ಟ್ರಾಲಿಗಳ ಕೆಳಗೆ 1.2 ಕೆಜಿ ಚಿನ್ನ ಅಡಗಿಸಿ ಸಾಗಾಟ ಯತ್ನ: ಬೆಂಗಳೂರು ಏರ್ಪೋರ್ಟ್ನಲ್ಲಿ ಇಬ್ಬರ ಬಂಧನ
ಲಗೇಜ್ ಸಾಗಿಸುವ ಟ್ರಾಲಿಗಳ ಕೆಳ ಭಾಗದಕ್ಕೆ ಚಿನ್ನದ ಬಿಸ್ಕತ್‌ಗಳನ್ನು ಅಂಟಿಸಿ ಸಾಗಾಟಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ನೇರವಾಗಿ ಕಸ್ಟಮ್ಸ್ ತಪಾಸಣೆಗೆ ಒಳಪಡಿಸದೆ ಹೊರಗೆ ಸಾಗಿಸಲು ನೆರವಾಗುವ ಹೊಸ ಹಾಗೂ ವಿಶಿಷ್ಟ ಕಾರ್ಯವಿಧಾನಕ್ಕೆ ಆರೋಪಿಗಳು ಮುಂದಾಗಿದ್ದರು. ಆದರೆ, ಪರಿಶೀಲನೆ ವೇಳೆ ಎರಡು ಪ್ಯಾಕೆಟ್‌ಗಳಲ್ಲಿ ಅಡಗಿಸಿಟ್ಟಿದ್ದ ಒಟ್ಟು 12 ಚಿನ್ನದ ಬಿಸ್ಕತ್‌ಗಳು ಪತ್ತೆಯಾಗಿವೆ.

ದೇವನಹಳ್ಳಿ, ಅಕ್ಟೋಬರ್ 09: ಲಗೇಜ್ ಟ್ರಾಲಿಗಳ ಕೆಳಭಾಗದಲ್ಲಿ ಚಿನ್ನದ ಬಿಸ್ಕತ್‌ಗಳನ್ನು ಅಡಗಿಸಿಟ್ಟು ಕಳ್ಳಸಾಗಣೆ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆರೋಪಿಗಳು ಮಲೇಷ್ಯಾದ ರಾಜಧಾನಿ ಕೌಲಾಲಂಪುರದಿಂದ ಬೆಂಗಳೂರಿಗೆ ಆಗಮಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಕ್ಕಾ ಮಾಹಿತಿಯ ಆಧಾರದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಬ್ಬರು ಪ್ರಯಾಣಿಕರ ಮೇಲೆ ನಿಗಾ ಇರಿಸಿದ್ದರು. ಬಳಿಕ ಅವರನ್ನು ಬಂಧಿಸಿ, ಚಿನ್ನ, ಅದನ್ನು ಅಡಗಿಸಲು ಬಳಸಿದ್ದ ವಸ್ತುಗಳು ಹಾಗೂ ಲಗೇಜ್ ಟ್ರಾಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು DRI ತಿಳಿಸಿದೆ.
1.78 ಕೋಟಿ ಮೌಲ್ಯದ ಚಿನ್ನದ ಬಿಸ್ಕತ್ ವಶ
Delhi: The Directorate of Revenue Intelligence (DRI) has seized 1.3 kg of gold biscuits worth ₹1.8 crore in an alleged smuggling operation involving luggage trolleys. Two accused reportedly brought the gold from Kuala Lumpur, Malaysia, and concealed it by sticking the biscuits to trolleys. They allegedly used unsuspecting passengers to carry the gold past customs before retrieving it. Further investigation is underway.
— IANS (@ians_india) October 9, 2026
ಕಸ್ಟಮ್ಸ್ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಚಿನ್ನವಿದ್ದ ಪ್ಯಾಕೆಟ್‌ಗಳನ್ನು ಲಗೇಜ್ ಟ್ರಾಲಿಗಳ ಕೆಳಭಾಗಕ್ಕೆ ಅಂಟಿಸಿ ಆರೋಪಿಗಳು ಸಾಗಾಟಕ್ಕೆ ಯತ್ನಿಸಿದ್ದರು. ತಮ್ಮ ಲಗೇಜ್ ಸಾಗಿಸಲು ಪ್ರಯಾಣಿಕರು ಈ ಟ್ರಾಲಿಗಳನ್ನು ಬಳಸುವ ಹಿನ್ನೆಲೆ ಅವರನ್ನು ಹಿಂಬಾಲಿಸಿ, ಟ್ರಾಲಿಗಳು ಕಸ್ಟಮ್ಸ್ ತಪಾಸಣಾ ಪ್ರದೇಶವನ್ನು ದಾಟಿದ ಬಳಿಕ ಚಿನ್ನವನ್ನು ಮರಳಿ ಪಡೆಯಲು ಆರೋಪಿಗಳು ಪ್ಲ್ಯಾನ್ ಮಾಡಿದ್ದರು. ಆ ಮೂಲಕ ಕಳ್ಳಸಾಗಣೆ ಮಾಡಿದ್ದ ಚಿನ್ನವನ್ನು ನೇರವಾಗಿ ಕಸ್ಟಮ್ಸ್ ತಪಾಸಣೆಗೆ ಒಳಪಡಿಸದೆ ಹೊರಗೆ ಸಾಗಿಸಲು ನೆರವಾಗುವ ಹೊಸ ಹಾಗೂ ವಿಶಿಷ್ಟ ಕಾರ್ಯವಿಧಾನಕ್ಕೆ ಮುಂದಾಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರು: ದೈವಿಕ ಕೃಪೆಯಿಂದ ಸಿಕ್ಕ ಚಿನ್ನ ಕೊಡುವುದಾಗಿ ನಂಬಿಸಿ ಅಕ್ಕಸಾಲಿಗನಿಗೆ ₹1.3 ಕೋಟಿ ವಂಚನೆ!
ಪರಿಶೀಲನೆ ವೇಳೆ ಎರಡು ಪ್ಯಾಕೆಟ್‌ಗಳಲ್ಲಿ ಅಡಗಿಸಿಟ್ಟಿದ್ದ ಒಟ್ಟು 12 ಚಿನ್ನದ ಬಿಸ್ಕತ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು 999.9 ಶುದ್ಧತೆಯ, ಅಂದರೆ 24 ಕ್ಯಾರಟ್‌ನ ಚಿನ್ನವಾಗಿದೆ. ಒಟ್ಟು 1,200.40 ಗ್ರಾಂ ತೂಕ ಹೊಂದಿರುವ ಇವುಗಳ ಮೌಲ್ಯ 1,78,88,360 ರೂಪಾಯಿಗಳಾಗಿವೆ. ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಯಾಣಿಕರ ಹೆಸರುಗಳನ್ನು DRI ಬಹಿರಂಗಪಡಿಸಿಲ್ಲ. ಆದರೆ ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ ಎಂದು ಮಾಹಿತಿ ನೀಡಿರೋದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:27 pm, Fri, 9 October 26




