ಪ್ರಯಾಣಿಕರಿಗೆ ಪ್ರೋತ್ಸಾಹ ಧನ ಕೊಡಬೇಕು: ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ ಸೋಗಾನೆ ಬಳಿ ನಿರ್ಮಾಣವಾಗಿರುವ ಏರ್ಪೋರ್ಟ್ಗೆ ಇಂದು ಮೊದಲ ವಿಮಾನ ಬಂದಿಳಿದಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಬಹಳ ವಿಶಾಲವಾಗಿ ತುಂಬಾ ಚೆನ್ನಾಗಿದೆ. ಪ್ರವಾಸೋದ್ಯಮ, ಇಂಡಸ್ಟ್ರಿಯಲ್ ಮತ್ತು ಎಜುಕೇಶನ್ ಹೆಚ್ಚಾಗಬೇಕು. ಪ್ರಯಾಣಿಕರಿಗೆ ಪ್ರೋತ್ಸಾಹ ಧನ ಕೊಡಬೇಕು ಅಂತ ಇದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ದೇವನಹಳ್ಳಿ, ಆಗಸ್ಟ್ 31: ಶಿವಮೊಗ್ಗ ವಿಮಾನ ನಿಲ್ದಾಣ ಬಹಳ ವಿಶಾಲವಾಗಿ ತುಂಬಾ ಚೆನ್ನಾಗಿದೆ. ಪ್ರವಾಸೋದ್ಯಮ, ಇಂಡಸ್ಟ್ರಿಯಲ್ ಮತ್ತು ಎಜುಕೇಶನ್ ಹೆಚ್ಚಾಗಬೇಕು. ಪ್ರಯಾಣಿಕರಿಗೆ ಪ್ರೋತ್ಸಾಹ ಧನ ಕೊಡಬೇಕು ಅಂತ ಇದೆ. ನಮ್ಮ ಸಚಿವರು ಕೂಡ ಒಪ್ಪಿಕೊಂಡಿದ್ದಾರೆ ಬಹಳ ಸಂತೋಷ ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದ್ದಾರೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಉಸ್ತುವಾರಿ ಸಚಿವನಾಗಿರುವಾಗ ಸಿಎಂ ಸಿದ್ದರಾಮಯ್ಯ ಮತ್ತು ಎಂಬಿ ಪಾಟೀಲ್ ಅವರ ನೇತೃತ್ವದಲ್ಲಿ ಆಗಿರುವುದು ಬಹಳ ಸಂತೋಷ ಎಂದು ತಿಳಿಸಿದರು.
ಸಂತೋಷಕ್ಕಿಂತ ಇನ್ಮುಂದೆ ಚಾಲೆಂಜ್ ಜಾಸ್ತಿ ಇದೆ. ಕೈಗಾರಿಕ ಸಚಿವರ ಹತ್ತಿರ ನಿಮ್ಮ ಸಹಕಾರಬೇಕೆಂದು ಕೇಳಿದ್ದೇನೆ. ಅವರು ಕೂಡ ಸಹಕಾರ ಕೊಡುವುದಾಗಿ ಸ್ಪಂದಿಸಿದ್ದಾರೆ. ಮೊದಲನೇ ವಿಮಾನ ಯಾನದಲ್ಲಿ ಅವರನ್ನು ರಿಸೀವ್ ಮಾಡಿ ಅವರ ಜೊತೆನೆ ವಾಪಸ್ಸು ಆಗಿದ್ದು, ಬಹಳ ಸಂತೋಷವಾಗಿದೆ ಎಂದು ಹೇಳಿದರು.
ಪ್ರತಿ ಪ್ರಯಾಣಿಕರಿಗೆ 500 ರೂ ರಿಯಾಯಿತಿ ನೀಡಲು ಚಿಂತನೆ: ಸಚಿವ ಎಂಬಿ ಪಾಟೀಲ್
ಸಚಿವ ಎಂಬಿ ಪಾಟೀಲ್ ಮಾತನಾಡಿ, ರಾಜ್ಯ ಸರ್ಕಾರದಿಂದ ಪ್ರತಿ ಪ್ರಯಾಣಿಕರಿಗೆ 500 ರೂ ರಿಯಾಯಿತಿ ನೀಡಲು ಚಿಂತನೆ ನಡೆಸಿದೆ. ರಾಜ್ಯ ಸರ್ಕಾರದಿಂದ ರಿಯಾಯಿತಿ ಕೊಡುವಂತ ಕೆಲಸ ಆಗಲಿದೆ. ತಿರುಪತಿ, ಗೋವಾ ಮತ್ತು ಹೈದರಾಬಾದ್ಗೆ ಸಂಪರ್ಕ ಹೊಂದುತ್ತದೆ.
ಇದನ್ನೂ ಓದಿ: ಶಿವಮೊಗ್ಗಕ್ಕೆ ಬಂದೇಬಿಡ್ತು ವಿಮಾನ, ಮಲೆನಾಡಿಗರು ಬಹುದಿನಗಳ ಕನಸು ನನಸು
ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ಬೆಂಗಳೂರಿನಿಂದ ದೆಹಲಿಗೆ ಹೋಗಲು ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗ ವ್ಯಾಪಾರ, ಪ್ರವಾಸೋದ್ಯಮಕ್ಕೆ, ಶೈಕ್ಷಣಿಕ ಹಬ್ ಆಗುತ್ತದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಕೂಡ ಮಧ್ಯಸ್ಥಿಕೆ ವಹಿಸಬೇಕು
ಕಾವೇರಿ ನೀರಿಗಾಗಿ ತಮಿಳುನಾಡು ಖ್ಯಾತೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನಮ್ಮ ಜಲ ಸಂಪನ್ಮೂಲ ಸಚಿವರು ಈಗಾಗಲೇ ದೆಹಲಿಗೆ ತೆರಳಿ ಕಾನೂನು ತಜ್ಞರ ಜೊತೆ ಮಾತುಕತೆ ನಡೆಸಿದ್ದಾರೆ. ನೀರು ಬಿಡುವ ವಿಚಾರವಾಗಿ ವೈಜ್ಞಾನಿಕವಾಗಿ ಸೂತ್ರ ಆಗಬೇಕಿದೆ. ಅದಕ್ಕೆ ಎಲ್ಲಾ ಪರಿಣತರನ್ನ ಕೇಂದ್ರ, ರಾಜ್ಯ, ತಮಿಳುನಾಡು, ಎಲ್ಲಾ ತಜ್ಞರ ಜೊತೆ ಚರ್ಚಿಸಿ ಸಂಕಷ್ಟ ಸೂತ್ರ ಮಾಡಬೇಕಿದೆ. ಸ್ವಾಭಾವಿಕವಾಗಿ ತಮಿಳುನಾಡಿಗೆ 172 ಟಿಎಂಸಿ ನೀರನ್ನು ಕೊಡುತ್ತೇವೆ ಎಂದರು.
ನೀರಿನ ಲಭ್ಯತೆ ಎಷ್ಟಿದೆ, ಎಷ್ಟು ನೀರು ಹರಿದು ಹೋಗಿದೆ, ಎಲ್ಲವನ್ನ ಗಣನೀಯಕ್ಕೆ ತೆಗೆದುಕೊಳ್ಳಬೇಕು. ಅವರ ಡ್ಯಾಂನಲ್ಲಿ ನೀರಿನ ಲಭ್ಯತೆ ಎಷ್ಟಿದೆ, ಇವೆಲ್ಲವನ್ನ ನೋಡಿಕೊಂಡು ಸಂಕಷ್ಟ ಸೂತ್ರ ರೆಡಿಯಾಗಬೇಕು. ಆಗ ಮಾತ್ರ ಎರಡೂ ರಾಜ್ಯಗಳ ಪಾಲನೆ ಮಾಡಲು ಸಾಧ್ಯವಾಗುತ್ತದೆ. ಆ ಸೂತ್ರ ಇಲ್ಲದೇ ಇರುವುದಕ್ಕೆ ಈಗ ಸಮಸ್ಯೆ ಎದುರಾಗಿದೆ. ಎಲ್ಲಿಯವರೆಗೆ ನಾವು ಎರಡು ರಾಜ್ಯಗಳು ಬಡಿದಾಡಿಕೊಂಡು ಇದ್ದರೆ ಆಗಲ್ಲ. ಕೇಂದ್ರ ಸರ್ಕಾರ ಕೂಡ ಮಧ್ಯಸ್ಥಿಕೆ ವಹಿಸಬೇಕು. ಎರಡೂ ರಾಜ್ಯಗಳ ಸಮಸ್ಯೆಗೆ ಪರಿಹಾರ ತರಬೇಕು ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.