ತೆಪ್ಪೋತ್ಸವ ವೇಳೆ ತಪ್ಪಿದ ಅನಾಹುತ: ಆಯತಪ್ಪಿ ಕೆರೆಗೆ ಬಿದ್ದ ಮೂವರನ್ನು ರಕ್ಷಿಸಿದ ಸ್ಥಳೀಯರು
ಆಯತಪ್ಪಿ ಕೆರೆಗೆ ಬಿದ್ದ ಮೂವರನ್ನು ಅರ್ಚಕರು, ಸ್ಥಳೀಯರು ರಕ್ಷಿಸಿದ್ದಾರೆ. ತೆಪ್ಪೋತ್ಸವ ವೇಳೆ ನೂಕುನುಗ್ಗಲು ಉಂಟಾಗಿ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ.
ಬೆಂಗಳೂರು ಗ್ರಾಮಾಂತರ: ಕರೀತಿಮ್ಮರಾಯಸ್ವಾಮಿ ತೆಪ್ಪೋತ್ಸವ (Theppotsava) ವೇಳೆ ಕೆರೆಗೆ ಬಿದ್ದಿದ್ದ ಮೂವರ ರಕ್ಷಣೆ ಮಾಡಿದ್ದು, ಭಾರಿ ಅನಾಹುತ ತಪ್ಪಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗ್ರಾಮ ಟಿ.ಬೇಗೂರಿನಲ್ಲಿ ತೆಪ್ಪೋತ್ಸವ ವೇಳೆ ನಡೆದಿದೆ. ಆಯತಪ್ಪಿ ಕೆರೆಗೆ ಬಿದ್ದ ಮೂವರನ್ನು ಅರ್ಚಕರು, ಸ್ಥಳೀಯರು ರಕ್ಷಿಸಿದ್ದಾರೆ. ತೆಪ್ಪೋತ್ಸವ ವೇಳೆ ನೂಕುನುಗ್ಗಲು ಉಂಟಾಗಿ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ಬೆಂಗಳೂರಿನ ಸುಮ್ಮನಹಳ್ಳಿ ಬಳಿ ಗ್ಯಾಸ್ ಚಾಲಿತ ಕೊರಿಯರ್ ಲಾರಿ ಸಂಪೂರ್ಣ ಬೆಂಕಿಗಾಹುತಿಯಾಗಿರುವಂತಹ ಘಟನೆ ನಡೆದಿದ್ದು, ಅದೃಷ್ಟವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊರಿಯರ್ಗಳನ್ನು ಹೊತ್ತೊಯ್ಯುತ್ತಿದ್ದ ಗ್ಯಾಸ್ ಚಾಲಿತ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು ಅವಘಡ ಸಂಭವಿಸಿದೆ.
ಕಾರು ಚಾಲಕನ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ
ನೆಲಮಂಗಲ: ಕಾರು ಚಾಲಕನ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿರುವಂತಹ ಘಟನೆ ನೆಲಮಂಗಲದ ತೊಣಚಿಗುಪ್ಪೆಯ ರಾ. ಹೆದ್ದಾರಿ 48ರಲ್ಲಿ ನಡೆದಿದೆ. ಮಂಡ್ಯ ಮೂಲದ ರಘು, ಚನ್ನಕೇಶವ ಎಂಬುವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳಿಗೆ ನೆಲಮಂಗಲ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಪಘಾತದಲ್ಲಿ ಸ್ಕೂಟಿ ಸಂಪೂರ್ಣ ಜಖಂ ಆಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಲ್ವರು ಸುಲಿಗೆಕೋರರ ಬಂಧನ
ಬೆಳಗಾವಿ: ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ನಾಲ್ವರು ಆರೋಪಿಗಳನ್ನು ನಿಪ್ಪಾಣಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರದೀಪ್ ಕಾಂಬಳೆ(25), ಅವಧೂತ ಕೋಳಿ(25), ಅಕ್ಷಯ್ ಕೊಂಡಗೇರಿ(29), ಪಂಕಜ್ ಕೋಳಿ(25) ಎಂಬ ಆರೊಪಿಗಳನ್ನು ಬಂಧಿಸಿದ ಪೊಲಿಸರು, ಸುಲಿಗೆ ಮಾಡಿದ 75 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿ ಸಹಿತ ಕೃತ್ಯಕ್ಕೆ ಬಳಸಿದ 2 ಬೈಕ್ಗಳು, 4 ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದಾರೆ. ಏಪ್ರಿಲ್ನಲ್ಲಿ ದೋಂಡಿರಾಮ್ ವಿಷ್ಣು ಕಾಂಬಳೆ ಎಂಬುವರಿಂದ ಚಿನ್ನ-ಬೆಳ್ಳಿ ಕದ್ದು ಆರೋಪಿಗಳು ಪರಾರಿಯಾಗಿದ್ದರು.
ಬಸ್ ಹಾಗೂ ಬೈಕ್ ಮುಖಾಮುಖಿ; ಓರ್ವ ಸಾವು
ಬೆಳಗಾವಿ: ಸರ್ಕಾರಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ನಡೆದ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದ ಸಮೀಪ ನಡೆದಿದೆ. ಸತ್ತಿ ಮಾರ್ಗವಾಗಿ ಜಮಖಂಡಿಯಿಂದ ಅಥಣಿ ಕಡೆ ಬರುತ್ತಿರುವ ಬಸ್ಗೆ ಕೆಎಂಎಫ್ ಡೈರಿ ಮುಂದೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬೈಕ್ನಲ್ಲಿದ್ದ ಆನಂದ ಯಲ್ಲಪ್ಪ ವಟ್ಟನ್ನವರ (42) ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಂಜುನಾಥ್ ಗಂಗಪ್ಪ ನಿಡೋಣಿ (25) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೆರೆಗೆ ಇಳಿದಿದ್ದ ಇಬ್ಬರು ಬಾಲಕರ ಸಾವು
ಹಾಸನ: ಈಜು ಬಾರದಿದ್ದರೂ ಕೆರೆಗೆ ಇಳಿದಿದ್ದ ಇಬ್ಬರು ಬಾಲಕರ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಂಜುನಾಥಪುರದಲ್ಲಿ ನಡೆದಿದೆ. ದಸರಾ ರಜೆ ಹಿನ್ನೆಲೆ ಆಕಾಶ್(13), ಲೋಕೇಶ್(13) ಮತ್ತು ಇನ್ನೊಬ್ಬ ಬಾಲಕ ಶ್ರವಣಬೆಳಗೊಳ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥಪುರ ಗ್ರಾಮದ ಸಮೀಪವಿದ್ದ ಕೆರೆಯೊಂದರಲ್ಲಿ ಈಜಲು ಹೋಗಿದ್ದಾರೆ. ಆದರೆ ಈಜಲು ಗೊತ್ತಿಲ್ಲ ಬಾಲಕರ ಪೈಕಿ ಆಕಾಶ್ ಮತ್ತು ಲೋಕೇಶ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಮತ್ತೋರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
Published On - 5:01 pm, Sun, 9 October 22