ಚಿಕ್ಕ ಮಕ್ಕಳೆಂದೂ ಲೆಕ್ಕಿಸದೆ ಬಾಸುಂಡೆ ಬರುವಂತೆ ಥಳಿಸಿದ ದುರುಳರು!
ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರದಲ್ಲಿ 3 ಮತ್ತು 7 ವರ್ಷದ ಇಬ್ಬರು ಮಕ್ಕಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಲಾಗಿದೆ. ದೇಹದಲ್ಲೆಲ್ಲಾ ತೀವ್ರ ಬಾಸುಂಡೆಗಳಾಗಿದ್ದು, ಒಂದು ಮಗುವಿನ ಕೈ ಮುರಿದಿದೆ. ಸ್ಥಳೀಯರು ಮಕ್ಕಳ ಸಹಾಯವಾಣಿಗೆ ದೂರು ನೀಡಿದ ನಂತರ, ಮಕ್ಕಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಮಕ್ಕಳ ರಕ್ಷಣಾ ಘಟಕ ತನಿಖೆ ನಡೆಸುತ್ತಿದೆ.

ಬೆಂಗಳೂರು ಗ್ರಾಮಾಂತರ, ಜನವರಿ 23: ಜಿಲ್ಲೆಯ ದೊಡ್ಡಬಳ್ಳಾಪುರ (Bengaluru Rural) ನಗರದಲ್ಲಿ ಚಿಕ್ಕ ಮಕ್ಕಳ ಮೇಲೆ ಅಮಾನವೀಯ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ದೊಡ್ಡಬಳ್ಳಾಪುರದ ಮುತ್ಯಾಲಮ್ಮ ದೇವಸ್ಥಾನದ ಬಳಿ 3 ಮತ್ತು 7 ವರ್ಷದ ಇಬ್ಬರು ಗಂಡು ಮಕ್ಕಳನ್ನು ದುರುಳರು ನಿರ್ದಯವಾಗಿ ಹಲ್ಲೆ ಮಾಡಿದ್ದು, ಮಕ್ಕಳನ್ನ ವಿಕ್ಟೋರಿಯಾ ಆಸ್ವತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಗುವಿನ ಕೈ ಮುರಿದಿರುವ ನಿರ್ದಯಿಗಳು
ಹಲ್ಲೆಯಿಂದ ಮಕ್ಕಳ ಮೈ, ಕೈ ಮತ್ತು ಕಾಲುಗಳ ಮೇಲೆ ತೀವ್ರ ಬಾಸುಂಡೆಗಳು ಉಂಟಾಗಿದ್ದು, ಒಂದು ಮಗುವಿನ ಕೈ ಮುರಿದಿದೆ ಎಂದು ಹೇಳಲಾಗಿದೆ. ಚಿಕ್ಕ ಮಕ್ಕಳು ಎಂಬುದನ್ನೂ ಲೆಕ್ಕಿಸದೇ ಹಲ್ಲೆ ನಡೆಸಿರುವ ಈ ವಿಕೃತ ಕೃತ್ಯವು ಮಾನವೀಯತೆಯನ್ನೇ ಪ್ರಶ್ನಿಸುವಂತಾಗಿದೆ. ಗಾಯಗೊಂಡ ಮಕ್ಕಳ ಸ್ಥಿತಿಯನ್ನು ಕಂಡ ಸ್ಥಳೀಯರು ಮಕ್ಕಳ ಸಹಾಯವಾಣಿ (ಚೈಲ್ಡ್ ಹೆಲ್ಪ್‌ಲೈನ್) ಗೆ ದೂರು ನೀಡಿದ್ದು, ದೂರಿನನ್ವಯ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಮಕ್ಕಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಲಾಗಿದೆ.
ತಾಯಿಯಿಲ್ಲದ ಸಮಯದಲ್ಲಿ ಘಟನೆ
ಮಕ್ಕಳ ತಾಯಿ ಗಾರ್ಮೆಂಟ್ಸ್ ಕೆಲಸಕ್ಕೆ ತೆರಳಿದ್ದ ವೇಳೆ ಅಪರಿಚಿತರು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ನಂತರ ಹೆದರಿಕೊಂಡಿರುವ ಮಕ್ಕಳು, ಹಲ್ಲೆಯ ಬಗ್ಗೆ ಸ್ಪಷ್ಟವಾಗಿ ಏನೂ ಹೇಳಲು ಸಾಧ್ಯವಾಗದೆ ಆತಂಕದಲ್ಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ಹಲ್ಲೆ ನಡೆಸಿದ ದುರುಳರ ಪತ್ತೆಗೆ ತನಿಖೆ ಮುಂದುವರಿದಿದೆ. ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.