ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿ ಅರೆಸ್ಟ್
ಕಳೆದ ಕೆಲವು ತಿಂಗಳ ಹಿಂದೆ ಬೆಂಗಳೂರಿನ ಹಲವು ಶಾಲೆ-ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಇದು ನಗರದಲ್ಲಿ ಭಯ ಸೃಷ್ಟಿ ಮಾಡಿತ್ತು. ಬಾಂಬ್ ಬೆದರಿಕೆ ಇ-ಮೇಲ್ ಪ್ರಕರಣದ ತನಿಖೆ ನಡೆಸಿದ ದಕ್ಷಿಣ ವಿಭಾಗದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು, ಅಕ್ಟೋಬರ್ 18: ನಗರದ ವಿವಿಧ ಶಾಲೆ-ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ (Bomb Threat E-Mail) ಮಾಡಿದ್ದ 48 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ (B Dayananda) ತಿಳಿಸಿದರು. ಆರೋಪಿ ಹನುಮಂತ ನಗರ ಮತ್ತು ವಿವಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಲೇಜುಗಳಿಗೆ ಇ ಮೇಲ್ ಮುಖಾಂತರ ಬಾಂಬ್ ಬೆದರಿಕೆ ಹಾಕಿದ್ದನು. ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಪ್ರಕರಣದ ತನಿಖೆ ನಡೆಸಿ, ಆರೋಪಿಯನ್ನು ಡಾರ್ಜಲಿಂಗ್ ಜಿಲ್ಲೆಯ ಸಾಲ್ಬರಿ ನಗರದಲ್ಲಿ ವಶಕ್ಕೆ ಪಡೆದರು ಎಂದು ತಿಳಿಸಿದರು.
ಆರೋಪಿ ಬಳಿಯಿಂದ ಲ್ಯಾಟ್ಟಾಪ್ ಮತ್ತು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ಆರೋಪಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ. ಸದ್ಯ ಆರೋಪಿಗೆ ನೋಟಿಸ್ ಜಾರಿ ಮಾಡಿದ್ದೇವೆ. ಆರೋಪಿ ಪಶ್ಚಿಮ ಬಂಗಾಳದಲ್ಲಿ ಸಹ 10 ಕಡೆ ಇ-ಮೇಲ್ ಮುಖಾಂತರ ಬೆದರಿಕೆ ಹಾಕಿದ್ದನು ಎಂದರು.
ಇದನ್ನೂ ಓದಿ: ಬೆಂಗಳೂರು ಮಹಾಲಕ್ಷ್ಮೀ ಕೊಲೆಯಾಗಿದ್ದು ಮದುವೆ ವಿಚಾರಕ್ಕೆ?: ಕಮಿಷನರ್ ದಯಾನಂದ್ ಹೇಳಿದ್ದಿಷ್ಟು
21 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ
ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು 21.17 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಕೇಸ್ ದಾಖಲಿಸಿ, ಮೂವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಿಗೆಹಳ್ಳಿ ಪೊಲೀಸ್ ಠಾಣೆ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಐದು ಪ್ರಕರಣಗಳಿಗೆ ಸೇರಿದ 70 ಲಕ್ಷ ಮೌಲ್ಯದ 1 ಕೆ.ಜಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಇತರೆ ಮೂವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ತಿಳಿಸಿದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್ಗೆ ರಾಜಾತಿಥ್ಯ ನೀಡಿರುವ ಪ್ರಕರಣದ ತನಿಖೆ ಬಹುತೇಕ ಅಂತ್ಯ ಆಗಿದೆ. ಈಗಾಗಲೇ ಚಾರ್ಜ್ಶೀಟ್ ಸಿದ್ಧವಾಗಿದ್ದು, ಸ್ಕ್ರೂಟನಿ ನಡೆಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:55 pm, Fri, 18 October 24