ದೇವನಹಳ್ಳಿ ಭಾಗದ 13 ಹಳ್ಳಿಗಳ ಸುತ್ತಮುತ್ತ ಭೂಸ್ವಾಧೀನ: ಷರತ್ತು ವಿಧಿಸಿದ ರೈತರು

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿನ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರು ಭೂಮಿ ಸ್ವಾಧೀನಕ್ಕೆ ಷರತ್ತುಬದ್ಧ ಒಪ್ಪಿಗೆ ನೀಡಿದ್ದಾರೆ. ಈ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನೂನು ತಜ್ಞರೊಂದಿಗೆ ಚರ್ಚಿಸಿದ್ದು, ಜುಲೈ 15 ರಂದು ಅಂತಿಮ ನಿರ್ಧಾರ ಹೊರಬೀಳಲಿದೆ ಎಂಬ ನಿರೀಕ್ಷೆ ಇದೆ.

ದೇವನಹಳ್ಳಿ ಭಾಗದ 13 ಹಳ್ಳಿಗಳ ಸುತ್ತಮುತ್ತ ಭೂಸ್ವಾಧೀನ: ಷರತ್ತು ವಿಧಿಸಿದ ರೈತರು
ಮುಖ್ಯಮಂತ್ರಿಗಳನ್ನು ಭೇಟಿಯಾದ ರೈತರ ನಿಯೋಗ

Updated on: Jul 12, 2025 | 7:55 PM

ಬೆಂಗಳೂರು, ಜುಲೈ 12: ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿನ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರ‌ (Farmers) ನಿಯೋಗ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿತು. ರೈತರ ನಿಯೋಗ ನಾಲ್ಕು ಷರತ್ತುಗಳನ್ನು ಹಾಕಿ ಸರ್ಕಾರಕ್ಕೆ ಜಮೀನು ನೀಡಲು ಒಪ್ಪಿಗೆ ನೀಡಿತು. ಈ ಭೂಸ್ವಾದೀನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನೂನು ತಜ್ಞರೊಂದಿಗೆ ಸಭೆ ನಡೆಸಿದರು.

ರೈತರು ಸಲ್ಲಿಸಿದ ನಾಲ್ಕು ಬೇಡಿಕೆಗಳು

  • ಪ್ರತಿ ಎಕರೆಗೆ 3.50 ಕೋಟಿ ರೂ. ದರ ನಿಗದಿ ಮಾಡಬೇಕು.
  • ಜಮೀನು ಕಳೆದುಕೊಂಡ ರೈತರ ಮಕ್ಕಳಿಗೆ ಕೆಲಸ ನೀಡಬೇಕು.
  • ಅವರ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ನೌಕರಿ ನೀಡಬೇಕು.
  • ಯಾವ ಕಾರಣಕ್ಕೂ ಹಸಿರು ವಲಯವಾಗಿ ಪರಿವರ್ತಿಸಬಾರದು.
  • ಅಕ್ಕಪಕ್ಕ ಉಳಿದ ಜಮೀನು ಹಳದಿ ವಲಯವಾಗಿ ಪರಿವರ್ತಿಸಬೇಕು ಎಂದು ರೈತರ ನಿಯೋಗ ಷರತ್ತು ವಿಧಿಸಿದೆ.

ಸಿಎಂ ಭೇಟಿಯಾದ ರೈತರ ನಿಯೋಗ

ಕಾನೂನು ತಜ್ಞರೊಂದಿಗೆ ಸಿಎಂ ಸಭೆ

ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿನ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ (ಜು.12) ಕಾವೇರಿ ನಿವಾಸದಲ್ಲಿ ಕಾನೂನು ತಜ್ಞರ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಜುಲೈ 15ರಂದು ನಡೆಯುವ ರೈತರ ಜೊತೆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ನಿರೀಕ್ಷೆ ಇದೆ.

ಇದನ್ನೂ ಓದಿ: ನಾಯಕತ್ವ ಬದಲಾವಣೆ ಇಲ್ಲ: ಸಿಎಂ ಸಿದ್ದರಾಮಯ್ಯಗೆ ಸ್ಪಷ್ಟ ಸಂದೇಶ ರವಾನಿಸಿರುವ ಕಾಂಗ್ರೆಸ್ ಹೈಕಮಾಂಡ್

ಭೂಸ್ವಾದೀನ ಏಕೆ?

ದೇವನಹಳ್ಳಿ ತಾಲೂಕಿನ ಚನ್ನಾರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ 13 ಗ್ರಾಮಗಳಲ್ಲಿನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಆದರೆ, ಸರ್ಕಾರದ ಈ ನಿರ್ಧಾರಕ್ಕೆ ನಟ ಪ್ರಕಾಶ್​ ರೈ ಸೇರಿದಂತೆ ಅನೇಕ ರೈತರು ವಿರೋಧ ವ್ಯಕ್ತಪಡಿಸಿದ್ದರು.

ವರದಿ: ಈರಣ್ಣ ಬಸವ, ಟಿವಿ9 ಬೆಂಗಳೂರು

Published On - 7:51 pm, Sat, 12 July 25