ಹೊಸಕೋಟೆ ಬ್ರಹ್ಮರಥೋತ್ಸವ ಸಮಿತಿಯಲ್ಲಿ ಮುಸ್ಲಿಂ ವ್ಯಕ್ತಿ: ಬಿಜೆಪಿ ಆಕ್ರೋಶ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಟೌನ್ ಕೋಟೆಯಲ್ಲಿರುವ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವದ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುವ ಕಾರಣ ಸಮಿತಿ ರಚಿಸುವಂತೆ ಶಾಸಕ ಶರತ್ ಬಚ್ಚೇಗೌಡ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅದರಂತೆ ಸರ್ಕಾರ 12 ಜನರ ಸಮಿತಿ ರಚಿಸಿದ್ದು, ಓರ್ವ ಮುಸ್ಲಿಂ ವ್ಯಕ್ತಿಯನ್ನು ಸದಸ್ಯ ಮಾಡಿದೆ. ಇದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು, ಮೇ 08: ಲೋಕಸಭೆ ಚುನಾವಣೆಯ (Lok Sbha Election) ಕಾವು ರಾಜ್ಯದಲ್ಲಿ ತಣ್ಣಗಾಗಿದ್ದರೂ, ರಾಜಕೀಯ ಪಕ್ಷಗಳ ದೂರುವಿಕೆ ಮುಂದುವರೆದಿದೆ. ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆ ಹೊಸಕೋಟೆ ಟೌನ್ (Hoskote) ಕೋಟೆಯಲ್ಲಿರುವ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ಸಮಿತಿಗೆ ಹಿಂದೂಯೇತರ ವ್ಯಕ್ತಿಯನ್ನು ಸದಸ್ಯನಾಗಿ ನೇಮಿಸಿದ ರಾಜ್ಯ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಬಿಜೆಪಿ (BJP) ಹರಿಹಾಯ್ದಿದೆ. ಅವಿಮುಕ್ತೇಶ್ವರ ಬ್ರಹ್ಮರಥೋತ್ಸವದ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುವ ಕಾರಣ ಸಮಿತಿ ರಚಿಸುವಂತೆ ಶಾಸಕ ಶರತ್ ಬಚ್ಚೇಗೌಡ ಸರ್ಕಾರಕ್ಕೆ ಮನವಿ ಮಾಡಿದ್ದರು. ಶಾಸಕರ ಮನವಿ ಮೇರೆಗೆ ತಹಶಿಲ್ದಾರ್ 12 ಜನ ಸದಸ್ಯರನ್ನು ನೇಮಕ ಮಾಡಿದ್ದಾರೆ. ಈ 12 ಜನರಲ್ಲಿ ನವಾಜ್ ಎಂಬ ಓರ್ವ ಮುಸ್ಲಿಂ ವ್ಯಕ್ತಿಯನ್ನು ಆಯ್ಕೆ ಮಾಡಿದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ ದೇವಸ್ಥಾನ ಸಮಿತಿ ಪದಾಧಿಕಾರಿಗಳ ಅಧಿಕೃತ ಜ್ಞಾಪನಾ ಪತ್ರ ಪೋಸ್ಟ್ ಮಾಡಿ ಕಾಂಗ್ರೆಸ್ ಬಗ್ಗೆ ಎಚ್ಚರ ಎಂದು ಬರೆದು ಬರೆದುಕೊಂಡಿದೆ.
ಇದನ್ನೂ ಓದಿ: ಆನೇಕಲ್ ಬ್ರಹ್ಮರಥೋತ್ಸವದಲ್ಲಿ ಡೊಳ್ಳುವಾದ್ಯಕ್ಕೆ ಹೆಜ್ಜೆಹಾಕಿದ ಹಿರಿಮಹಿಳೆ ದಳಪತಿ ಸಿನಿಮಾ ಹಾಡಿನ ದೃಶ್ಯವೊಂದನ್ನು ನೆನಪಿಸಿದರು!
ಬಿಜೆಪಿ ಟ್ವೀಟ್
ಹೊಸಕೋಟೆಯ ಶ್ರೀ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮೋತ್ಸವ ಕಾರ್ಯಕ್ರಮದ ಮೇಲ್ವಿಚಾರಣೆಗೆ ಕಾಂಗ್ರೆಸ್ ‘ನವಾಜ್’ ಅವರನ್ನು ನೇಮಿಸಿದೆ. ನಮ್ಮ ದೇವಸ್ಥಾನಗಳನ್ನು ಲೂಟಿ ಮಾಡಲು ಯತ್ನಿಸಿದ ನಂತರ ಹಿಂದೂ ದ್ವೇಷಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಈಗ ಹಿಂದೂಯೇತರರನ್ನು ನೇಮಿಸುವ ಮೂಲಕ ದೇವಾಲಯಗಳು ಮತ್ತು ಅವುಗಳ ಸಂಪನ್ಮೂಲಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ಮಾಡಿದೆ.
Congress appointed ‘Nawaz’ to oversee the Brahmotsavam event at the Shri Avimukteshwara Swamy Temple in Hoskote.
After attempting to loot our temples, the Hindu-hating CM @siddaramaiah now seeks to control temples & their resources by appointing non-Hindus.
Congress govt in… pic.twitter.com/We1rCUZdVD
— BJP Karnataka (@BJP4Karnataka) May 8, 2024
ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಒಂದು ನಿರ್ದಿಷ್ಟ ಸಮುದಾಯದ ಪರವಾಗಿ ಇದ್ದು, ಹಿಂದೂಗಳ ಹಕ್ಕುಗಳನ್ನು ಕಸಿದುಕೊಳ್ಳುವ ರಾಹುಲ್ ಗಾಂಧಿಯವರ ಭ್ರಮೆಯ ಕಲ್ಪನೆಗಳನ್ನು ಕಾರ್ಯಗತಗೊಳಿಸಲು ಆತುರ ತೋರುತ್ತಿದೆ. ಇದು ಕರ್ನಾಟಕದಲ್ಲಿ ಕೇವಲ ಒಂದು ದೇವಾಲಯ, ನಾಳೆ ಅದು ಭಾರತದ ಪ್ರತಿಯೊಂದು ದೇವಾಲಯವಾಗಬಹುದು. ಜನರು ಕಾಂಗ್ರೆಸ್ ಬಗ್ಗೆ ಎಚ್ಚರ ವಹಿಸಿ ಎಂದು ಹೇಳಿದೆ.
ಈ ಮೂಲಕ ರಾಜ್ಯ ಬಿಜೆಪಿ ಮತ್ತೆ ರಾಜ್ಯ ಕಾಂಗ್ರೆಸ್ ವಿರುದ್ಧ ಹಿಂದೂ ಅಸ್ತ್ರ ಪ್ರಯೋಗಿಸಿದೆ. ಹಿಂದೂ ದೇವಾಲಯಕ್ಕೆ ಹಿಂದೂಯೇತರ ವ್ಯಕ್ತಿಯ ನೇಮಕವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ