಣಕ್ಕೆ ಬರುವಂತೆ ಮಾಡಿದ್ದಾರೆ. ನೊಂದವರ ಪರವಾಗಿ ನಿಂತು ವಸ್ತುನಿಷ್ಠವಾಗಿ ಸುದ್ದಿಗಳನ್ನ ನೀಡಿ ನ್ಯಾಯ ಕೊಡಿಸುವುದು ಇವರ ಮೊದಲ ಉದ್ದೇಶ. ಸದ್ಯ ಟಿವಿ9 ಸಂಸ್ಥೆಯಲ್ಲಿ ಬೆಂಗಳೂರು ಕ್ರೈಂ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರೋಡ್ ಟ್ರಿಪ್, ಕ್ರಿಕೆಟ್‌, ವಾಲಿಬಾಲ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್ ಪುಸ್ತಕ ಓದುವುದು ಮತ್ತು ಕ್ರೈಂ ತ್ರಿಲ್ಲರ್ ಸಿನಿಮಾಗಳನ್ನ ನೋಡುವುದು ಇವರ ಹವ್ಯಾಸಗಳು.

Read More
Loading...
Unable to load recommendations.
Follow Us