ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಏಕಾಏಕಿ ನೆಲಕ್ಕಪ್ಪಳಿಸಿದ ವಿಮಾನದ ಹಿಂಭಾಗ: ತಪ್ಪಿದ ಭಾರೀ ಅನಾಹುತ

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಅವಘಡವೊಂದು ತಪ್ಪಿದೆ. ಏರ್​​ಪೋರ್ಟ್​​​ನಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಏರ್ ಇಂಡಿಯಾ ವಿಮಾನವೊಂದರ ಹಿಂಭಾಗ ಏಕಾಏಕಿ ನೆಲಕ್ಕಪ್ಪಳಿಸಿದೆ. ಇದರಿಂದ ವಿಮಾನದ ಹಿಂಭಾಗಕ್ಕೆ ಹಾನಿಯಾಗಿದೆ ಎಂದು ವರದಿಯಾಗಿದೆ. ಅಷ್ಟಕ್ಕೂ ವಿಮಾನ ಈ ರೀತಿ ಆಗಲು ಕಾರಣವೇನು? ಅಧಿಕಾರಿಗಳು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.

ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಏಕಾಏಕಿ ನೆಲಕ್ಕಪ್ಪಳಿಸಿದ ವಿಮಾನದ ಹಿಂಭಾಗ: ತಪ್ಪಿದ ಭಾರೀ ಅನಾಹುತ
ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)
Image Credit source: tv9 kannada

Updated on: May 21, 2026 | 5:03 PM

ದೇವನಹಳ್ಳಿ, ಮೇ 21: ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ (Air India) ಸಂಸ್ಥೆಯ ವಿಮಾನವೊಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​​​ ವೇಳೆ ರನ್‌ವೇಗೆ ಅದರ ಹಿಂಭಾಗ ನೆಲಕ್ಕಪ್ಪಳಿಸಿದ (Tail Strike) ಘಟನೆ ನಡೆದಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಪ್ರಯಾಣಿಕರು ಸೇರಿದಂತೆ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿ ಆಗಿದೆ.

ಮುಖ್ಯಾಂಶಗಳು

  • ಕೆಂಪೇಗೌಡ ಏರ್​​ಪೋರ್ಟ್​​ನಲ್ಲಿ​ ಲ್ಯಾಂಡಿಂಗ್ ವೇಳೆ ನೆಲಕ್ಕಪ್ಪಳಿಸಿದ ವಿಮಾನ‌‌ದ ಹಿಂಭಾಗ
  • ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ
  • ತಪ್ಪಿದ ದುರಂತ, ಪ್ರಯಾಣಿಕರು ಜಸ್ಟ್​ ಮಿಸ್​

ಆಗಿದ್ದೇನು?

ಏರ್ ಇಂಡಿಯಾ ಸಂಸ್ಥೆಯ AI2651 ಸಂಖ್ಯೆಯ ವಿಮಾನ ಇಂದು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿತ್ತು. ಆದರೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​​ ವೇಳೆ ಉಂಟಾದ ತಾಂತ್ರಿಕ ಅಡಚಣೆಯಿಂದ ಅವಘಡ ಸಂಭವಿಸಿದೆ. ಎನ್​​​ಡಿ ಟಿವಿ ವರದಿ ಪ್ರಕಾರ, ಈ ವಿಮಾನಕ್ಕೂ ಮುನ್ನ ಸರಕು ಸಾಗಣೆ ವಿಮಾನವೊಂದು ಅದೇ ರನ್‌ವೇಯಿಂದ ಟೇಕ್‌ ಆಫ್ ಆಗಿತ್ತು. ಇದರಿಂದಾಗಿ ವಾತಾವರಣದಲ್ಲಿ ಉಂಟಾದ ಗಾಳಿಯ ತೀವ್ರ ವೇಗದಿಂದ ಏರ್ ಇಂಡಿಯಾ ವಿಮಾನದ ಸಮತೋಲನ ತಪ್ಪಿದೆ. ಹೀಗಿರುವಾಗ ಪೈಲಟ್‌ ವಿಮಾನವನ್ನು ಪುನಃ ಹಾರಾಟಕ್ಕೆ ಪ್ರಯತ್ನಿಸಿದ್ದಾರೆ. ಈ ವೇಳೆ ವಿಮಾನದ ಹಿಂಭಾಗ ರನ್‌ವೇಗೆ ಅಪ್ಪಳಿಸಿದೆ.

ಏರ್ ಇಂಡಿಯಾ ಸಂಸ್ಥೆಯ ಅಧಿಕಾರಿ ಹೇಳಿದ್ದಿಷ್ಟು

ಇನ್ನು ಅವಘಡದ ಮಧ್ಯೆ ತಕ್ಷಣ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್​ ಮಾಡಲಾಗಿದೆ. ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನ ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಈ ಬಗ್ಗೆ ಏರ್ ಇಂಡಿಯಾ ಸಂಸ್ಥೆಯ ಅಧಿಕಾರಿಯೊಬ್ಬರು ಮಾತನಾಡಿದ್ದು, ‘ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‘ಬೆಂಗಳೂರು ಸೋಲ್’ ಅನಾವರಣ: ಕಲಾಪ್ರೇಮಿಗಳ ಮನಗೆದ್ದ ಜೌಮ್ ಪ್ಲೆನ್ಸಾ ಶಿಲ್ಪಕಲೆ

ಇನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ತಾಂತ್ರಿಕ ಸಮಸ್ಯೆನಾ ಅಥವಾ ಪೈಲಟ್​ಗಳ ಎಡವಟ್ಟ ಎನ್ನುವ ಬಗ್ಗೆ ತನಿಖೆ ನಡೆಯಲಿದೆ. ತನಿಖೆ ಮುಗಿಯುವವರೆಗೆ ವಿಮಾನ ಚಲಾಯಿಸುತ್ತಿದ್ದ ಪೈಲಟ್‌ಗಳನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ.

ಪ್ರಯಾಣಿಕರಿಗೆ ಪರ್ಯಾಯ ವಿಮಾನದ ವ್ಯವಸ್ಥೆ

ಅಪಘಾತಕ್ಕೀಡಾದ ವಿಮಾನವನ್ನು ತಪಾಸಣೆಗೆ ಒಳಪಡಿಸಿರುವುದರಿಂದ, ಬೆಂಗಳೂರಿನಿಂದ ದೆಹಲಿಗೆ ಮರಳಬೇಕಾಗಿದ್ದ ವಿಮಾನದ ಸೇವೆಯನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಪ್ರಯಾಣಿಕರಿಗೆ ಏರ್ ಇಂಡಿಯಾ ಸಂಸ್ಥೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದೆ ಹಾಗೂ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:29 pm, Thu, 21 May 26

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us