ಮನೆ ಮುಂದೆ ಆಟವಾಡುತ್ತಿದ್ದ ಹೆಣ್ಣುಮಗು ಅನುಮಾನಾಸ್ಪದ ಸಾವು: ಮಲತಾಯಿ ವಿರುದ್ಧವೇ ಗಂಭೀರ ಆರೋಪ
ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡಹಳ್ಳಿಯಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಹೆಣ್ಣುಮಗು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಮಲತಾಯಿಯೇ ಕೊಲೆ ಮಾಡಿದ್ದಾಳೆಂದು ಮಗುವಿನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಇದೇ ವಿಚಾರವಾಗಿ ಮನೆ ಬಳಿ ಭಾರಿ ಹೈಡ್ರಾಮಾವೇ ನಡೆದಿದೆ. ಗಲಾಟೆ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ಈ ವೇಳೆ ಮಧ್ಯ ಪ್ರವೇಶಿಸಿರುವ ಪೊಲೀಸರು ಪಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ನೆಲಮಂಗಲ, ಸೆಪ್ಟೆಂಬರ್ 10: ಮನೆ ಮುಂದೆ ಆಟವಾಡುತ್ತಿದ್ದ ಹೆಣ್ಣುಮಗುವೊಂದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡಹಳ್ಳಿಯಲ್ಲಿ ನಡೆದಿದೆ. ಲಿಕ್ಷಿತಾ (3) ಮೃತ ದುರ್ದೈವಿಯಾಗಿದ್ದು, ಮಲತಾಯಿಯೇ ಕೊಲೆ ಮಾಡಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ. ಇದೇ ವಿಚಾರವಾಗಿ ಮಲತಾಯಿ ಗಿರಿಜಾಗೆ ಕುಟುಂಬಸ್ಥರು ಥಳಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಮಗುವಿನ ದೇಹದ ಮೇಲೆ ಬರೆ ಹಾಗೂ ಗಾಯದ ಗುರುತುಗಳು ಪತ್ತೆಯಾಗಿರೋದು ಮಗುವಿನ ಸಾವಿಗೆ ಕಾರಣದ ಬಗ್ಗೆ ಅನುಮಾನ ಹೆಚ್ಚಿಸಿದೆ.
ಗಂಡ-ಹೆಂಡತಿ ಎಂದು ಹೇಳಿ ಮನೆ ಬಾಡಿಗೆಗೆ ಪಡೆದಿದ್ದ ಜೋಡಿ
ಅನಾರೋಗ್ಯದಿಂದ ಪತ್ನಿ ಮೃತಪಟ್ಟ ನಂತರ ಮಗುವಿನ ತಂದೆ ಜಗದೀಶ್, ಗಿರಿಜಾ ಜೊತೆಗೆ ವಾಸವಿದ್ದರು. ಇವರ ಜೊತೆಗೇ ಮೂರು ವರ್ಷದ ಮಗು ಲಿಕ್ಷಿತಾ ಕೂಡ ವಾಸವಿತ್ತು. ಗಿರಿಜಾರಿಗೂ ಕೂಡ ಈ ಹಿಂದೆ ಮದುವೆಯಾಗಿತ್ತು. ಹೀಗಿದ್ದರೂ ಜಗದೀಶ್ ಜೊತೆ ಲವ್ವಿಡವ್ವಿ ಮೂಲಕ ಓಡಿ ಬಂದು ನೆಲೆಸಿದ್ದರು. ಜಗದೀಶ್ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಗಂಡ-ಹೆಂಡತಿ ಎಂದು ಹೇಳಿ ಮನೆ ಬಾಡಿಗೆಗೆ ಪಡೆದು ಇವರು ವಾಸವಿದ್ದರು. ಇವರು ಮೂಲತಃ ನೆಲಮಂಗಲ ತಾಲೂಕಿನ ಗುರುವನಹಳ್ಳಿ ಮತ್ತು ವಸಂತನಗರದವರು ಎನ್ನಲಾಗಿದೆ.
ಇದನ್ನೂ ಓದಿ: ಲೋನ್ ಕಟ್ಟದ್ದಕ್ಕೆ ಬ್ಯಾಂಕ್ನಿಂದ ಕಾಲೇಜ್ ಸೀಜ್: ಆಯುರ್ವೇದಿಕ್ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ, ಅಹೋರಾತ್ರಿ ಧರಣಿ
3 ವರ್ಷದ ಮಗು ಲಿಕ್ಷಿತಾ ಸಾವಿಗೆ ಕುಟುಂಬಸ್ಥರ ಆಕ್ರೋಶ
ಜಗತ್ತನ್ನೇ ಅರಿಯದ ಮೂರು ವರ್ಷದ ಪುಟ್ಟ ಕಂದಮ್ಮನ ಅನುಮಾನಾಸ್ಪದ ಸಾವಿನ ಬೆನ್ನಲ್ಲೇ ಗಿರಿಜಾ ವಿರುದ್ಧ ಮಗುವಿನ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲತಾಯಿ ಗಿರಿಜಾಳೇ ಮಗುವನ್ನು ಕೊಲೆಗೈದಿದ್ದಾಳೆಂದು ಗಂಭೀರ ಆರೋಪ ಮಾಡಲಾಗಿದ್ದು, ಮನೆ ಬಳಿ ಭಾರಿ ಹೈಡ್ರಾಮಾವೇ ನಡೆದಿದೆ. ಗಲಾಟೆ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ಈ ವೇಳೆ ಮಧ್ಯ ಪ್ರವೇಶಿಸಿರುವ ಪೊಲೀಸರು ಪಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಜಗದೀಶ್ ಮತ್ತು ಗಿರಿಜಾ ಕಳೆದ 20 ದಿನದಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎಂಬ ವಿಚಾರವೂ ಘಟನೆ ಬೆನ್ನಲ್ಲೇ ಬಹಿರಂಗಗೊಂಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:14 pm, Thu, 10 September 26




