
ನೆಲಮಂಗಲ, ಸೆಪ್ಟೆಂಬರ್ 18: ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲ ದಿನಗಳಿಂದ ಎಲ್ಲರ ವಾಟ್ಸಾಪ್ ಸ್ಟೇಟಸ್‌ನಲ್ಲಿ ರಾರಾಜಿಸುತ್ತಿದ್ದ ‘80ರ ದಶಕದ ಹಳೆಯ ಶೈಲಿಯ ಫೋಟೋ’ ಕ್ರೇಜ್ ಅನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ಹೊಸ ವಂಚನೆಯ ಜಾಲ ಬೀಸಿದ್ದಾರೆ. 80ರ ದಶಕದ ಲುಕ್‌ನಲ್ಲಿ ಫೋಟೋ ಎಡಿಟ್ ಮಾಡಲು ಹೋದ ವ್ಯಕ್ತಿಯೊಬ್ಬರ ಮೊಬೈಲ್ ಹ್ಯಾಕ್ ಮಾಡಿ, ಅಶ್ಲೀಲ ಫೋಟೋ ಕಳುಹಿಸಿ 50 ಸಾವಿರ ರೂ ಬೇಡಿಕೆಯಿಟ್ಟಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆ ನಿವಾಸಿ ವಿನೋದ್ (45) ವಂಚನೆಗೊಳಗಾದ ದುರ್ದೈವಿ. ಮೂರು ದಿನಗಳ ಹಿಂದೆ ಚಾಟ್ ಜಿಪಿಟಿ ಮಾದರಿಯ ತಂತ್ರಜ್ಞಾನದ ಮೂಲಕ ತಮ್ಮ ಫೋಟೋವನ್ನು 80ರ ದಶಕದ ಶೈಲಿಗೆ ಬದಲಾಯಿಸಲು ಹೋಗಿ ನಕಲಿ ಆ್ಯಪ್ ಒಂದನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ಆ್ಯಪ್ ಇನ್‌ಸ್ಟಾಲ್ ಆದ ಬೆನ್ನಲ್ಲೇ ಅವರ ಮೊಬೈಲ್ ಹಾಗೂ ಖಾತೆ ಹ್ಯಾಕ್ ಆಗಿದೆ.
ಮೊಬೈಲ್ ಹ್ಯಾಕ್ ಆದ ಕೇವಲ ಐದು ನಿಮಿಷಗಳಲ್ಲಿ ವಿನೋದ್ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ 50 ಸಾವಿರ ರೂ ನೀಡುವಂತೆ ನೇರವಾಗಿ ಬೆದರಿಕೆ ಹಾಕಿದ್ದಾನೆ. ಈ ವೇಳೆ ವಿನೋದ್ ಆತನಿಗೆ ಬೈದು ನಿರಾಕರಿಸಿದಾಗ, ‘ಹಣ ಕೊಡದಿದ್ದರೆ ನಿನ್ನ ಫೋಟೋವನ್ನು ಬೆತ್ತಲೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇನೆ’ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಆದರೂ ಹೆದರದ ವಿನೋದ್ ಕರೆಯನ್ನು ಕಟ್ ಮಾಡಿದ್ದಾರೆ. ಆದರೆ, ಕಾಲ್ ಕಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ವಂಚಕರು ವಿನೋದ್ ಫೋಟೋವನ್ನು ಬೆತ್ತಲೆಯಾಗಿ ಎಡಿಟ್ ಮಾಡಿ, ಅವರ ಸ್ನೇಹಿತರ ವಾಟ್ಸಾಪ್ ಗ್ರೂಪ್‌ಗಳಿಗೆ ಹರಿಬಿಟ್ಟಿದ್ದಾರೆ.
ಇದನ್ನೂ ಓದಿ: ವೈರಲ್ ಆಗ್ತಿದೆ 80ರ ದಶಕದ ಟ್ರೆಂಡ್; ಚಾಟ್ ಜಿಪಿಟಿಯಲ್ಲಿ ನಿಮ್ಮ ಫೋಟೊವನ್ನು ರೆಟ್ರೋ ಲುಕ್‌ಗೆ ಹೀಗೆ ಬದಲಾಯಿಸಿ
ಇನ್ನು ಘಟನೆಯಿಂದ ಕಂಗಾಲಾದ ವಿನೋದ್ ತಕ್ಷಣ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುವ ಇಂತಹ ವಿಷಯಗಳ ಬೆನ್ನತ್ತಿ, ಅಪರಿಚಿತ ಹಾಗೂ ನಕಲಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವ ಮುನ್ನ ಸಾರ್ವಜನಿಕರು ಎಚ್ಚರವಹಿಸುವುದು ಒಳ್ಳೆಯದು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:41 pm, Fri, 18 September 26