ಅಗ್ರಿ ಗೋಲ್ಡ್ ಹೂಡಿಕೆದಾರರಲ್ಲಿ ಮತ್ತೆ ಚಿಗುರಿದ ಭರವಸೆ: ಆಂಧ್ರ ಸಿಐಡಿಯಿಂದ ಕರ್ನಾಟಕದಲ್ಲಿ ಬಾಂಡ್‌ಗಳ ಬೃಹತ್ ಪರಿಶೀಲನೆ

ಕೋಟ್ಯಾಂತರ ರೂಪಾಯಿ ಅಗ್ರಿ ಗೋಲ್ಡ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಸಿಐಡಿ ಅಧಿಕಾರಿಗಳು ಕರ್ನಾಟಕದ ಹೂಡಿಕೆದಾರರ ದಾಖಲೆಗಳ ಪರಿಶೀಲನೆ ಹಾಗೂ ಗಣತಿ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಎಸಿಪಿ ಕಚೇರಿ ಹಾಗೂ ಪೊಲೀಸ್ ಠಾಣೆಗಳ ಮುಂದೆ ಸಾವಿರಾರು ಹೂಡಿಕೆದಾರರು ವರ್ಷಗಳ ಹಿಂದೆ ಪಡೆದಿದ್ದ ಬಾಂಡ್‌ಗಳನ್ನು ಹಿಡಿದು ಸಾಲಿನಲ್ಲಿ ನಿಂತಿದ್ದಾರೆ!

ಅಗ್ರಿ ಗೋಲ್ಡ್ ಹೂಡಿಕೆದಾರರಲ್ಲಿ ಮತ್ತೆ ಚಿಗುರಿದ ಭರವಸೆ: ಆಂಧ್ರ ಸಿಐಡಿಯಿಂದ ಕರ್ನಾಟಕದಲ್ಲಿ ಬಾಂಡ್‌ಗಳ ಬೃಹತ್ ಪರಿಶೀಲನೆ
ಬಾಂಡ್‌ಗಳನ್ನು ಹಿಡಿದು ದೇವನಹಳ್ಳಿ ಪೊಲೀಸ್ ಠಾಣೆಯ ಮುಂದೆ ಸರದಿ ಸಾಲಿನಲ್ಲಿ ನಿಂತಿರುವ ಜನರು
Edited By:

Updated on: Nov 02, 2026 | 12:50 PM

ಮುಖ್ಯಾಂಶಗಳು

  • ಅಗ್ರಿ ಗೋಲ್ಡ್ ಬಾಂಡ್ ಪರಿಶೀಲನೆಗೆ ಆಂಧ್ರ ಸಿಐಡಿ ಚಾಲನೆ
  • ದೇವನಹಳ್ಳಿ ಠಾಣೆ ಮುಂದೆ ಹೂಡಿಕೆದಾರರ ಬೃಹತ್ ಕ್ಯೂ
  • 8 ಜಿಲ್ಲೆಗಳಲ್ಲಿ 15 ದಿನಗಳ ಕಾಲ ಸಿಐಡಿ ನೋಂದಣಿ

ದೇವನಹಳ್ಳಿ, ನವೆಂಬರ್ 2: ದಶಕದ ಹಿಂದೆ ಕಷ್ಟಪಟ್ಟು ದುಡಿದ ಹಣವನ್ನು ಉತ್ತಮ ಆದಾಯದ ನಿರೀಕ್ಷೆಯಲ್ಲಿ ಅಗ್ರಿ ಗೋಲ್ಡ್ ಕಂಪನಿಯಲ್ಲಿ ಹೂಡಿಕೆ ಮಾಡಿ ಕೈಸುಟ್ಟುಕೊಂಡಿದ್ದ ಹೂಡಿಕೆದಾರರಲ್ಲಿ ಇದೀಗ ಹಣ ವಾಪಸ್ ಸಿಗುವ ಹೊಸ ನಿರೀಕ್ಷೆಯೊಂದು ಚಿಗುರಿದೆ. ಆಂಧ್ರಪ್ರದೇಶ ಸಿಐಡಿ ಅಧಿಕಾರಿಗಳು ನೀಡಿರುವ ಕರೆಗೆ ಸ್ಪಂದಿಸಿರುವ ರಾಜ್ಯದ ಸಾವಿರಾರು ಹೂಡಿಕೆದಾರರು, ಮೂಲೆಯಲ್ಲಿ ಬಿದ್ದಿದ್ದ ತಮ್ಮ ಬಾಂಡ್‌ಗಳನ್ನು ಹಿಡಿದು ಬೆಳಿಗ್ಗೆಯಿಂದಲೇ ಪೊಲೀಸ್ ಠಾಣೆಗಳ ಮುಂದೆ ಜಮಾಯಿಸುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಎಸಿಪಿ ಕಚೇರಿ ಹಾಗೂ ಪೊಲೀಸ್ ಠಾಣೆಯ ಮುಂದೆ ನೂರಾರು ಹೂಡಿಕೆದಾರರು ತಮ್ಮ ಕೈಯಲ್ಲಿ ಬಾಂಡ್‌ಗಳನ್ನು ಹಿಡಿದು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡುಬಂದವು. ಅಗ್ರಿ ಗೋಲ್ಡ್ ಕಂಪನಿಯು ನಂಬಿಸಿ ವಂಚಿಸಿದ ಕಾರಣ ಕಟ್ಟಿದ ಅಸಲು ಮತ್ತು ಬಡ್ಡಿ ಎರಡನ್ನೂ ಕಳೆದುಕೊಂಡು ಜನರು ಕಚೇರಿಗಳಿಗೆ ಅಲೆದು ಬೇಸತ್ತಿದ್ದರು. ಇದೀಗ ಪ್ರಕರಣದ ತನಿಖೆ ನಡೆಸುತ್ತಿರುವ ಆಂಧ್ರಪ್ರದೇಶದ ಸಿಐಡಿ ತಂಡವು, ಕರ್ನಾಟಕದಲ್ಲೂ ಹೂಡಿಕೆ ಮಾಡಿರುವ ಸಾರ್ವಜನಿಕರ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದೆ.

8 ಜಿಲ್ಲೆಗಳಲ್ಲಿ 15 ದಿನಗಳ ಕಾಲ ನೋಂದಣಿ ಪ್ರಕ್ರಿಯೆ

ಆಂಧ್ರದ ಸಿಐಡಿ ಅಧಿಕಾರಿಗಳು ಖುದ್ದು ಕರ್ನಾಟಕಕ್ಕೆ ಆಗಮಿಸಿದ್ದು, ಬೆಂಗಳೂರು ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯ ಡಿಸಿಪಿ ವಿಭಾಗಗಳ ವ್ಯಾಪ್ತಿಯಲ್ಲಿ ವಿಶೇಷ ಕಚೇರಿಗಳನ್ನು ತೆರೆದಿದ್ದಾರೆ. ಅಲ್ಲಿನ ಸಿಬ್ಬಂದಿ ಹೂಡಿಕೆದಾರರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಬಾಂಡ್‌ಗಳ ವಿವರಗಳನ್ನು ಆಂಧ್ರ ಸಿಐಡಿ ಪೋರ್ಟಲ್‌ಗೆ ಅಪ್‌ಲೋಡ್ ಮಾಡುತ್ತಿದ್ದಾರೆ. ಮುಂದಿನ 15 ದಿನಗಳ ಕಾಲ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಒಟ್ಟು 8 ಜಿಲ್ಲೆಗಳಲ್ಲಿ ಈ ದಾಖಲೆಗಳ ಪರಿಶೀಲನೆ ಹಾಗೂ ನೋಂದಣಿ ಕಾರ್ಯ ನಡೆಯಲಿದೆ.

ಹಲವು ರಾಜ್ಯಗಳ ಲಕ್ಷಾಂತರ ಜನರಿಂದ ಹೂಡಿಕೆ

ಜನದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಟೋಕನ್ ವ್ಯವಸ್ಥೆ ಮಾಡಿದ್ದು, ಟೋಕನ್ ಮೂಲಕವೇ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳ ಲಕ್ಷಾಂತರ ಜನರು ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದರು.

ಇದನ್ನೂ ಓದಿ: ಆನ್‌ಲೈನ್‌ನಲ್ಲಿ ವಂಚನೆ? ಸಾಮಾನ್ಯ ಜನರ ನೆರವಿಗೆ ಬರುತ್ತವೆ ಗ್ರಾಹಕ ರಕ್ಷಣಾ ಕಾಯ್ದೆ 2019

ಪ್ರಸ್ತುತ ಸಿಐಡಿ ಆರಂಭಿಸಿರುವ ಈ ತನಿಖಾ ಪ್ರಕ್ರಿಯೆಯಿಂದಾಗಿ ದಶಕಗಳಿಂದ ನೊಂದಿದ್ದ ಹೂಡಿಕೆದಾರರಿಗೆ ತಮ್ಮ ಹಣ ಮರಳಿ ಸಿಗಬಹುದು ಎಂಬ ಆಶಾಭಾವನೆ ಮೂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನವೀನ್ ಕುಮಾರ್ ಟಿ.

ನವೀನ್ ಕುಮಾರ್ ಟಿ ರವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡದ ದೇವನಹಳ್ಳಿ, ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್​ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ಇವರು ಪದವಿ ಶಿಕ್ಷಣ ಮುಗಿದ ನಂತರ ಟಿವಿ9 ಕನ್ನಡದಲ್ಲಿ ವರದಿಗಾರರಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಹುದ್ದೆಯನ್ನು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಿದ್ದಾರೆ.

Read More
Loading...
Unable to load recommendations.
Follow Us