
ದೇವನಹಳ್ಳಿ, ಏಪ್ರಿಲ್ 17: ಇಷ್ಟು ದಿನ ಸೈಲೆಂಟ್ ಆಗಿದ್ದ ಸರಗಳ್ಳರ (chain snatchers) ಹಾವಳಿ ಇದೀಗ ಮತ್ತೆ ಸಿಲಿಕಾನ್ ಸಿಟಿ (bangaluru) ಹೊರವಲಯದಲ್ಲಿ ಆಕ್ಟೀವ್ ಆಗಿದೆ. ಕಳ್ಳರು ಒಂದು ತಿಂಗಳಲ್ಲೇ ನಾಲ್ಕು ಕಡೆ ತಮ್ಮ ಕೈ ಚಳಕ ತೋರಿಸಿ ಪರಾರಿ ಆಗಿದ್ದಾರೆ. ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಹೊತ್ತಿನಲ್ಲೇ ಗ್ರಾಮೀಣ ಭಾಗದಲ್ಲಿ ಸರಗಳ್ಳರ ಕಾಟ ಹೆಚ್ಚಾಗಿರುವುದು ಮಹಿಳೆಯರನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಒಬ್ಬಂಟಿಯಾಗಿ ಹೊರಗಡೆ ಬರಲು ಯೋಚನೆ ಮಾಡುವಂತಹ ಸ್ಥಿತಿ ತಂದೊಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಈಸ್ತೂರು ನಿವಾಸಿ ರಂಗಮ್ಮ, ಕುತ್ತಿಗೆಯಲ್ಲಿದ್ದ ಸರ ಅನ್ಯಾಯವಾಗಿ ಹೋಯ್ತಲ್ಲ ಅಂತ ಕಣ್ಣೀರು ಹಾಕಿದ್ದಾರೆ. ಮಗಳು ಮತ್ತು ಮೊಮ್ಮಕ್ಕಳು ಮನೆಗೆ ಬಂದಿದ್ದರು ಅಂತ ಕುಟುಂಬ ಸಮೇತ ವೃದ್ಧೆ ಪಕ್ಕದ ಮಲ್ಲೋಹಳ್ಳಿ ಗ್ರಾಮದಲ್ಲಿ ನಡೆದ ರಂಗನಾಥಸ್ವಾಮಿ ಜಾತ್ರೆಗೆ ತೆರಳಿದ್ದರು. ಸಂಜೆ ಮನೆಗೆ ವಾಪಸ್ ಆಗಿದ್ದಾರೆ. ಆದರೆ ಜಾತ್ರೆಯಲ್ಲಿ ನಗು ನಗುತ್ತಾ ಮಗಳು ಮೊಮ್ಮಕ್ಕಳ ಜೊತೆ ವೃದ್ದೆ ಇದ್ದ ವೇಳೆಯಲ್ಲಿ ವೃದ್ದೆಯ ಕುತ್ತಿಗೆಯೆಲ್ಲಿದ್ದ ಸರವನ್ನು ಖದೀಮರು ಎಗರಿಸಿದ್ದಾರೆ.
ಇದನ್ನೂ ಓದಿ: ದೇಶಕ್ಕೆ ಮಾದರಿಯಾದ ಬೆಂಗಳೂರಿನ ಅದೊಂದು ಗ್ರಾಮ: ಬೋರ್ವೆಲ್ಗೂ ಸಿಕ್ತು ಸೋಲಾರ್ ಪವರ್
ಇನ್ನೂ ಮನೆಗೆ ಬಂದು ವೃದ್ದೆಗೆ ಕುತ್ತಿಗೆಯಲ್ಲಿ ಕೇವಲ ದಾರ ಮಾತ್ರ ಇರೋದು ಕಂಡು ಬಂದಿದ್ದು, ಕೂಡಲೇ ಜಾತ್ರೆಗೆ ಹೋಗೆ ಎಲ್ಲೆಡೆ ಹುಡುಕಾಡಿದ್ದಾರೆ. ಆದರೆ ಎಷ್ಟೇ ಹುಡುಕಾಡಿದರು ಎಲ್ಲೂ ಮಾಂಗಲ್ಯ ಸರ ಪತ್ತೆ ಆಗಿಲ್ಲ. ಸರಗಳ್ಳರು ಚೈನ್ ಕಟ್ ಮಾಡಿ ನೂಕು ನುಗ್ಗಲಲ್ಲಿ ಎಗಿರಿಸಿರುವುದು ಗೊತ್ತಾಗಿದೆ. ಹೀಗಾಗಿ ಕೂಡಲೇ ದೊಡ್ಡಬೆಳೆವಂಗಲ ಪೊಲೀಸ್ ಠಾಣೆಗೆ ಬಂದ ವೃದ್ದೆ ಕುತ್ತಿಗೆಯಲ್ಲಿದ್ದ 50 ಗ್ರಾಂ ತೂಕರ ಚಿನ್ನದ ಮಾಂಗಲ್ಯ ಸರ ಕಳ್ಳತನವಾಗಿದ್ದು, ಹುಡುಕಿಕೊಡಿ ಅಂತ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ.
ಕಷ್ಟಪಟ್ಟು ಕೂಲಿ ಮಾಡಿ ಒಂದೊಂದು ರೂ. ಕೂಡಿಟ್ಟು ತೆಗೆದುಕೊಂಡಿದ್ದ ಸರ ಕಳ್ಳರ ಪಾಲಾಗಿದ್ದನ್ನ ಕಂಡು ವೃದ್ದೆಯ ಆಕ್ರಂದನ ಮುಗಿಲು ಮುಟ್ಟಿತ್ತು. ಅಲ್ಲದೆ ಇದೇ ರೀತಿ ಜಾತ್ರೆಯಲ್ಲಿ ಬೇರೆಡೆಯಿಂದ ಬಂದಿದ್ದ ಸಾಕಷ್ಟು ಮಹಿಳೆಯರ ಕುತ್ತಿಗೆಯಲ್ಲಿನ ಸರ ಮತ್ತು ಚಿನ್ನದ ಓಲೆಗಳನ್ನ ಖದೀಮರು ಎಗರಿಸಿದ್ದು, ಈ ಬಗ್ಗೆ ಮಹಿಳೆಯರು ದೂರು ದಾಖಲಿಸಿದ್ದಾರೆ.
ಇನ್ನೂ ಕೇವಲ ಜಾತ್ರೆಯಲ್ಲಿ ಮಾತ್ರವಲ್ಲದೇ ದೊಡ್ಡಬಳ್ಳಾಪುರ ದೆವನಹಳ್ಳಿ ಮತ್ತು ಬಾಗಲೂರು ಬಾಗದಲ್ಲು ಇದೇ ರೀತಿ ಜಾತ್ರೆ ಹಾಗೂ ಒಂಟಿ ಮಹಿಳೆಯರ ಬಳಿ ಖದೀಮರು ಚಿನ್ನದ ಸರಗಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಕಳ್ಳರ ಹಾವಳಿಗೆ ಬ್ರೆಕ್ ಹಾಕುವಂತೆ ಗ್ರಾಮೀಣ ಭಾಗದ ಮಹಿಳೆಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು 2ನೇ ಏರ್ಪೋರ್ಟ್: ಬಿಡದಿ ಔಟ್, ಈ ಎರಡು ಸ್ಥಳಗಳ ಬಗ್ಗೆ ಚರ್ಚೆ, ಜಟಾಪಟಿ!
ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಹೊತ್ತಿನಲ್ಲಿ ಜಾತ್ರೆ ಮತ್ತು ಹಬ್ಬ ಹರಿದಿನಗಳನ್ನ ಟಾರ್ಗೆಟ್ ಮಾಡಿಕೊಂಡ ಖದೀಮರು ಗ್ರಾಮೀಣ ಭಾಗದಲ್ಲಿ ಕೈಚಳಕ ತೋರಿಸುತ್ತಿರುವುದು ಮಹಿಳೆಯರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಪೊಲೀಸರು ಆರೋಪಿಗಳ ಎಡೆಮುರಿಕಟ್ಟುವ ಮೂಲಕ ಮಹಿಳೆಯರ ಆತಂಕ ದೂರ ಮಾಡುವ ಕೆಲಸ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.