ಬೆಂಗಳೂರು ಗ್ರಾಮಾಂತರ: ಹಲವು ವರ್ಷಗಳಿಂದಿದ್ದ ರಸ್ತೆ ರಾತ್ರೋ ರಾತ್ರಿ ಮಾಯ; ರಸ್ತೆಗಾಗಿ ಬೀದಿಗಳಿದು ಸ್ಥಳೀಯರ ಆಕ್ರೋಶ
ಆ ಗ್ರಾಮದ ನಿವಾಸಿಗಳೆಲ್ಲಾ ದಶಕಗಳಿಂದ ಅದೇ ಸರ್ಕಾರಿ ರಸ್ತೆಯಲ್ಲಿ ತಮ್ಮ ಮನೆಗಳಿಗೆ ಓಡಾಡುತ್ತಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಆದ್ರೆ, ಸಾರ್ವಜನಿಕರ ರಸ್ತೆ ಒಂದೇ ರಾತ್ರಿಗೆ ಮಾಯವಾಗಿ ಕಟ್ಟಡ ನಿರ್ಮಾಣದ ಸ್ಥಳವಾಗಿ ಮಾರ್ಪಟ್ಟಿದ್ದು, ರಸ್ತೆಯನ್ನೆ ನಂಬಿಕೊಂಡಿದ್ದ ಕುಟುಂಬಗಳು ಇದೀಗ ಬೀದಿಗೆ ಬಂದಿವೆ. ಜೊತೆಗೆ ರಸ್ತೆ ಉಳಿವಿಗಾಗಿ ಹೋರಾಟದ ಹಾದಿಯನ್ನ ಹಿಡಿದಿದ್ದಾರೆ.
ಬೆಂಗಳೂರು ಗ್ರಾಮಾಂತರ, ಮಾ.31: ಜಿಲ್ಲೆಯ ದೊಡ್ಡಬಳ್ಳಾಪುರ(Doddaballapura) ತಾಲೂಕಿನ ದೊಡ್ಡಬೆಳವಂಗಲ ಗ್ರಾಮದ ಜನರು ಓಡಾಡುತ್ತಿದ್ದ ರಸ್ತೆಯನ್ನು(Road) ರಾತ್ರೋರಾತ್ರಿ ಮುಚ್ಚಿ ಹಾಕಿರುವ ಆರೋಪ ಕೇಳಿ ಬಂದಿದೆ. ಗ್ರಾಮದಲ್ಲಿ ಹಾದು ಹೋಗಿರುವ ದಾಬಸ್ ಪೇಟೆ- ಹೊಸಕೋಟೆ ರಾಷ್ಟ್ರಿಯ ಹೆದ್ದಾರಿಯ ಬದಿಯಲ್ಲೆ ನೂರಾರು ಮನೆಗಳನ್ನ ಕಟ್ಟಿಕೊಂಡು ಜನ ವಾಸ ಮಾಡುತ್ತಿದ್ದಾರೆ. ಇನ್ನೂ ಹೆದ್ದಾರಿಯಿಂದ ಒಳಗೆ ಹೋಗಲು ಇದ್ದ ರಸ್ತೆಯ ಪಕ್ಕದಲ್ಲೆ ರಾಜಣ್ಣ ಎಂಬುವವರಿಗೆ ಸೇರಿದ ಸೈಟ್ ಇದೆ. ಇದೇ ಸೈಟ್ಲ್ಲಿ ವಾಣಿಜ್ಯ ಕಟ್ಟಡ ಮಾಡಿ ಬಾರ್ ತೆರೆಯಲು ಮುಂದಾಗಿದ್ದು, ಸೈಟ್ ಪಕ್ಕದ ರಸ್ತೆಯನ್ನ ಕಬ್ಜ ಮಾಡಿ ಕಾಮಗಾರಿ ಮಾಡಲು ಹೊರಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜೊತೆಗೆ ರಸ್ತೆಯನ್ನ ಮುಚ್ಚಿ ಬಾರ್ ಒಪನ್ ಮಾಡುತ್ತಿರುವುದಕ್ಕೆ ಆಕ್ರೋಶ ಹಾಕಿರುವ ಸ್ಥಳಿಯರು, ಒತ್ತುವರಿ ಮಾಡಿರುವ ರಸ್ತೆಯನ್ನ ಮೊದಲಿನಂತೆ ನಿರ್ಮಾಣ ಮಾಡಿಸುವಂತೆ ಒತ್ತಾಯಿಸಿದ್ದಾರೆ. ದಶಕಗಳಿಂದ ಹಾದು ಹೋಗಿದ್ದ ರಸ್ತೆಗೆ ಈ ಹಿಂದೆ ಚರಂಡಿ, ನೀರಿನ ಪೈಪ್ಲೈನ್ ಎಲ್ಲವೂ ಇತ್ತಂತೆ. ಆದ್ರೆ, ಸೈಟ್ನಲ್ಲಿ ಕಾಮಗಾರಿ ಆರಂಭಿಸಿರುವ ರಾಜಣ್ಣ ಎನ್ನುವವರು ರಾತ್ರಿಯಾಗುತ್ತಿದ್ದಂತೆ ರಸ್ತೆಯ ಜಾಗವೂ ನಮಗೆ ಸೇರಬೇಕೆಂದು ರಸ್ತೆಯನ್ನ ಕಿತ್ತುಹಾಕಿ ಕಾಮಗಾರಿ ಶುರು ಮಾಡಿದ್ದಾನೆ. ಜೊತೆಗೆ ರಾತ್ರೋರಾತ್ರಿ ಫಿಲ್ಲರ್ಗಳನ್ನ ಕೂಡ ಕಟ್ಟಲಾಗಿದ್ದು, ಜರೂರಾಗಿ ಬಿಲ್ಡಿಂಗ್ ನಿರ್ಮಾಣಕ್ಕೆ ಕೈಹಾಕಿದ್ದಾನೆ.
ಇದನ್ನೂ ಓದಿ:ಲಕ್ಕಸಂದ್ರ ಮೆಟ್ರೋ ಕಾಮಗಾರಿ: ಏಪ್ರಿಲ್ನಿಂದ ಒಂದು ವರ್ಷ ಈ ರಸ್ತೆ ಮಾರ್ಗಗಳಲ್ಲಿ ವಾಹನ ಸಂಚಾರ ಬಂದ್
ಇನ್ನು ಓಡಾಡಲು ರಸ್ತೆಯಿಲ್ಲದೆ 40 ಮನೆಗಳ ನಿವಾಸಿಗಳು ಕಾಮಗಾರಿ ತಡೆದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಜೊತೆಗೆ ರಸ್ತೆಯನ್ನ ಕಬ್ಜ ಮಾಡಿರುವ ರಾಜಣ್ಣ, ಸ್ಥಳೀಯ ಪಂಚಾಯತಿಯಲ್ಲೂ ಯಾವುದೇ ಅನುಮತಿ ಪಡೆದಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ರಸ್ತೆಯನ್ನ ಕಬ್ಜ ಮಾಡಿ ಬಿಲ್ಡಿಂಗ್ ಕಟ್ಟಲು ಬಿಡೋದಿಲ್ಲ ಎಂದು ಪಟ್ಟು ಹಿಡಿದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ತಹಶೀಲ್ದಾರ್ಗೂ ಮನವಿ ಸಲ್ಲಿಸಿದ್ದಾರೆ. ಒಟ್ಟಾರೆ ಹೆದ್ದಾರಿ ಬದಿಯಲ್ಲಿದೆ ಎಂದು ಸಾರ್ವಜನಿಕರ ರಸ್ತೆಯನ್ನೆ ಕೆಡವಿ ಬಾರ್ ತೆರೆಯಲು ಮುಂದಾಗಿದ್ದಾರೆ ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ. ಈ ಬಗ್ಗೆ ತಹಶೀಲ್ದಾರ್ಗೆ ಸ್ಥಳಿಯರು ದೂರು ನೀಡಿದ್ದು, ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ