ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ 3 ಹುಲಿಮರಿಗಳ ಸಾವು
ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮೂರು ಹುಲಿ ಮರಿಗಳು ಮೃತಪಟ್ಟಿವೆ. ಅಧಿಕಾರಿಗಳು ಮತ್ತು ವೈದ್ಯರ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಾಣಿಪ್ರಿಯರು ಅನುಭವಿ ವೈದ್ಯರ ನೇಮಕಕ್ಕೆ ಆಗ್ರಹಿಸಿದ್ದಾರೆ. ಇತ್ತೀಚೆಗೆ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳು ಮೃತಪಟ್ಟಿದ್ದವು.

ಆನೇಕಲ್, 13: ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳು (Tigers) ಮೃತಪಟ್ಟ ಬೆನ್ನಲ್ಲೇ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bannerghatta Biological Park) ಮೂರು ಹುಲಿ ಮರಿಗಳು ಸಾವನ್ನಪ್ಪಿವೆ. ವಾರದ ಹಿಂದೆ ಹಿಮಾ ದಾಸ್ ಎಂಬ ಏಳು ವರ್ಷದ ಹೆಣ್ಣು ಹುಲಿ ಎರಡು ಗಂಡು, ಒಂದು ಹೆಣ್ಣು ಸೇರಿದಂತೆ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ತಾಯಿ ಹುಲಿ ಮರಿಗಳಿಗೆ ಹಾಲುಣಿಸಿ ಆರೈಕೆ ಮಾಡದ ಹಿನ್ನೆಲೆಯಲ್ಲಿ ಮೂರೂ ಹುಲಿಗಳು ಮೃತಪಟ್ಟಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಹಿಮಾ ದಾಸ್ ಹೆಣ್ಣು ಹುಲಿ ಮೊದಲು ಎರಡು ಮರಿಗಳಿಗೆ ಜನ್ಮನೀಡಿತ್ತು. ಈ ಮರಿಗಳಿಗೆ ಹಾಲುಣಿಸಿ ಆರೈಕೆ ಮಾಡಿತ್ತು. ಈ ಎರಡೂ ಹುಲಿಗಳು ಸದ್ಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿವೆ. ಎರಡನೇ ಬಾರಿ ಹಿಮಾ ದಾಸ್ ಹುಲಿ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಈ ಮರಿಗಳಿಗೆ ಹೆಣ್ಣು ಹಲಿ ಹಾಲುಣಿಸದೆ ದೂರ ಇಟ್ಟಿತ್ತು. ಆಗ, ಮೃಗಾಲಯದ ಅಧಿಕಾರಿಗಳು ಮತ್ತು ವೈದ್ಯರು ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ, ಅಧಿಕಾರಿಗಳಲಾಗಲಿ ಅಥವಾ ವೈದ್ಯರಾಗಲಿ ಈ ಬಗ್ಗೆ ಗಮನ ಹರಿಸಲಿಲ್ಲ. ಇದರಿಂದ, ಮೂರೂ ಹುಲಿ ಮರಿಗಳು ಮೃತಪಟ್ಟಿವೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಹುಲಿ, ಮಂಗ ಆಯ್ತು ಈಗ ಚಿರತೆ ಸರದಿ: ಚಾಮರಾಜನಗರ ಕೊತ್ತಲವಾಡಿ ಬಳಿ ಚಿರತೆ ಶವ ಪತ್ತೆ
ಅನನುಭವಿ ಅಧಿಕಾರಿಗಳು ಮತ್ತು ವೈದ್ಯರ ನಿರ್ಲಕ್ಷ್ಯದ ಬಗ್ಗೆ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನನುಭವಿ ವೈದ್ಯರಿಂದ ವನ್ಯಜೀವಿಗಳು ಸಾಯುತ್ತಿವೆ. ಅನುಭವಿ ವೈದ್ಯರನ್ನು ಸರ್ಕಾರ ನೇಮಿಸುವು ಬೇಡ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇಡಿ ಸೂರ್ಯ ಸೇನ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಪ್ರಾಣಿ ಪ್ರಿಯರು ಆರೋಪ ಮಾಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:09 pm, Sun, 13 July 25







