ರಾಮೇಶ್ವರಂ ಕೆಫೆ ಸ್ಫೋಟ, ಇದು ರಾಷ್ಟ್ರ ಭದ್ರತೆಯ ಪ್ರಶ್ನೆ, ಓಲೈಕೆ ರಾಜಕಾರಣ ಬಿಡಿ: ಸರ್ಕಾರಕ್ಕೆ ಅಶೋಕ್ ಆಗ್ರಹ
ರಾಜ್ಯ ಸರ್ಕಾರವು ವಿವಿಧ ಪ್ರಕರಣಗಳನ್ನು ಮುಚ್ಚಿಹಾಕುತ್ತಿದೆ ಎಂದು ಟೀಕಿಸಿರುವ ಪ್ರತಿಪಕ್ಷ ನಾಯಕ ಆರ್ ಅಶೋಕ್, ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ದೇಶದ ಭದ್ರತೆಗೆ ಸಂಬಂಧಿಸಿದ. ರಾಜಕಾರಣ ಮಾಡುವುದನ್ನು ಬಿಡಬೇಕು. ಹಾಗಿದ್ದರೆ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ಹೇಳಿದ್ದಾರೆ.

ಬೆಂಗಳೂರು, ಮಾರ್ಚ್ 2: ರಾಮೇಶ್ವರ ಕೆಫೆ ಬಾಂಬ್ ಸ್ಫೋಟ (Bengaluru Rameshwaram Cafe Bomb Blast) ಪ್ರಕರಣದಲ್ಲಿ ನಾವು ರಾಜಕೀಯ ಮಾಡದೆ ಬೆಂಬಲ ಕೊಡುತ್ತೇವೆ. ಆದರೆ, ಆದರೆ ಪ್ರಕರಣದ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ಆಗಬೇಕು ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashoka) ಹೇಳಿದ್ದಾರೆ. ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ವಿಧಾನಸೌಧಧಲ್ಲಿ ಪಾಕ್ ಪರ ಘೋಷಣೆ ಕೂಗಿದ್ದನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ, ಡಿಸಿಎಂ ಡಿಕೆ ಶಿವಕುಮಾರ್ ಅವರು ಆ ರೀತಿ ಕೂಗಲೇ ಇಲ್ಲ ಎನ್ನುತ್ತಿದ್ದಾರೆ. ಮತ್ತೊಂದೆಡೆ ಹಾವೇರಿ, ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿದ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ. ಅದಕ್ಕಾಗಿ ಈ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲದಂತಾಗಿದೆ ಎಂದು ಅಶೋಕ್ ಹೇಳಿದರು.
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ ರಾಷ್ಟ್ರದ ಭದ್ರತೆಯ ಪ್ರಶ್ನೆ. ಓಲೈಕೆ ರಾಜಕಾರಣ ಮಾಡುವುದು ಬಿಟ್ಟು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಿಂದೂಗಳು ಒಂದು ಸಣ್ಣ ತಪ್ಪು ಮಾಡಿದರೂ ಅವರನ್ನು ಒಳಗೆ ಹಾಕಬೇಕು ಅನ್ನೋ ಮನಸ್ಥಿತಿ ಈ ಕಾಂಗ್ರೆಸ್ ಸರ್ಕಾರಕ್ಕಿದೆ. ಅದಕ್ಕಾಗಿ ಕಾಂಗ್ರೆಸ್ನವರು ಈ ರೀತಿಯ ಮನೋಸ್ಥಿತಿಯಿಂದ ಮೊದಲು ಹೊರಗೆ ಬರಲಿಲ್ಲ ಅಂದರೆ ಈ ರೀತಿಯ ಘಟನೆಗಳು ನಿರಂತರವಾಗಿ ನಡೆಯುತ್ತವೆ ಎಂದು ಅವರು ಹೇಳಿದ್ದಾರೆ.
ನಾವೆಲ್ಲರೂ ಸರ್ಕಾರಕ್ಕೆ ಸಹಕಾರ ಕೊಡುತ್ತೇವೆ, ಆದರೆ ತನಿಖೆಯನ್ನು ಮುಚ್ಚಿ ಹಾಕುವುದು ಯಾಕೆ? ಇದೇ ರೀತಿಯ ಉತ್ತರ ಬರಬೇಕೆಂದು ತನಿಖೆಯ ಮೇಲೆ ಪ್ರಭಾವ ಬೀರುವುದು ಯಾಕೆ? ಇಂತಹ ಘಟನೆ ಗಳಿಂದ ಜನರು ಬೇಸತ್ತಿದ್ದಾರೆ. ಕರ್ನಾಟಕ ಒಂದು ಶಾಂತಿಯ ನಾಡು. ಅದನ್ನು ಕೋಮುಗಲಭೆಯ ನಾಡನ್ನಾಗಿ ಮಾಡಬೇಡಿ ಎಂದು ಅವರು ಹೇಳಿದ್ದಾರೆ.
ಗಾಯಾಳುಗೆಳೆಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಎಲ್ಲರೂ ಗುಣಮುಖರಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಅಶೋಕ್ ಭರವಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ಗೂ, ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಸಾಮ್ಯತೆ ಇಲ್ಲ: ಸಿದ್ದರಾಮಯ್ಯ
ಈ ಮಧ್ಯೆ, ಬಾಂಬ್ ಸ್ಫೋಟ ಸಂಭವಿಸಿದ ರಾಮೇಶ್ವರಂ ಕೆಫೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ವೈದೇಹಿ ಆಸ್ಪತ್ರೆಗೆ ಭೇಟಿ ನಿಡಿ ನಾಲ್ವರು ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಗಾಯಾಳುಗಳ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇಷ್ಟೇ ಅಲ್ಲದೆ, ಗಾಯಾಳುಗಳ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ