
ದೇವನಹಳ್ಳಿ, ಅಕ್ಟೋಬರ್ 16: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಬಿ) ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ಪ್ರಯಾಣಿಕರು ಸೇರಿದಂತೆ ಓರ್ವ ಸಿಬ್ಬಂದಿಯನ್ನ ವಶಕ್ಕೆ ಪಡೆದಿದ್ದಾರೆ. ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ 2.75 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ.
ಸಿಂಗಾಪುರದಿಂದ ಬೆಂಗಳೂರು ಮೂಲಕ ದುಬೈಗೆ ತೆರಳಲು ಬಂದಿದ್ದ ಮೊಹಮ್ಮದ್ ಅಖಿಲ್ ಹಾಗೂ ದುಬೈನಿಂದ ಬೆಂಗಳೂರು ಮೂಲಕ ಮಾಲ್ಡೀವ್ಸ್ಗೆ ತೆರಳುತ್ತಿದ್ದ ಮೊಹಮ್ಮದ್ ನಾಸಿರ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರೂ ಶ್ರೀಲಂಕಾ ಪ್ರಜೆಗಳಾಗಿದ್ದು, ಟ್ರಾನ್ಸಿಕ್ ವಿಮಾನ ಮೂಲಕ ದುಬೈ ಮತ್ತು ಮಾಲ್ಡೀವ್ಸ್ಗೆ ತೆರಳಲು ಬಂದಿದ್ದರು.
ಇನ್ನು ಈ ಪ್ರಯಾಣಿಕರು ಕೆಐಎಬಿಯಲ್ಲಿ ಟ್ರಾವೆಲ್ ಫುಡ್ ಸರ್ವಿಸ್ (ಟಿಎಫ್ಎಸ್) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಬಿನ್ ಜೋಸ್ ಎಂಬಾತನಿಗೆ ಈ ಚಿನ್ನ ನೀಡಲು ಪ್ಲ್ಯಾನ್ ಮಾಡಿದ್ದರು. ಆದರೆ, ಚಿನ್ನ ಹಸ್ತಾಂತರಿಸುವ ಮುನ್ನವೇ ಕಾರ್ಯಾಚರಣೆ ನಡೆಸಿದ ಡಿಆರ್ಐ ಅಧಿಕಾರಿಗಳು ಇಬ್ಬರು ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಇತ್ತೀಚೆಗೆ ಕೋಟ್ಯಂತರ ರೂ ಮೌಲ್ಯದ ಹೈಡ್ರೋಪೋನಿಕ್ಸ್ ಗಾಂಜಾ ತಂದಿದ್ದ ನಾಲ್ವರು ಪ್ರಯಾಣಿಕರು ಅಧಿಕಾರಿಗಳ ಕೈಗೆ ಲಾಕ್ ಆಗಿದ್ದರು. ಬ್ಯಾಂಕಾಕ್ ಮತ್ತು ವಿಯೆಟ್ನಾಂನಿಂದ ಬಂದಿದ್ದ ನಾಲ್ವರು ಪ್ರಯಾಣಿಕರ ಬ್ಯಾಗ್ನಲ್ಲಿ 80 ಕೆಜಿ ಹೈಡ್ರೋಪೋನಿಕ್ಸ್ ಗಾಂಜಾ ಸಿಕ್ಕಿತ್ತು. ಮಾರುಕಟ್ಟೆ ಮೌಲ್ಯ 28 ಕೋಟಿ ರೂ ಅಂತ ಕಸ್ಟಮ್ಸ್ ಅಧಿಕಾರಿಗಳು ಅಂದಾಜಿಸಿದ್ದರು.
ಇದನ್ನೂ ಓದಿ: ಟ್ರಾಲಿಗಳ ಕೆಳಗೆ 1.2 ಕೆಜಿ ಚಿನ್ನ ಅಡಗಿಸಿ ಸಾಗಾಟ ಯತ್ನ: ಬೆಂಗಳೂರು ಏರ್ಪೋರ್ಟ್ನಲ್ಲಿ ಇಬ್ಬರ ಬಂಧನ
ಜೊತೆಗೆ ಕೌಲಲಾಂಪುರ ಮತ್ತು ಅಬುಧಾಬಿಯಿಂದ ಬೆಂಗಳೂರಿಗೆ ಬಂದಿದ್ದ ಮತ್ತಿಬ್ಬರು ಪ್ರಯಾಣಿಕರು ಸಹ ತಮ್ಮ ಬ್ಯಾಗ್ನಲ್ಲಿ ಅಕ್ರಮವಾಗಿ ಚಿನ್ನ ತಂದು ಸಿಕ್ಕಿಬಿದ್ದಿದರು. 1 ಕೋಟಿ 75 ಲಕ್ಷ ರೂ ಮೌಲ್ಯದ 1 ಕೆಜಿ 201 ಗ್ರಾಂ ಚಿನ್ನವನ್ನ ಬ್ಯಾಗ್ನಲ್ಲಿ ಅಡಗಿಸಿಟ್ಟುಕೊಂಡು ಬಂದಿದ್ದು ಚಿನ್ನ ಸಮೇತ ಇಬ್ಬರು ಪ್ರಯಾಣಿಕರನ್ನ ವಶಕ್ಕೆ ಪಡೆದಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:16 pm, Fri, 16 October 26