ಬೆಂಗಳೂರು ಹೊರವಲಯದಲ್ಲೇ ಅಸ್ಪೃಶ್ಯತೆ ಜೀವಂತ: ತಹಶಿಲ್ದಾರ್​ ಸಮ್ಮುಖದಲ್ಲಿ ದೇವಸ್ಥಾನ ಪ್ರವೇಶಿಸಿದ ದಲಿತರು

ಸರ್ಕಾರ ಅಸ್ಪೃಶ್ಯತೆ ಹೋಗಲಾಡಿಸಲು ಕಠಿಣ ಕಾನೂನು ಜಾರಿ ಮಾಡಿದ್ದು ಅಧಿಕಾರಿಗಳನ್ನು ಸಹ ಅಲರ್ಟ್ ಮಾಡುತ್ತಲೇ ಇರುತ್ತದೆ. ಆದರೆ, ಬೆಂಗಳೂರು ಹೊರವಲಯದಲ್ಲಿನ ಗ್ರಾಮವೊಂದರಲ್ಲಿ ಅನಿಷ್ಠ ಪದ್ಧತಿ ಮಾತ್ರ ಇನ್ನೂ ಜೀವಂತವಾಗಿದೆ. ಏನಿದು ಪ್ರಕರಣ? ಏನದು ಅನಿಷ್ಠ ಪದ್ಧತಿ? ಘಟನೆ ನಡೆದಿರುವುದು ಎಲ್ಲಿ? ಇಲ್ಲಿದೆ ವಿವರ

ಬೆಂಗಳೂರು ಹೊರವಲಯದಲ್ಲೇ ಅಸ್ಪೃಶ್ಯತೆ ಜೀವಂತ: ತಹಶಿಲ್ದಾರ್​ ಸಮ್ಮುಖದಲ್ಲಿ ದೇವಸ್ಥಾನ ಪ್ರವೇಶಿಸಿದ ದಲಿತರು
ದೇವಸ್ಥಾನದ ಒಳಗೆ ಪ್ರವೇಶಿಸಿದ ದಲಿತರು
Edited By:

Updated on: Jul 05, 2025 | 10:13 PM

ದೇವನಹಳ್ಳಿ, ಜುಲೈ 05: ಬೆಂಗಳೂರು ಗ್ರಾಮಾಂತರ (Bangalore Rural) ಜಿಲ್ಲೆಯ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಗೂಳ್ಯ ಗ್ರಾಮದ ಹೆಗಡ್ಲಮ್ಮ ದೇವಾಲಯಕ್ಕೆ ದಲಿತರು ದೇವರಿಗೆ ಪೂಜೆ ಮಾಡಿಸಲು ಬಂದರೇ, ಅವರನ್ನು ದೇವಾಲಯದ ಒಳಗಡೆ ಬಿಡದೆ ಬಾಗಿಲಿಂದ ಹೊರಗಡೆ ನಿಲ್ಲಿಸಿ ಆರತಿ ನೀಡಲಾಗುತ್ತಿತ್ತು. ಅಲ್ಲದೆ, ಗ್ರಾಮಸ್ಥರು ಜಾತ್ರೆ, ಹಬ್ಬ-ಹರಿದಿನ ಸಮಯದಲ್ಲಿಯೂ ದೇವಾಲಯಕ್ಕೆ ದಲಿತರಿಗೆ ಪ್ರವೇಶ ನೀಡದೆ ಹೊರಗಡೆ ನಿಲ್ಲಿಸಿದ್ದರಂತೆ. ಹೀಗಾಗಿ ಗ್ರಾಮದಲ್ಲಿನ ಅಸ್ಪೃಶ್ಯತೆ ಬಗ್ಗೆ ನೊಂದ ದಲಿತ ಮಹಿಳೆಯೊಬ್ಬರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ವಿಚಾರ ತಿಳಿದು ಗ್ರಾಮಕ್ಕೆ ದೌಡಾಯಿಸಿದ ಅಧಿಕಾರಿಗಳು ದೂರು ನೀಡಿದ್ದ ದಲಿತ ಮಹಿಳೆ ಸಮ್ಮುಖದಲ್ಲೇ ಗ್ರಾಮಸ್ಥರ ಜೊತೆ ಸೇರಿ ಸಭೆ ನಡೆಸಿ ಅಸ್ಪೃಶ್ಯತೆ ಬಗ್ಗೆ ಹಾಗೂ ಕಾನೂನಿಗೆ ಬಗ್ಗೆ ಹರಿವು ಮೂಡಿಸಿ ಜನರಲ್ಲಿ ಜಾಗೃತಿ ಮೂಡಿಸಿದರು. ದೊಡ್ಡಬಳ್ಳಾಪುರ ತಹಶಿಲ್ದಾರ್ ವಿದ್ಯಾ ರಾಥೋಡ್, ಡಿವೈಎಸ್ಪಿ ರವಿ, ಇನ್ಸ್ಪೆಕ್ಟರ್ ಸಾಧಿಕ್ ಪಾಷ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಜಾತಿ ಭೇದ, ಮೇಲು ಕೀಳು ಅಂತ ನೋಡಬಾರದು ಅಂತ ಬುದ್ದಿವಾದ ಹೇಳಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಅಲ್ಲದೆ, ಅಧಿಕಾರಿಗಳ ಸಮ್ಮುಖದಲ್ಲೇ ಗ್ರಾಮದ ಮುಖಂಡರು, ದಲಿತರು ಸೇರಿದಂತೆ ಎಲ್ಲ ಜನಾಂಗದವರು ಒಟ್ಟಾಗಿ ದೇವಸ್ಥಾನದ ಒಳಗಡೆ ಪ್ರವೇಶ ಮಾಡಿ ದೇವರಿಗೆ ಪೂಜೆ ಸಲ್ಲಿಸಿದರು. ಮತ್ತೊಮ್ಮೆ ಇಂತಹ ಅನಿಷ್ಠ ಪದ್ಧತಿಯನ್ನು ಮುಂದುವರೆಸದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.

ಇದನ್ನೂ ಓದಿ
ಹಳದಿ ಲೈನ್ ಮೆಟ್ರೋ ಮತ್ತಷ್ಟು ವಿಳಂಬ: BMRCL​ಗೆ ತೇಜಸ್ವಿಸೂರ್ಯ ಪ್ರಶ್ನೆ
ನಡೆದುಕೊಂಡು ಆಸ್ಪತ್ರೆಗೆ ಬಂದ ಕೆಲವೇ ಕ್ಷಣಗಳಲ್ಲಿ ವ್ಯಕ್ತಿಯ ಬ್ರೈನ್ ಡೆಡ್!
ನೆಲಮಂಗಲ: ಮನೆಯಲ್ಲಿದ್ದ 10-12 ರೂ. ಮೌಲ್ಯದ ಚಿನ್ನಾಭರಣ ಕಳ್ಳತನ
ಮತ್ತೆ ಮೈಕ್ರೋಫೈನಾನ್ಸ್ ಕಿರಿಕಿರಿ, ವಿಡಿಯೋ ಮಾಡಿಟ್ಟು ವ್ಯಕ್ತಿ ಆತ್ಮಹತ್ಯೆ

ಇದನ್ನೂ ಓದಿ: ಗಾಣಿಗ ಮಠಕ್ಕೆ ಅನುದಾನ ಬಿಡುಗಡೆಗೆ ಕಮಿಷನ್​ ಕೇಳಿದ ಸಚಿವ: ಸ್ವಾಮೀಜಿ ಗಂಭೀರ ಆರೋಪ

ಅಧಿಕಾರಿಗಳ ಮನವೊಲಿಕೆ ನಂತರವೂ ಕೂಡ ಅರ್ಚಕರು ಮಾತ್ರ ಇನ್ಮುಂದೆ ಮುಂದೆ ತಾನು ದೇವಸ್ಥಾನದಲ್ಲಿ ಪೂಜೆ ಮಾಡಲ್ಲ, ದೇವಸ್ಥಾನವನ್ನು ನಿರ್ವಹಣೆ ಮಾಡಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಹೊಸ ಅರ್ಚಕರನ್ನು ಆಯ್ಕೆ ಮಾಡುವ ನಿರ್ಧಾರಕ್ಕೆ ಬಂದಿದೆ. ದೇವಸ್ಥಾನದ ಒಳಗಡೆ ಪ್ರವೇಶಿಸಿದ ದಲಿತರಿಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ದೇವರಿಗೆ ಪೂಜೆ ಮಾಡಿ ಆರತಿ ನೀಡಿದರು.

ಒಟ್ಟಾರೆಯಾಗಿ ದಶಕಗಳು ಕಳೆದರೂ, ತಂತ್ರಜ್ಞಾನ ಮುಂದುವರೆದು ಮನುಷ್ಯರು ಅಂತರಿಕ್ಷಕ್ಕೆ ಕಾಲಿಟ್ಟರೂ ಇಂದಿಗೂ ಅಭಿವೃದ್ಧಿ ಹೊಂದಿದ ಬೆಂಗಳೂರಿನಂತಹ ಮಹಾನಗರಗಳ ಪಕ್ಕದಲ್ಲೇ ಇಂತಹ ಅಸ್ಪೃಶ್ಯತೆಯ ಅನಿಷ್ಠ ಪದ್ಧತಿ ಇಂದಿಗೂ ಜೀವಂತವಾಗಿರುವುದು ಮಾತ್ರ ನಿಜಕ್ಕೂ ದುರಂತ. ಇನ್ನಾದರೂ ಜಾತಿ‌ ಜಾತಿ ಅಂತ ದೇವಸ್ಥಾನ, ಶಾಲೆಗಳಲ್ಲಿ ಭೇದ ಭಾವ ಮಾಡುವ ಜನರು ಎಚ್ಚೆತ್ತುಕೊಳ್ಳಬೇಕಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:13 pm, Sat, 5 July 25