ಬೆಂಗಳೂರು: ಒತ್ತುವರಿ ಮಾಡಿಕೊಂಡಿದ್ದವರ ವಿರುದ್ಧ ದಾಳಿ, ಕೋಟ್ಯಂತರ ರೂಪಾಯಿ ಮೊತ್ತದ ಆಸ್ತಿ ಜಪ್ತಿ

ಅಧಿಕಾರಿಗಳು ಒತ್ತುವರಿದಾರರ ವಿರುದ್ಧ ದಾಳಿ ಮುಂದುವರಿಸಿದ್ದು, ಜೆ.ಪಿ.ನಗರದಲ್ಲಿ ₹ 30 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ.

ಬೆಂಗಳೂರು: ಒತ್ತುವರಿ ಮಾಡಿಕೊಂಡಿದ್ದವರ ವಿರುದ್ಧ ದಾಳಿ, ಕೋಟ್ಯಂತರ ರೂಪಾಯಿ ಮೊತ್ತದ ಆಸ್ತಿ ಜಪ್ತಿ
ಬಿಡಿಎ ಅಭಿವೃದ್ಧಿಪಡಿಸಿರುವ ಲೇಔಟ್ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 22, 2022 | 12:15 PM

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (Bangalore Development Authority – BDA) ವ್ಯಾಪ್ತಿಯಲ್ಲಿ ನಡೆದಿರುವ ಭೂ ಒತ್ತುವರಿ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅಧಿಕಾರಿಗಳು ಒತ್ತುವರಿದಾರರ ವಿರುದ್ಧ ದಾಳಿ ಮುಂದುವರಿಸಿದ್ದು, ಜೆ.ಪಿ.ನಗರದಲ್ಲಿ ₹ 30 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ. ಜೆ.ಪಿ.ನಗರ 9ನೇ ಹಂತ, 1ನೇ ಬ್ಲಾಕ್​ನ ಆಲಹಳ್ಳಿಯಲ್ಲಿ ಸರ್ವೆ ನಂಬರ್ 4/1ರಲ್ಲಿ 22 ಗುಂಟೆ ಜಾಗವನ್ನು ಬಿಡಿಎ ಮತ್ತೆ ತನ್ನ ವಶಕ್ಕೆ ತೆಗೆದುಕೊಂಡಿದೆ. ಈ ಜಾಗದಲ್ಲಿ ಕಳೆದ 10 ವರ್ಷಗಳಿಂದ ತಾತ್ಕಾಲಿಕ್ ಶೆಡ್​ಗಳನ್ನು ನಿರ್ಮಿಸಿಕೊಂಡು ಹಲವರು ವ್ಯಾಪಾರ ಮಾಡುತ್ತಿದ್ದರು. ಪೊಲೀಸ್ ಬಂದೋಬಸ್ತ್​ನಲ್ಲಿ 6 ತಾತ್ಕಾಲಿಕ ಶೆಡ್​​ಗಳನ್ನು ತೆರವುಗೊಳಿಸಲಾಯಿತು. ಇಂಥ ಶೆಡ್​ಗಳಲ್ಲಿ ಇರುವವರು ನಿರಾಪೇಕ್ಷಣಾ ಪತ್ರ ನೀಡಬೇಕು. ನಕಲಿ ಎನ್​ಒಸಿ ಕೊಟ್ಟರೆ, ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಬಿಡಿಎ ಎಚ್ಚರಿಸಿದೆ.

ಬಿಡಿಎ ಅಧಿಕಾರಿಗಳ ಅಮಾನತಿಗೆ ಸಿಎಂ ಸೂಚನೆ

ನಿಯಮ ಉಲ್ಲಂಘನೆಯಲ್ಲಿ ಶಾಮೀಲಾಗಿರುವವರು ಹಾಗೂ ಅಕ್ರಮ ಎಸಗಿರುವ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಡಾ ಶಿವರಾಮ ಕಾರಂತ ಬಡಾವಣೆ ಅಧಿಸೂಚನೆ ಪ್ರಕರಣದ ಬಗ್ಗೆ ಇದೀಗ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ. ಬಡಾವಣೆಗಾಗಿ ಕಟ್ಟಡಗಳು ಇರುವ ಪ್ರದೇಶವನ್ನೂ ಒಳಗೊಳ್ಳುವಂತೆ ಭೂಸ್ವಾಧೀನ ಅಧಿಸೂಚನೆ ಹೊರಡಿಸಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸಿಎಂ ಸೂಚಿಸಿದ್ದಾರೆ.

245 ಎಕರೆಯನ್ನು ಕೈಬಿಟ್ಟಿರುವ ಬಗ್ಗೆ ಸುಪ್ರೀಂಕೋರ್ಟ್ ಪರಿಶೀಲಿಸಿತ್ತು. ಹೆಚ್ಚುವರಿಯಾಗಿ 245 ಎಕರೆ ಪ್ರದೇಶ ಭೂ ಸ್ವಾಧೀನಪಡಿಸಿಕೊಳ್ಳಲು ಆಗಸ್ಟ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಎರಡು ತಿಂಗಳ ನಂತರ ಅಂತಿಮ ಅಧಿಸೂಚನೆ ಹೊರಡಿಸಲು ಸಿದ್ಧಪಡಿಸಲಾಗಿದ್ದ ಕರಡಿನಲ್ಲಿ 52 ಎಕರೆಯನ್ನು ಕೈಬಿಡಲಾಗಿತ್ತು. ಈ ಅಂಶವು ಮುಖ್ಯಮಂತ್ರಿಯವರ ಸಹಿಗೆಂದು ಕಳಿಸಿದ್ದ ಕರಡು ಪ್ರತಿಯಲ್ಲಿ ಪತ್ತೆಯಾಗಿತ್ತು.

ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ, ಹೆಸರಘಟ್ಟ ಮತ್ತು ಯಲಹಂಕ ಹೋಬಳಿಯ 52 ಎಕರೆ ಡಿನೋಟಿಫಿಕೇಷನ್‌ಗೆ ಕರಡು ಸಿದ್ಧವಾಗಿತ್ತು. 193 ಎಕರೆ ಪ್ರದೇಶದ ಸ್ವಾಧೀನಕ್ಕೆ ನಿರ್ಧರಿಸಲಾಗಿತ್ತು. ‘ಪ್ರಾಥಮಿಕ ಅಧಿಸೂಚನೆ ಮಾಡುವಾಗ ಈ ಕಟ್ಟಡಗಳು ಗಮನಕ್ಕೆ ಬಂದಿರಲಿಲ್ಲವೇ ಎಂದು ಸಿಎಂ ಪ್ರಶ್ನಿಸಿದ್ದರು. ಎಲ್ಲ 245 ಎಕರೆ ಪ್ರದೇಶವೂ ಅಂತಿಮ ಅಧಿಸೂಚನೆಯಲ್ಲಿರಲಿ’ ಎಂದು ಮುಖ್ಯಮಂತ್ರಿ ಸೂಚಿಸಿದ್ದರು.

ಕಟ್ಟಡಗಳು ಇರುವ ಪ್ರದೇಶವನ್ನು ಭೂಸ್ವಾಧೀನದ ಅಧಿಸೂಚನೆಗೆ ಸೇರಿಸಿರುವುದು ಅಧಿಕಾರಿಗಳ ಬೇಜವಾಬ್ದಾರಿಯಾಗಿದೆ. ಅಂಥವರನ್ನು ಅಮಾನತು ಮಾಡಬೇಕು ಎಂದು ಬಿಡಿಎಗೆ ಬರೆದಿದ್ದ ಪತ್ರದಲ್ಲಿ ಸಿಎಂ ಸೂಚಿಸಿದ್ದರು. ಈ ಸಂಬಂಧ ಬಿಡಿಎ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ಅಧಿಸೂಚನೆಯಲ್ಲಿರುವ ಪ್ರದೇಶಗಳ ಕಟ್ಟಡಗಳನ್ನು ಕ್ರಮಬದ್ಧಗೊಳಿಸಲು ಮುಂದಾಗಿದೆ ಎಂದು ಮೂಲಗಳು ಹೇಳಿವೆ.

Published On - 12:15 pm, Tue, 22 November 22