ತಾಯಿಯ ಫೋಟೋ ಶೂಟ್​​ ವೇಳೆ ಅವಘಡ: ನೀರಿಗೆ ಬಿದ್ದು ಕಣ್ಮುಚ್ಚಿದ 3 ವರ್ಷದ ಕಂದಮ್ಮ

ಆ ದಂಪತಿಗೆ ಅದಾಗಲೇ 3 ವರ್ಷದ ಮುದ್ದಾದ ಗಂಡು ಮಗುವೊಂದಿತ್ತು. ಈ ನಡುವೆ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ತಾಯಿ ಗರ್ಭಿಣಿ ಪೋಟೋಶೂಟ್​​ಗೆಂದು ಸ್ನೇಹಿತೆಯ ಜೊತೆ ತೆರಳಿದ್ದರು. ಆದ್ರೆ ಆ ವೇಳೆ ನಡೆಯಬಾರದ್ದು ನಡೆದು ಹೋಗಿದೆ. ಏನೂ ಅರಿಯದ ಪುಟ್ಟ ಕಂದಮ್ಮನ ಸಾವಾಗಿದೆ. ಅಷ್ಟಕ್ಕೂ ಆಗಿದ್ದೇನು ಎಂಬ ಮಾಹಿತಿ ಇಲ್ಲಿದೆ.

ತಾಯಿಯ ಫೋಟೋ ಶೂಟ್​​ ವೇಳೆ ಅವಘಡ: ನೀರಿಗೆ ಬಿದ್ದು ಕಣ್ಮುಚ್ಚಿದ 3 ವರ್ಷದ ಕಂದಮ್ಮ
ನೀರಿಗೆ ಬಿದ್ದು 3 ವರ್ಷದ ಕಂದಮ್ಮ ಸಾವು
Image Credit source: Tv9 Kannada

Updated on: Feb 15, 2026 | 12:09 PM

ನೆಲಮಂಗಲ/ಚಿಕ್ಕಮಗಳೂರು, ಫೆಬ್ರವರಿ 15: ಎರಡನೇ ಮಗುವಿನ ಖುಷಿಯಲ್ಲಿದ್ದ ದಂಪತಿಯ ಮೊದಲನೇ ಮಗು ನೀರಿಗೆ ಬಿದ್ದು ದಾರುಣವಾಗಿ ಮೃತಪಟ್ಟಿರುವ ಘಟನೆ ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಗಿಡ್ಡೆನಹಳ್ಳಿಯಲ್ಲಿ ನಡೆದಿದೆ. ಲಕ್ಷ್ಮೀರ್ (3) ಮೃತ ಮಗುವಾಗಿದ್ದು, ತಾಯಿ ಗರ್ಭಿಣಿ ಫೋಟೊ ಶೂಟ್ ಮಾಡಿಸುತ್ತಿದ್ದ ವೇಳೆ, ಆಟವಾಡಿಕೊಂಡಿದ್ದ ಮಗು ಸ್ಥಳದಲ್ಲಿದ್ದ ಸಣ್ಣ ನೀರಿನ ಪೂಲ್​​ಗೆ ಬಿದ್ದು ಮೃತಪಟ್ಟಿದೆ. ಮಗುವಿನ ವಿಚಾರದಲ್ಲಿನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎನ್ನಲಾಗಿದ್ದು, ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಆಸ್ಪತ್ರಗೆ ರವಾನೆ ಮಾಡಲಾಗಿದೆ.

ಲಕ್ಷ್ಮೀರ್ ಜೆ.ಪಿ. ನಗರ ನಿವಾಸಿಯಾಗಿರುವ ಸ್ವಾತಿ ಹಾಗೂ ಚರಣ್ ರಾಜ್ ದಂಪತಿಯ ಮಗುವಾಗಿದ್ದು, ಒಂದು ವಾರದ ಹಿಂದೆ ಕೆಲಸದ ನಿಮಿತ್ತ ಚರಣ್ ರಾಜ್ ವಿದೇಶಕ್ಕೆ ತೆರಳಿದ್ದರು. ಪೋಟೋ ಶೂಟ್ ಮಾಡಿಸುವುದಾಗಿ ಗಂಡನ ಬಳಿ ಹೇಳಿ ಸ್ವಾತಿ ಸ್ನೇಹಿತೆಯೊಂದಿಗೆ ಬಂದಿದ್ದರು. ಈ ವೇಳೆ ಅವಘಡ ನಡೆದಿದೆ. ಇನ್ನು ವಿದೇಶದಲ್ಲಿರುವ ಚರಣ್ ರಾಜ್ ನಾಳೆ ಬೆಂಗಳೂರಿಗೆ ಬರಲಿದ್ದು, ಈ ಹಿನ್ನೆಲೆ ಮಗುವಿನ ಮರಣೋತ್ತರ ಪರೀಕ್ಷೆ ನಾಳೆ ನಡೆಸಲಿದೆ ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ:  ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ; ಪತಿಯ ಪ್ರೀತಿ, ಪ್ರಣಯದಾಟ ಬಿಚ್ಚಿಟ್ಟ ಪತ್ನಿ

ಇಬ್ಬರ ಶವ ಪತ್ತೆ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ಭದ್ರಾ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟಿದ್ದ ಪ್ರಕರಣ ಸಂಬಂಧ ಅಗ್ನಿಶಾಮಕ ಸಿಬ್ಬಂದಿ ನದಿಯಿಂದ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ. ಕೊಡಗು ಮೂಲದ ಯೋಗೇಶ್(17), ಅಭಿಷೇಕ್(23) ಮೃತರಾಗಿದ್ದು, ಇವರ ಕುಟುಂಬ ಕಾಫಿ ತೋಟದ ಕೆಲಸಕ್ಕೆ ಬಂದಿದ್ದ ವೇಳೆ ನದಿಯಲ್ಲಿ ಈಜಲು ಇವರಿಬ್ಬರು ತೆರಳಿದ್ದರು. ಈ ವೇಳೆ ಕುಟುಂಬದವರ ಮುಂದೆಯೇ ನದಿಯಲ್ಲಿ ಮುಳುಗಿ ಪ್ರಾಣಬಿಟ್ಟಿದ್ದರು. ಮೃತ ದೇಹಗಳಿಗಾಗಿ ಹುಡುಕಾಡಿದ್ದ ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಈಜು ತಜ್ಞರು ಅಂತಿಮವಾಗಿ ಅವನ್ನು ಹೊರ ತೆಗೆದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.