ಇಂಡಿಗೋ ರಾದ್ಧಾಂತ: ಬೆಂಗಳೂರು ಏರ್​​ಪೋರ್ಟ್​​ಗೆ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳ ಭೇಟಿ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಗಳ ಹಾರಾಟದಲ್ಲಿ ಸತತ ಎಂಟು ದಿನಗಳಿಂದ ಭಾರಿ ವ್ಯತ್ಯಯ ಉಂಟಾಗಿದೆ. ನೂರಾರು ವಿಮಾನಗಳು ರದ್ದುಗೊಂಡಿದ್ದು, ಸಾವಿರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ. ಈ ಸಮಸ್ಯೆ ಪರಿಶೀಲಿಸಲು ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ಭೇಟಿ ನೀಡಿದ್ದು, ಕೆಐಎಬಿ ಮತ್ತು ಇಂಡಿಗೋ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಪ್ರಯಾಣಿಕರ ಸಂಕಷ್ಟ ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಈ ನಡುವೆ ಇಂದು ಕೂಡ ಹಲವು ವಿಮಾನಗಳ ಹಾರಾಟ ರದ್ದುಗೊಂಡಿದೆ.

ಇಂಡಿಗೋ ರಾದ್ಧಾಂತ: ಬೆಂಗಳೂರು ಏರ್​​ಪೋರ್ಟ್​​ಗೆ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳ ಭೇಟಿ
ಇಂಡಿಗೋ ವಿಮಾನ
Edited By:

Updated on: Dec 09, 2025 | 11:47 AM

ದೇವನಹಳ್ಳಿ, ಡಿಸೆಂಬರ್​​ 09: ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಬೇಕಿದ್ದ ಇಂಡಿಗೋ ವಿಮಾನಗಳಲ್ಲಿ ಬಹಳ ವ್ಯತ್ಯಯವಾಗುತ್ತಿದೆ. ಸರಿ ಸುಮಾರು ಒಂದು ವಾರಗಳ ಕಾಲ ವಿಮಾನಗಳ ಸಂಚಾರದಲ್ಲಾದ ತೊಡಕಿನಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿವಿಧ ನಗರಗಳಿಗೆ ತೆರಳಲು ಮುಂಚಿತವಾಗಿಯೇ ಟಿಕೆಟ್​​ ಕಾಯ್ದಿರಿಸಿದ್ದರೂ ವಿಮಾನಗಳು ಹಾರಾಟ ನಡೆಸದ ಕಾರಣ ಅಥವಾ ವಿಳಂಬವಾಗದ ಕಾರಣ ಬಹಳ ಆಕ್ರೋಶ ವ್ಯಕ್ತವಾಗುತ್ತಿದೆ. ಆ ಬೆನ್ನಲ್ಲೇ ಬೆಂಗಳೂರು ಏರ್​​ಪೋರ್ಟ್​​ಗೆ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ವಿಮಾನಯಾನ ಸಚಿವಾಲಯದ ನಿರ್ದೇಶಕ ಸಂಕೇಶ್ ಮೆಹ್ತಾ ನೇತೃತ್ವದ ಅಧಿಕಾರಿಗಳ ತಂಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಏರ್​ಪೋರ್ಟ್​​ಗೆ ಭೇಟಿ ನೀಡಿದ್ದು, ಕೈಗೊಂಡ ಕ್ರಮಗಳ ಜೊತೆಗೆ ಸಮಸ್ಯೆಗಳ ಪರಿಶೀಲನೆ ನಡೆಸಿದೆ. ಈ ಬಗ್ಗೆ ಟರ್ಮಿನಲ್ 1ರಲ್ಲಿ ಆಡಳಿತ ಮಂಡಳಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದೆ. ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಸಂಕೇಶ್ ಮೆಹ್ತಾ, ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಲಗೇಜ್ ಸೇರಿದಂತೆ ಎಲ್ಲಾ ಸಮಸ್ಯೆಗಳು ಹಂತ ಹಂತವಾಗಿ ಸರಿ ಹೋಗುತ್ತಿವೆ. ಈಗಾಗಲೇ ವಿಮಾನಯಾನ ಸಚಿವಾಲಯದಿಂದ ಏರ್ಲೈನ್ಸ್ ಗೆ ಸೂಚನೆ ನೀಡಲಾಗಿದ್ದು, ವಿಮಾನಯಾನ ಸಚಿವರೇ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು ಏರ್ಪೋರ್ಟ್ ‌ದೇಶದಲ್ಲೇ ಅತಿ ಹೆಚ್ಚು ಪ್ರಯಾಣಿಕರು ಬರುವ ಸ್ಥಳ. ಹೀಗಾಗಿ ಏರ್​​ಪೋರ್ಟ್​​ಗೆ ಭೇಟಿ ನೀಡಿ‌ ಕೆಐಎಬಿ ಹಾಗೂ ಇಂಡಿಗೋ ಏರ್​​ಲೈನ್ಸ್​​ ಅಧಿಕಾರಿಗಳ ಜೊತೆ ಚರ್ಚೆ ನಡೆಸಿರೋದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮುಂದುವರಿದ ವಿಮಾನಗಳ ಹಾರಾಟ ವ್ಯತ್ಯಯ; KIABಯಿಂದ 61 ಇಂಡಿಗೋ ಫ್ಲೈಟ್​ಗಳು ರದ್ದು

ಇಂದು ಕೂಡ ವಿಮಾನಗಳ ಹಾರಾಟ ರದ್ದು

ಸತತ 8ನೇ ದಿನವೂ ಬೆಂಗಳೂರು ಏರ್​ಪೋರ್ಟ್​​ನಿಂದ ಹಾರಾಟ ನಡೆಸಬೇಕಿದ್ದ 121 ಇಂಡಿಗೋ ವಿಮಾನಗಳು ರದ್ದಾಗಿವೆ. ನಿರ್ಗಮಿಸಬೇಕಿದ್ದ 63, ಆಗಮಿಸಬೇಕಿದ್ದ 58 ವಿಮಾನಗಳು ಹಾರಾಟ ನಡೆಸಿಲ್ಲ. ರದ್ದಾದ ವಿಮಾನಗಳ ಕುರಿತು ಪ್ರಯಾಣಿಕರಿಗೆ ಮೊದಲೇ ಮಾಹಿತಿ ನೀಡಲಾಗಿದ್ದು, ಏರ್​ಪೋರ್ಟ್​ಗೆ ಬಾರದಂತೆ ಏರ್​​ಲೈನ್ಸ್​​ ಸಿಬ್ಬಂದಿ ಸಂದೇಶ ರವಾನಿಸಿದ್ದರು. ಈ ನಡುವೆಯೂ ವಿವಿಧೆಡೆಗೆ ತೆರಳಲು ಆಗಮಿಸಿರುವ ಜನರು ಬೆಳಗ್ಗೆಯಿಂದ ಟರ್ಮಿನಲ್ 1ರಲ್ಲಿ ಕಾದು ಕುಳಿತ ದೃಶ್ಯಗಳು ಕಂಡುಬಂತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Naveen Kumar

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More
Follow Us