ಮಗುವನ್ನ ಮಡಿಲಲ್ಲಿ ಮಲಗಿಸಿಕೊಂಡು ಭಿಕ್ಷಾಟನೆ ಮಾಡ್ತಿದ್ದ ತಾಯಿ-ಮಗುವಿನ ರಕ್ಷಣೆ; ಕೌನ್ಸಿಲಿಂಗ್ ವೇಳೆ ತಾಯಿ ನೀಡಿದ ಹೇಳಿಕೆಗೆ ಅಧಿಕಾರಿಗಳೇ ಶಾಕ್
ಆಕೆ ರಣ ಬಿಸಿಲು ಲೆಕ್ಕಿಸದೇ ಪುಟ್ಟ ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು ಭಿಕ್ಷಾಟನೆ ಮಾಡುತ್ತಿದ್ದಳು. ಆಗ ದಿಢೀರ್ ಎಂಟ್ರಿ ಕೊಟ್ಟ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ತಂಡ, ತಾಯಿ ಮಗುವನ್ನು ರಕ್ಷಣೆ ಮಾಡಿದ್ದು, ಕೌನ್ಸಿಲಿಂಗ್ ವೇಳೆ ತಾಯಿ ನೀಡಿದ ಹೇಳಿಕೆಗೆ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಅಷ್ಟಕ್ಕೂ ತಾಯಿ-ಮಗುವಿನ ಭಿಕ್ಷಾಟನೆಗೆ ಕಾರಣ ಕೇಳಿ ಯಾಕೆ ಅಧಿಕಾರಿಗಳು ಶಾಕ್ ಆದ್ರೂ ಅಂತೀರಾ? ಈ ಸ್ಟೋರಿ ಓದಿ.
ಬೆಂಗಳೂರು ಗ್ರಾಮಾಂತರ, ಏ.01: ನಗರದ ಹೊರವಲಯದ ಆನೇಕಲ್(Anekal) ಪಟ್ಟಣದ ಶನಿಮಹಾತ್ಮ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಕಳೆದೊಂದು ವರ್ಷದಿಂದ ರಾಯಚೂರು ಮೂಲದ ಮಹಿಳೆ ಮಗು ಹಿಡಿದುಕೊಂಡು ಭಿಕ್ಷೆ ಬೇಡುತ್ತಿರುವ ಬಗ್ಗೆ ಸ್ಥಳೀಯರು ಡಿಸಿಪಿಓಗೆ ದೂರು ನೀಡಿದ್ದರು. ನಂತರ ನಾಲ್ಕೈದು ಬಾರಿ ಅಧಿಕಾರಿಗಳು ಭಿಕ್ಷೆ ಬೇಡದಂತೆ ಎಚ್ಚರಿಕೆಯನ್ನು ಕೂಡ ನೀಡಿದ್ದರು. ಆದರೆ, ಮತ್ತೆ ದೇವಸ್ಥಾನದ ಮುಂಭಾಗದಲ್ಲಿ ಭಿಕ್ಷೆ ಬೇಡುತ್ತಿರುವ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆಶಾ ನೇತೃತ್ವದ ತಂಡ ದಾಳಿ ಮಾಡಿ, ಇಬ್ಬರನ್ನು ರಕ್ಷಿಸಿದ್ದಾರೆ.
ಕೌನ್ಸಿಲಿಂಗ್ ವೇಳೆ ತಾಯಿ ನೀಡಿದ ಹೇಳಿಕೆಗೆ ಅಧಿಕಾರಿಗಳೇ ಶಾಕ್
ಇನ್ನು ತಾಯಿ-ಮಗು ಇಬ್ಬರನ್ನು ರಕ್ಷಿಸಿ ಕೌನ್ಸಿಲಿಂಗ್ ಒಳಪಡಿಸಿದಾಗ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಹೌದು, ಮಹಿಳೆಯ ಅಸಹಾಯಕ ಕಥೆ ಕೇಳಿ ಮರುಗಿದ್ದ ಅಧಿಕಾರಿಗಳು ಒಂದು ಕ್ಷಣ ಮೌನಕ್ಕೆ ಜಾರಿದ್ದರು. ಕುಡುಕ ಗಂಡನನ್ನು ಕಟ್ಟಿಕೊಂಡ ತಪ್ಪಿಗೆ ಭಿಕ್ಷೆ ಬೇಡುವ ಪರಿಸ್ಥಿತಿ ಸೃಷ್ಟಿಯಾಗಿತ್ತು. ಕುಡಿತಕ್ಕೆ ದಾಸನಾಗಿದ್ದ ಪತಿ, ಭಿಕ್ಷೆ ಬೇಡಿ ಕುಡಿಯಲು ಹಣ ತರುವಂತೆ ತಿಳಿಸಿ, ಕಿರುಕುಳ ಕೊಟ್ಟಿದ್ದಾನೆ ಎನ್ನಲಾಗಿದೆ. ಇತನ ಕಾಟಕ್ಕೆ ಬೇಸತ್ತ ಮಹಿಳೆ ಮಗು ಹಿಡಿದುಕೊಂಡು ಭಿಕ್ಷೆ ಬೇಡಲು ಬಂದಿರುವುದಾಗಿ ತಿಳಿಸಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ:ಭೀಕರ ಬರಕ್ಕೆ ಒಣಗಿದ ಕೆರೆ-ಕಟ್ಟೆಗಳು; ಹನಿ ನೀರಿಗಾಗಿ ಪ್ರಾಣಿ-ಪಕ್ಷಿಗಳ ಪರದಾಟ
ಕುಡಿಯಲು ಹಣ ತಂದು ಕೊಡದಿದ್ದರೆ ಹಲ್ಲೆ ನಡೆಸುತ್ತಿದ್ದ. ಹಾಗಾಗಿ ರಣ ಬಿಸಿಲನ್ನು ಲೆಕ್ಕಿಸದೆ ಮಡಿಲಿನಲ್ಲಿ ಪುಟ್ಟ ಮಗುವನ್ನು ಕೂರಿಸಿಕೊಂಡು ಮಹಿಳೆ ಭಿಕ್ಷಾಟನೆ ನಡೆಸುತ್ತಿದ್ದಳು. ಸದ್ಯ ತಾಯಿ ಮತ್ತು ಮಗುವನ್ನು ರಕ್ಷಿಸಿ ಸ್ವಾಧಾರ್ ಗೃಹದಲ್ಲಿಟ್ಟು ಕೌನ್ಸಿಲಿಂಗ್ ಮಾಡಲಾಗುತ್ತಿದೆ. ಕೌನ್ಸಿಲಿಂಗ್ ಬಳಿಕ ಅಧಿಕಾರಿಗಳು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಲಿದ್ದಾರೆ. ಇನ್ನು ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಕಂಡರೆ 1098 ಅಥವಾ 122 ಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ಭಿಕ್ಷಾಟನೆ ಮತ್ತು ಭೀಕ್ಷೆ ನೀಡುವುದು ಕಾನೂನಿನ ಪ್ರಕಾರ ಅಪರಾಧ. ಆದ್ರೆ, ಈ ಮಹಾಶಯ ತನ್ನ ಕುಡಿತದ ಚಟಕ್ಕಾಗಿ ವಿಶೇಷ ಮಗುವಿನ ಜೊತೆ ಪತ್ನಿಯನ್ನು ಭಿಕ್ಷಾಟನೆಗಾಗಿ ದೂಡುವುದು ಕ್ಷಮಿಸಲಾರದಂತಹ ಅಪರಾಧ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ