ಮೊಮ್ಮಗನ ಎದುರೇ ಅಜ್ಜಿಯನ್ನ ಕೊಡಲಿಯಿಂದ ಕೊಚ್ಚಿ ಕೊಂದಿದ್ದ ಆರೋಪಿ ನೇಣಿಗೆ ಶರಣು

ಬೆಂಗಳೂರಿನ ಕುದುರೆಗೆರೆಯಲ್ಲಿ ಇತ್ತೀಚೆಗೆ ವೃದ್ಧ ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದ ಆರೋಪಿ ದೊಡ್ಡಬಳ್ಳಾಪುರ ತಾಲೂಕಿನ ಕೊಳೂರು ಗ್ರಾಮದ ತನ್ನ ಅಕ್ಕನ ತೋಟದಲ್ಲಿ ನೇಣಿಗೆ ಶರಣಾಗಿರುವಂತಹ ಘಟನೆ ನಡೆದಿದೆ. ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯ ಬಂಧನಕ್ಕೆ ಪೊಲೀಸರು ಶೋಧ ನಡೆಸಿದ್ದರು. ಆದರೆ ಅಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೊಮ್ಮಗನ ಎದುರೇ ಅಜ್ಜಿಯನ್ನ ಕೊಡಲಿಯಿಂದ ಕೊಚ್ಚಿ ಕೊಂದಿದ್ದ ಆರೋಪಿ ನೇಣಿಗೆ ಶರಣು
ಕೊಲೆಯಾದ ವೃದ್ಧೆ, ವೀರಭದ್ರಯ್ಯ

Updated on: Jan 14, 2026 | 3:15 PM

ನೆಲಮಂಗಲ, ಜನವರಿ 14: ಕೊಡಲಿಯಿಂದ ಕೊಚ್ಚಿ ವೃದ್ಧ ಮಹಿಳೆಯನ್ನು ಕೊಂದಿದ್ದ (Murder) ಆರೋಪಿ ನೇಣಿಗೆ ಶರಣಾಗಿರುವಂತಹ (Suicide) ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ದಾಕ್ಷಾಯಿಣಮ್ಮ(55) ಕೊಂದು ಪರಾರಿಯಾಗಿದ್ದ ವೀರಭದ್ರಯ್ಯ(60) ಆತ್ಮಹತ್ಯೆ ಮಾಡಿಕೊಂಡಿರುವ ಆರೋಪಿ. ಸದ್ಯ ಸ್ಥಳಕ್ಕೆ‌ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕಳೆದ ಶನಿವಾರದಂದು ಮಟಮಟ ಮಧ್ಯಾಹ್ನ ದಾಕ್ಷಾಯಿಣಮ್ಮನನ್ನು ಆರೋಪಿ ವೀರಭದ್ರ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರಿಂದ ಹುಡುಕಾಟ ನಡೆಸಲಾಗುತ್ತಿತ್ತು.

ಇದನ್ನೂ ಓದಿ: ಮೊಮ್ಮಗನ ಎದುರಲ್ಲೇ ಅಜ್ಜಿಯನ್ನ ಕೊಡಲಿಯಿಂದ ಕೊಚ್ಚಿ ಕೊಂದ ಸಂಬಂಧಿ?

ನಿನ್ನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊಳೂರು ಗ್ರಾಮದ ಅಕ್ಕನ ಮನೆಗೆ ತಡರಾತ್ರಿ ಬಂದಿದ್ದ. ಅಕ್ಕನನ್ನ ಮಾತನಾಡಿಸಿಕೊಂಡು ತೋಟಕ್ಕೆ ಹೋದವನು ಮರಕ್ಕೆ‌ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಹೊರಗಡೆ ಹೋದವನು ವಾಪಸ್ ಮನೆಗೆ ಬಾರದ ಕಾರಣ ಎಲ್ಲೆಡೆ ಹುಡುಕಾಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ನಡೆದದ್ದೇನು?

ಬೆಂಗಳೂರು ವಾಯುವ್ಯ ವಿಭಾಗ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕುದುರೆಗೆರೆ ಕಾಲೋನಿಯಲ್ಲಿ ನಿವಾಸಿ ದಾಕ್ಷಾಯಿಣಮ್ಮ 8 ವರ್ಷದ ಹಿಂದೆ ಪತಿ ನಾಗರಾಜ್​​​ರನ್ನು ಕಳೆದುಕೊಂಡಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನ ಮದುವೆ ಕೂಡ ಮಾಡಿದ್ದಾರೆ. ಹಣಕಾಸಿನ ವ್ಯವಹಾರ ಹಾಗೂ ಮನೆ ಬಾಡಿಗೆ ಹಣದಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ದಾಕ್ಷಾಯಿಣಮ್ಮ ಮಾವ ವೀರಭದ್ರನ ಜೊತೆ ಹಣಕಾಸಿನ ವ್ಯವಹಾರ ಹಾಗೂ ಭೂ ವ್ಯಾಜ್ಯ ಸಂಬಂಧ ಇಬ್ಬರ ಮಧ್ಯೆ ಜಗಳವಾಗಿತ್ತು.

ಇದನ್ನೂ ಓದಿ: ತಾಯಿಗೆ ಹೊಡೆದ ಎಂದು ಮಲತಂದೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಮಗ

ಅದೊಂದು ದಿನ ತಮ್ಮ ಮೊಮ್ಮಗನನ್ನು ಶಾಲೆಯಿಂದ ಕರೆತರಲು ಹೊರಟಿದ್ದಾರೆ. ಈ ವೇಳೆ ಬೈಕ್​ನಲ್ಲಿ ಬಂದ ವ್ಯಕ್ತಿಯೋರ್ವ ನಡು ರಸ್ತೆಯಲ್ಲಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಅಷ್ಟೇ ಅಲ್ಲದರೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಆದರೆ ಅಷ್ಟರಲ್ಲಿ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವರದಿ: ಮಂಜುನಾಥ್ ಟಿವಿ9 ನೆಲಮಂಗಲ

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:14 pm, Wed, 14 January 26