ಬೆಂಗಳೂರು: ದೈವಿಕ ಕೃಪೆಯಿಂದ ಸಿಕ್ಕ ಚಿನ್ನ ಕೊಡುವುದಾಗಿ ನಂಬಿಸಿ ಅಕ್ಕಸಾಲಿಗನಿಗೆ ₹1.3 ಕೋಟಿ ವಂಚನೆ!
ದೇವರ ಕೃಪೆಯಿಂದ ದೊರೆತ ಚಿನ್ನವನ್ನು ನೀಡುವುದಾಗಿ ನಂಬಿಸಿ ಬೆಂಗಳೂರಿನ ಅಕ್ಕಸಾಲಿಗ ಸೆಲ್ವರಾಜ್ ಆಚಾರಿ ಅವರಿಗೆ ₹1.3 ಕೋಟಿ ವಂಚಿಸಿದ ಆರೋಪದಲ್ಲಿ ತೆಲಂಗಾಣ ಮೂಲದ ಭೂತಂ ಲಿಂಗಯ್ಯ ವಿರುದ್ಧ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಗ್ಯ ಸಮಸ್ಯೆಗಳಿಗೆ ಔಷಧ ನೀಡುವ ಮೂಲಕ ಕುಟುಂಬದ ವಿಶ್ವಾಸ ಗಳಿಸಿದ್ದ ಆರೋಪಿ ಅಸಲಿ ಚಿನ್ನದ ಮಾದರಿ ತೋರಿಸಿ ಹಣ ಪಡೆದಿದ್ದ.

ಮುಖ್ಯಾಂಶಗಳು
- ದೈವಿಕ ಚಿನ್ನದ ಹೆಸರಿನಲ್ಲಿ ₹1.3 ಕೋಟಿ ವಂಚನೆ
- ಅಸಲಿ ಚಿನ್ನದ ಮಾದರಿ ತೋರಿಸಿ ನಂಬಿಸಿದ ಆರೋಪಿ
- ಸಿಟಿ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲು
ಬೆಂಗಳೂರು, ಅಕ್ಟೋಬರ್ 9: ದೈವಿಕ ಕೃಪೆಯಿಂದ ದೊರೆತ ಚಿನ್ನವನ್ನು ನೀಡುವುದಾಗಿ ನಂಬಿಸಿ ಅಕ್ಕಸಾಲಿಗರೊಬ್ಬರಿಗೆ ಬರೋಬ್ಬರಿ 1.3 ಕೋಟಿ ರೂ. ವಂಚಿಸಿರುವ ಆರೋಪ ಬೆಂಗಳೂರಿನಲ್ಲಿ ಕೇಳಿಬಂದಿದೆ. ತೆಲಂಗಾಣ ಮೂಲದ ಭೂತಂ ಲಿಂಗಯ್ಯ ಎಂಬಾತನ ವಿರುದ್ಧ ವಂಚನೆ ಆರೋಪ ಕೇಳಿಬಂದಿದ್ದು, ಹಣ ಕಳೆದುಕೊಂಡ ಸೆಲ್ವರಾಜ್ ಆಚಾರಿ ಅವರು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
ಆರೋಗ್ಯ ಸಮಸ್ಯೆಗೆ ಔಷಧ ನೀಡಿ ನಂಬಿಕೆ ಗಳಿಸಿದ ಆರೋಪಿ
ಸೆಲ್ವರಾಜ್ ಆಚಾರಿ ಅವರ ಸೊಸೆಗೆ ಅಸ್ತಮಾ ಕಾಯಿಲೆಗೆ ಭೂತಂ ಲಿಂಗಯ್ಯ ಔಷಧ ನೀಡುತ್ತಿದ್ದ. ಬಳಿಕ ಸೆಲ್ವರಾಜ್ ಅವರ ಬೆನ್ನುನೋವು ಮತ್ತು ಮಂಡಿನೋವಿಗೂ ಔಷಧ ನೀಡಿದ್ದ. ಈ ಮೂಲಕ ಕುಟುಂಬದವರ ವಿಶ್ವಾಸ ಗಳಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಐದು ಕೆಜಿ ಚಿನ್ನವಿದೆ ಎಂದು ನಂಬಿಸಿದ್ದ ಆರೋಪಿ
ತನ್ನ ಬಳಿ ದೇವಿಯ ಕೃಪೆಯಿಂದ ದೊರೆತ ಚಿನ್ನವಿದ್ದು, ಅದನ್ನು ಖರೀದಿಸಿದರೆ ಸಂಪತ್ತು ಹೆಚ್ಚುವುದರ ಜತೆಗೆ ವ್ಯವಹಾರವೂ ವೃದ್ಧಿಯಾಗಲಿದೆ ಎಂದು ಭೂತಂ ಲಿಂಗಯ್ಯ ನಂಬಿಸಿದ್ದ. ತನ್ನ ಬಳಿ ಐದು ಕೆಜಿ ಚಿನ್ನವಿದೆ ಎಂದು ಹೇಳಿ, ಪರೀಕ್ಷೆಗಾಗಿ ಚಿನ್ನದ ಮಾದರಿಯೊಂದನ್ನು ನೀಡಿದ್ದ. ಅದನ್ನು ಪರೀಕ್ಷಿಸಿದಾಗ ಅಸಲಿ ಚಿನ್ನವೆಂದು ತಿಳಿದುಬಂದ ಹಿನ್ನೆಲೆಯಲ್ಲಿ ಸೆಲ್ವರಾಜ್ ಅವರು ಆರೋಪಿಯ ಮಾತನ್ನು ನಂಬಿದ್ದರು.
ಚಿನ್ನವನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಬೇಕು ಹಾಗೂ ಈ ವಿಚಾರವನ್ನು ಮನೆಯವರಿಗೆ ತಿಳಿಸಬಾರದು ಎಂದು ಆರೋಪಿ ಷರತ್ತು ವಿಧಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಎರಡೂವರೆ ವರ್ಷದಲ್ಲಿ ₹1.3 ಕೋಟಿ ಹಣ ಪಡೆದ ಆರೋಪ
ಹೀಗೆ ಸುಮಾರು ಎರಡೂವರೆ ವರ್ಷಗಳ ಅವಧಿಯಲ್ಲಿ ಸೆಲ್ವರಾಜ್ ಅವರಿಂದ ಹಂತ ಹಂತವಾಗಿ ₹1.3 ಕೋಟಿ ಹಣ ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಹಣ ಹೊಂದಿಸಲು ಸೆಲ್ವರಾಜ್ ಅವರು ಜಮೀನು ಹಾಗೂ ಕುಟುಂಬದವರ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದರು.
ಇದನ್ನೂ ಓದಿ: ಒಂದು ಬಳೆಯಿಂದ ಜೋಗತಿ ಕೊಲೆ ಕೇಸ್ ರಹಸ್ಯ ಭೇದಿಸಿದ ಪೊಲೀಸರು: ಸ್ಫೋಟಕ ಹೇಳಿಕೆ ನೀಡಿದ ಪ್ರಿಯಕರ
ತನ್ನ ತಂದೆಯ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಊರಿಗೆ ತೆರಳಿದ್ದ ಭೂತಂ ಲಿಂಗಯ್ಯ, ಬಳಿಕ ವಾಪಸ್ ಬಾರದೆ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಇದರಿಂದ ವಂಚನೆಗೆ ಒಳಗಾಗಿರುವ ಅನುಮಾನಗೊಂಡ ಸೆಲ್ವರಾಜ್ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಸಿಟಿ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




