ಗಾಣಿಗ ಮಠಕ್ಕೆ ಅನುದಾನ ಬಿಡುಗಡೆಗೆ ಕಮಿಷನ್ ಕೇಳಿದ ಸಚಿವ: ಸ್ವಾಮೀಜಿ ಗಂಭೀರ ಆರೋಪ
ನೆಲಮಂಗಲದ ತೈಲೇಶ್ವರ ಗಾಣಿಗ ಮಠಕ್ಕೆ ಮಂಜೂರಾದ ಅನುದಾನ ಬಿಡುಗಡೆಯಲ್ಲಿ ರಾಜ್ಯ ಸರ್ಕಾರದ ಪ್ರಭಾವಿ ಸಚಿವ ಕಮಿಷನ್ ಕೇಳಿದ್ದಾರೆಂದು ಪೂರ್ಣಾನಂದಪೂರಿ ಸ್ವಾಮೀಜಿ ಆರೋಪಿಸಿದ್ದಾರೆ. ಈ ಆರೋಪದಿಂದಾಗಿ, ಸ್ವಾಮೀಜಿಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿದ್ದಾರೆ. ಅನುದಾನದಲ್ಲಿ ಪಾರದರ್ಶಕತೆ ಕೊರತೆ ಮತ್ತು ಭ್ರಷ್ಟಾಚಾರದ ಬಗ್ಗೆ ಗಂಭೀರ ಆರೋಪಗಳನ್ನು ಸ್ವಾಮೀಜಿಗಳು ಮಾಡಿದ್ದಾರೆ.
ನೆಲಂಮಗಲ, ಜುಲೈ 05: ಮಠಕ್ಕೆ ಅನುದಾನ ಬಿಡುಗಡೆ ಮಾಡುವ ವಿಚಾರವಾಗಿ ನೆಲಮಂಗಲದ ಶ್ರಿಕ್ಷೇತ್ರ ತೈಲೇಶ್ವರ ಗಾಣಿಗರ ಮಹಸಂಸ್ಥಾನ ಮಠದ (Ganiga Mutt) ಪೂರ್ಣಾನಂದಪೂರಿ ಸ್ವಾಮೀಜಿಯವರು ಸಚಿವ ಶಿವರಾಜ್ ತಂಗಡಗಿ (Shivaraj Tangadagi) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಶ್ರೀ ಮಠದ ಜೀರ್ಣೋದ್ಧಾರಕ್ಕಾಗಿ 3.5 ಕೋಟಿ ರೂ. ಅನುದಾನ ಮಂಜೂರಾಗಿದೆ. ಮಂಜೂರಾದ ಅನುದಾನ ಬಿಡುಗಡೆ ಮಾಡಲು ಸಚಿವ ಶಿವರಾಜ್ ತಂಗಡಗಿಯವರು 25 ಪರ್ಸೆಂಟ್ ಕಮಿಷನ್ ಕೇಳಿದ್ದಾರೆ ಎಂದು ಸ್ವಾಮೀಜಿ ಆರೋಪ ಮಾಡಿದ್ದಾರೆ. ಹೀಗಾಗಿ, ಶಿವರಾಜ ತಂಗಡಗಿಯವರನ್ನು ಸಚಿವ ಸಂಪುಟದಿಂದ ಕೈ ಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯವರಿಗೆ ಪೂರ್ಣಾನಂದಪೂರಿ ಸ್ವಾಮೀಜಿ ಪತ್ರ ಬರೆದಿದ್ದಾರೆ.
ಸಿಎಂಗೆ ಬರೆದ ಪತ್ರದಲ್ಲಿ ಏನಿದೆ?
“ತಾವು (ಸಿಎಂ ಸಿದ್ದರಾಮಯ್ಯ) ಹಿಂದುಳಿದ ವಿವಿಧ ಸಂಘ ಸಂಸ್ಥೆಗಳಿಗೆ ಅಭಿವೃದ್ಧಿಗೆ ಉದಾರವಾಗಿ ಅನುದಾನ ನೀಡಿತ್ತಿರುವುದಕ್ಕೆ ಧನ್ಯವಾದಗಳು. ಆದರೆ, ಅನುದಾನ ನೀಡುವುದರಲ್ಲಿ ಯಾವುದೇ ಪಾರದರ್ಶಕ, ಹಿರಿತನ ಅಥವಾ ನಿಬಂಧನೆಗಳನ್ನು ಸಚಿವ ಶಿವರಾಜ್ ತಂಗಡಗಿ ಸಂಗಪ್ಪರವರು ಪಾಲಿಸುತ್ತಿಲ್ಲ. ತಮ್ಮಿಂದ, (ಸಿಎಂ ಸಿದ್ದರಾಮಯ್ಯ) ಆರ್ಥಿಕ ಇಲಾಖೆಯಿಂದ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯವರಿಂದ ಕಾನೂನು ಬದ್ಧವಾಗಿ ಅನುಮೋದಿಸಲ್ಪಟ್ಟ ಸಂಸ್ಥೆಗಳಿಗೆ ಅನುದಾನ ನೀಡುವ ಕಡತಗಳನ್ನು ಸಚಿವರು ತಮ್ಮಲ್ಲಿಯೇ ತರಿಸಿಕೊಂಡು ತಮಗೆ ಬೇಕಾದವರಿಗೆ ಹಂಚಿಕೆ ಮಾಡುತ್ತಿದ್ದಾರೆ. ಇವರ ತಮ್ಮಂದಿರ ಮೂಲಕ ಬ್ರಷ್ಟಾಚಾರದ ದಂಧೆ ನಡೆಯುತ್ತಿರುವುದು ಸಹ ಪ್ರಚಾರವಾಗುತ್ತಿದೆ. ಮಂತ್ರಿಗಳ ತಾರತಮ್ಯ ಮತ್ತು ಯಾವುದೇ ಪಾರದರ್ಶಕವಿಲ್ಲದೆ ಅನುದಾನ ನೀಡುವುದೇ ಬ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ. ನಮ್ಮ ಸಂಸ್ಥೆಗೆ ಆದ ಅನ್ಯಾಯದಲ್ಲಿ ಉಚ್ಚ ನ್ಯಾಯಾಲಯದ ಮೊರೆ ಹೋಗಿ ನ್ಯಾಯ ದೊರಕಿಸಿ ಕೊಳ್ಳಬೇಕಾಯಿತು” ಎಂದು ಪತ್ರದಲ್ಲಿದೆ.
“ನಾವು (ಸ್ವಾಮೀಜಿ) ಸಹ ಪೂರ್ವಶ್ರಮದಲ್ಲಿ 1992ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಹಿಂದುಳಿದ ವರ್ಗಗಳ ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಹಾಗೂ ಹಲವಾರು ಹುದ್ದೆಗಳಲ್ಲಿ 35 ವರ್ಷಗಳು ಕೆಲಸ ಮಾಡಿದ್ದೇವೆ. ಪಕ್ಷದ ಮಮತೆಯಿಂದ ಪಕ್ಷಕ್ಕೆ ಮುಜುಗರವಾಗಬಾರದೆಂದು ಮಂತ್ರಿಯವರಿಗೆ ನಾವು ನ್ಯಾಯಾಲಯದ ಮೊರೆ ಹೋಗುವ ವಿಷಯವನ್ನು 2025ರ ಜನವರಿ 20 ರಂದು ಪತ್ರದ ಮೂಲಕ ತಿಳಿಸಿದ್ದೆವು” ಎಂದು ಪತ್ರದಲ್ಲಿ ಬರೆದಿದ್ದಾರೆ.
“ಹಾಲಿ ಮಂತ್ರಿಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿರುವ ನಡವಳಿಯನ್ನು ತಮ್ಮ ಗಮನಕ್ಕೆ ತಂದಿದ್ದೇವೆ. ಭ್ರಷ್ಟಾಚಾರವನ್ನು ತಪ್ಪಿಸಲು ತಕ್ಷಣ ಶಿವರಾಜ್ ತಂಗಡಗಿ ಸಂಗಪ್ಪ ಮಂತ್ರಿಯವರನ್ನು ಸಂಪುಟದಿಂದ ಕೈಬಿಡವುದು ಸೂಕ್ತ ವೆಂದು ನಮ್ಮ ಕೋರಿಕೆ” ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಅಂದು ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ: ವಿಡಿಯೋ ವೈರಲ್
“ಇಂದಿನಿಂದ 10 ದಿನಗಳಲ್ಲಿ ಯಾವುದೇ ಕ್ರಮ ತಮ್ಮಿಂದಾಗದಿದ್ದರೆ ಮಂತ್ರಿಗಳ ವಿರುದ್ಧ ಬ್ರಷ್ಟಾಚಾರ ನಿಗ್ರಹದಡಿ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂಬ ಅಂಕವನ್ನು ತಮಗೆ ಮುಂಚಿತವಾಗಿ ತಿಳಿಸುತ್ತಿದ್ದೇವೆ” ಎಂದು ಪತ್ರದ ಮೂಲಕ ಎಚ್ಚರಿಕೆ ನೀಡಿದರು.
ವರದಿ: ಮಂಜುನಾಥ್, ಟವಿ9 ನೆಲಮಂಗಲ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:19 pm, Sat, 5 July 25