ಬೆಂಗಳೂರು ಹೊರವಲಯದಲ್ಲಿ ಮತ್ತೊಂದು ರೈಲು ಮಾರ್ಗ: ಆರಂಭದಲ್ಲೇ ವಿಘ್ನ
ದೇವನಹಳ್ಳಿ ಬಳಿ ಕೆಂಪೇಗೌಡ ವಿಮಾನ ನಿಲ್ದಾಣ ಕಾರ್ಯಾರಂಭಿಸಿದ ನಂತರ ರಾಜ್ಯ ಮತ್ತು ಕೇಂದ್ರದಿಂದ ನೂರಾರು ಹೊಸ ಯೋಜನೆಗಳು ಈ ಭಾಗದಲ್ಲಿ ಜಾರಿಯಾಗುತ್ತಿದ್ದು ಸಾವಿರಾರು ಎಕರೆ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡಿದೆ. ಈ ಬೆನ್ನಲ್ಲೇ ಇದೀಗ ಮತ್ತೊಂದು ಹೊಸ ರೈಲು ಮಾರ್ಗಕ್ಕೆ ಸರ್ಕಾರ ಮುಂದಾಗಿದ್ದು, ಅದರ ವಿರುದ್ದ ಸ್ಥಳಿಯ ರೈತರು ಹೋರಾಟದ ಹಾದಿ ಹಿಡಿಯಲು ಮುಂದಾಗಿದ್ದಾರೆ.

ದೇವನಹಳ್ಳಿ, ಡಿಸೆಂಬರ್ 23: ನಿತ್ಯ ನೂರಾರು ರೈಲುಗಳು ಬೆಂಗಳೂರಿನಿಂದ (Bengalu) ರಾಜ್ಯದ ವಿವಿಧೆಡೆಗೆ, ಅಂತರರಾಜ್ಯ ಸೇರಿದಂತೆ ದೇಶದ ವಿವಿಧ ಮೂಲೆಗಳೆಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗಕ್ಕೆ ಮತ್ತೊಂದು ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಯಶವಂತಪುರದಿಂದ ರಾಜಾನಕುಂಟೆ, ದೊಡ್ಡಬಳ್ಳಾಪುರ ಮಾರ್ಗವಾಗಿ ಈ ರೈಲು ಹಳಿ ಹಾದು ಹೋಗಿದ್ದು, ಇದೇ ರೈಲು ಹಳಿಗೆ ಹೊಸ ರೈಲು ಮಾರ್ಗ ಸಂರ್ಪ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ಸರ್ಕಾರದ ವಿರುದ್ದ ಇದೀಗ ಸ್ಥಳೀಯ ರೈತರು ಹೋರಾಟದ ಹಾದಿ ಹಿಡಿದಿದ್ದು, ಆರಂಭದಲ್ಲೇ ವಿಘ್ನ ಎದುರಾಗಿದೆ.
ಹೊಸ ರೈಲು ಮಾರ್ಗದ ವಿರುದ್ಧ ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಈಗಾಗಲೆ ಯಲಹಂಕದಿಂದ ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರಕ್ಕೆ ಎರಡು ಪ್ರತ್ಯೇಕ ರೈಲು ಮಾರ್ಗಗಳು ಹಾದು ಹೋಗಿದ್ದು ನಿತ್ಯ ನೂರಾರು ರೈಲುಗಳು ಇದೇ ಹಳಿಗಳ ಮೂಲಕ ಸಂಚರಿಸುತ್ತವೆ. ಆದರೆ ಇದೀಗ ಈ ಎರಡು ರೈಲು ಮಾರ್ಗಗಳ ಮಧ್ಯೆ ಸಂಪರ್ಕಕ್ಕೆ ರಾಜಾನುಕುಂಟೆಯಿಂದ ಬೆಟ್ಟಹಲಸೂರಿಗೆ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಮುಂದಾಗಿದೆ.
ಐದು ಗ್ರಾಮಗಳಲ್ಲಿ ಭೂಸ್ವಾಧೀನ: ರೈತರಿಗೆ ಆತಂಕ
ಹೊಸ ರೈಲು ಮಾರ್ಗಕ್ಕಾಗಿ ಸರ್ಕಾರ ರಾಜಾನುಕುಂಟೆಯಿಂದ ತಿಮ್ಮಸಂದ್ರ ಬೆಟ್ಟಹಲಸೂರು ಮೂಲಕ ಐದು ಗ್ರಾಮಗಳ ಗ್ರಾಮಸ್ಥರ ಜಮೀನು ವಶಕ್ಕೆ ಮುಂದಾಗಿದೆ ಎನ್ನಲಾಗಿದೆ. ಹೀಗಾಗಿ ಕೇಂದ್ರದ ವಿರುದ್ದ ಸ್ಥಳೀಯ ರೈತರು ರೊಚಿಗೆದ್ದಿದ್ದಾರೆ. ಅಲ್ಲದೆ, ಈಗಾಗಲೇ ಎರಡು ಹಳಿ ಇರುವುದರಿಂದ ನಾವು ಜಮೀನು ಕೊಡಲ್ಲ ಎಂದು ರೈತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.

ತಿಮ್ಮಸಂದ್ರ ಗ್ರಾಮದಲ್ಲಿ ರೈತರ ಪ್ರತಿಭಟನೆ
ಈಗಾಗೆಲೇ ದೇವನಹಳ್ಳಿ ಬಳಿ ವಿಮಾನ ನಿಲ್ದಾಣ ಬಂದ ನಂತರ ಸುತ್ತಮುತ್ತಲಿನ ಬಹುತೇಕ ರೈತರ ಜಮೀನುಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ವಾಧೀನಪಡಿಸಿಕೊಂಡಿವೆ. ಉಳಿದಿರುವ ಜಮೀನನ್ನು ಸಹ ವಶಕ್ಕೆ ಪಡೆದು ಹಣ ಲೂಟಿ ಮಾಡಲು ಹೊರಟಿದ್ದಾರೆ ಎಂದು ರೈತ ಮುಖಂಡರು ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ಇ ಹೊಸ ರೈಲು ಯೋಜನೆ ಕೈಬಿಡದಿದ್ದರೆ ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ರೈತರ ಹೋರಾಟಕ್ಕೆ ಕೇಂದ್ರ ಮಣಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.



