ಬೆಂಗಳೂರಿನಲ್ಲಿ ವರ, ಭುವನೇಶ್ವರದಲ್ಲಿ ವಧು: ಇಂಡಿಗೋ ವಿಮಾನದಿಂದ ಮದುವೆಗೆ ವಿಘ್ನದ ಆತಂಕ

ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಹಲವು ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿವೆ. ಇದರಿಂದ ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪರದಾಡುತ್ತಿದ್ದಾರೆ. ಭುವನೇಶ್ವರದಲ್ಲಿ ನಡೆಯಬೇಕಿದ್ದ ಮದುವೆಗೆ ತೆರಳಲು ಟಿಕೆಟ್ ಕಾಯ್ದಿರಿಸಿದ್ದ ವರನ ಕುಟುಂಬಕ್ಕೂ ವಿಮಾನ ವ್ಯತ್ಯಯದಿಂದ ಆತಂಕ ಎದುರಾಗಿದೆ. ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಿನಲ್ಲಿ ವರ, ಭುವನೇಶ್ವರದಲ್ಲಿ ವಧು: ಇಂಡಿಗೋ ವಿಮಾನದಿಂದ ಮದುವೆಗೆ ವಿಘ್ನದ ಆತಂಕ
ಇಂಡಿಗೋ ವಿಮಾನ
Edited By:

Updated on: Dec 04, 2025 | 4:24 PM

ದೇವನಹಳ್ಳಿ, ಡಿಸೆಂಬರ್​​ 04: ಕಳೆದ ಎರಡು ದಿನಗಳಿಂದ ಬೆಂಗಳೂರಿನ ಕೆಂಪೇಗೌಡ ವಿಮಾಣ ನಿಲ್ದಾಣದಿಂದ ಹಾರಾಟ ನಡೆಸಬೇಕಿದ್ದ ಇಂಡಿಗೋ ವಿಮಾನಗಳಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಹಲವು ವಿಮಾನಗಳ ಸಂಚಾರ ರದ್ದಾಗಿದೆ. ಹೀಗಾಗಿ ಜನರು ಏರ್​ಪೋರ್ಟ್​​ನಲ್ಲಿ ಪರದಾಟ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿದ್ದು, ಸಂಸ್ಥೆಯ ವಿರುದ್ಧ ಪ್ರಯಾಣಿಕರು ಕಿಡಿ ಕಾರಿದ್ದಾರೆ. ಈ ನಡುವೆ ವಿಮಾನ ಹಾರಟದಲ್ಲಿನ ವ್ಯತ್ತಯದಿಂದ ಮದುವೆಯೊಂದಕ್ಕೂ ವಿಘ್ನದ ಆತಂಕ ಎದುರಾಗಿದೆ.

ಭುವನೇಶ್ವರದಲ್ಲಿ ಮಗನ ಮದುವೆ ಹಿನ್ನಲೆ ನಾಳೆ ಬೆಳಿಗ್ಗೆ 07.30ರ ವಿಮಾನಕ್ಕೆ ತಂದೆ ಮಹೇಂದ್ರ ಕುಮಾರ್​​ 110 ಟಿಕೆಟ್​​ ಬುಕ್​​ ಮಾಡಿದ್ದರು. ಒಂದು ಟಿಕೆಟ್​​ಗೆ ತಲಾ 7 ಸಾವಿರ ರೂಪಾಯಿ ಪಾವತಿಸಿದ್ದರು. ಇಂಡಿಗೋ ವಿಮಾನಗಳ ಹಾರಾಟದಲ್ಲಿನ ವ್ಯತ್ಯಯದ ಕಾರಣ ಆತಂಕಗೊಂಡ ಇವರು, ನಾಳಿನ ವಿಮಾನದ ಬಗ್ಗೆ ವಿಚಾರಿಸಿದ್ದಾರೆ. ಆದರೆ ವಿಮಾನ ಹಾರಾಟದ ಬಗ್ಗೆ ಏರ್​​ಲೈನ್ಸ್​ ಸಿಬ್ಬಂದಿಯಿಂದ ಯಾವುದೇ ಸ್ಪಷ್ಟ ಉತ್ತರ ಇವರಿಗೆ ಸಿಕ್ಕಿಲ್ಲ. ಇದರಿಂದಾಗಿ ಮದುವೆ ಸಂಭ್ರಮದಲ್ಲಿದ್ದ ಕುಟುಂಬದಲ್ಲೀಗ ಆತಂಕ ಮನೆ ಮಾಡಿದೆ. ವರ ಬೆಂಗಳೂರಿನಲ್ಲಿದ್ದರೆ ಭುವನೇಶ್ವರದಲ್ಲಿರುವ ವಧು‌ ಇದ್ದಾಳೆ. ರಸ್ತೆ ಮೂಲಕ ಹೋದರೂ ಸಮಯಕ್ಕೆ ಸರಿಯಾಗಿ ತಲುಪಲು ಆಗಲ್ಲ ಅಂತ ಕುಟುಂಬಸ್ಥರು ಅಲವತ್ತುಕೊಂಡಿದ್ದಾರೆ. ನಮಗೆ ಮದುವೆಗೆ ಹೋಗಲು ಅವಕಾಶ ಮಾಡಿಕೊಡಿ ಎಂದು ಟಿವಿ9 ಮುಂದೆ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ವಿಮಾನಗಳ ಹಾರಾಟದಲ್ಲಿ ವ್ಯತ್ಯಯ,  ಪ್ರಯಾಣಿಕರ ಕ್ಷಮೆಯಾಚಿಸಿದ ಇಂಡಿಗೋ

ನಾಳೆ ಸಂಜೆ ಭುವನೇಶ್ವರದಲ್ಲಿ ಮದುವೆ ನಡೆಯಲಿದ್ದು, ವರ, ಆತನ ತಂದೆ-ತಾಯಿ ಹಾಗೂ ಕುಟುಂಬಸ್ಥರಿಗೆ ಟಿಕೆಟ್ ಬುಕ್​​ ಮಾಡಲಾಗಿತ್ತು. ಬೆಂಗಳೂರಿನಿಂದ ಮಾತ್ರವಲ್ಲದೆ ಚೆನ್ನೈ, ಹೈದರಾಬಾದ್​​ನಿಂದಲು ಸಂಬಂಧಿಕರಿಗೆ ಇಂಡಿಗೋ ವಿಮಾನದಲ್ಲಿ ಮೂರು ತಿಂಗಳ ಹಿಂದೆಯೇ ಟಿಕೆಟ್ ಬುಕ್ ಮಾಡಲಾಗಿದೆ. ಹೀಗಿದ್ದರೂ ವರನ ತಂದೆಗೆ ವಿಮಾನ ಹಾರಾಟದ ಬಗ್ಗೆ ಏರ್​ಲೈನ್ಸ್​​ ಸಿಬ್ಬಂದಿ ಸರಿಯಾದ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನಲಾಗಿದೆ.

205 ಇಂಡಿಗೋ ವಿಮಾನಗಳ ಹಾರಾಟ ರದ್ದು

ಕಳೆದ 3 ದಿನಗಳಿಂದ ಕೆಐಎಬಿಗೆ ಆಗಮಿಸುವ ಮತ್ತು ನಿರ್ಗಮಿಸಬೇಕಿದ್ದ ಒಟ್ಟು 205 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ. ಮಂಗಳವಾರ 70, ಬುಧವಾರ 62, ಇಂದು 73 ವಿಮಾನಗಳು ಹಾರಾಟ ನಡೆಸಿಲ್ಲ. ದೇಶದ ವಿವಿಧೆಡೆಗೆ ತೆರಳಬೇಕಿದ್ದ ವಿಮಾನಗಳು ಕೊನೆ ಕ್ಷಣದಲ್ಲಿ ರದ್ದಾದ ಪರಿಣಾಮ, ಸಾವಿರಾರು ಪ್ರಯಾಣಿಕರ ಪರದಾಟ ನಡೆಸಿದ್ದಾರೆ. ತಿಂಗಳ ಹಿಂದೆಯೇ ಟಿಕೆಟ್ ಬುಕ್ ಮಾಡಿಕೊಂಡಿದ್ದರೂ ಕೊನೆ ಕ್ಷಣದಲ್ಲಿ ವಿಮಾನ ಹಾರಾಟ ರದ್ದಾಗಿದ್ದರಿಂದ ಪ್ರಯಾಣಿಕರು ಗರಂ ಆಗಿದ್ದಾರೆ. ಇಂಡಿಗೋ ಕೌಂಟರ್​ಗಳ ಮುಂದೆ ಪ್ರಯಾಣಿಕರು ಜಮಾವಣೆಯಾಗಿದ್ದು, ಟಿಕೆಟ್ ಕ್ಯಾನ್ಸಲ್​ ಮಾಡಲು ಕಾದು ಕುಳಿತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:23 pm, Thu, 4 December 25

ನವೀನ್ ಕುಮಾರ್ ಟಿ

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More
Follow Us