
ಬೆಂಗಳೂರು, (ಜೂನ್ 06): ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ (Bengaluru Stampede) ಸಂಬಂಧಿಸಿದಂತೆ ಹೈಕೋರ್ಟ್ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಅಧಿಕಾರಿಗಳಿಗೆ ತಾತ್ಕಾಲಿಕ ರಿಲೀಫ್ ನೀಡಿದೆ. ಕೆಎಸ್‌ಸಿಎ ಅಧಿಕಾರಿಗಳ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಹೈಕೋರ್ಟ್ (Karnataka High Court) ಏಕಸದಸ್ಯ ಪೀಠದಿಂದ ಮಧ್ಯಂತರ ಆದೇಶ ನೀಡಿದೆ. ಇನ್ನೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ (Nikhil Sosale )ಅವರ ಬಂಧನ ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ವಿಚಾರಣೆ ಜೂನ್ 9 ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಿದೆ. ಹೀಗಾಗಿ ನಿಖಿಲ್ ಸೋಸಲೆಗೆ ಸದ್ಯ ಯಾವುದೇ ರಿಲೀಫ್ ಸಿಕ್ಕಿಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ ಅವರನ್ನು ಇಂದು(ಜೂನ್ 06) ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಇದನ್ನು ಪ್ರಶ್ನಿಸಿ ನಿಖಿಲ್ ಸೋಸಲೆ ಪತ್ನಿ ಮಾಳವಿಕಾ ನಾಯ್ಕ್ ರಿಟ್ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ಇಂದು(ಜೂನ್ 06) ಹೈಕೋರ್ಟ್ ನಲ್ಲಿ ನಡೆದಿದ್ದು, ನಿಖಿಲ್ ಸೋಸಲೆ ಪರವಾಗಿ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದರು.
ವಕೀಲ ಸಂದೇಶ್ ಚೌಟ : ನಿಖಿಲ್ ಸೋಸಲೆ ಅವರನ್ನು ಕಾನೂನುಬಾಹಿರವಾಗಿ ಬಂಧಿಸಿದ್ದಾರೆ. ಮುಂಜಾನೆ 4.30ಕ್ಕೆ ನಿಖಿಲ್ ಸೋಸಲೆ ಬಂಧಿಸಿದ್ದಾರೆ. ಆದ್ರೆ, ದೂರು ನೀಡಿದ ಪೊಲೀಸ್ ಅಧಿಕಾರಿಯೇ ಸಸ್ಪೆಂಡ್ ಆಗಿದ್ದಾರೆ.
ಹೈಕೋರ್ಟ್ ಜಡ್ಜ್: ಬಂಧನ ಕಾನೂನುಬಾಹಿರವೆಂದು ಹೇಗೆ ಹೇಳುತ್ತೀರಿ?
ಸಂದೇಶ್ ಚೌಟ: ಸಿಎಂ ಸೂಚನೆ ಮೇರೆಗೆ ನಿಖಿಲ್ ಬಂಧಿಸಲಾಗಿದೆ-
ಹೈಕೋರ್ಟ್ ಜಡ್ಜ್: ಆದರೆ ಎಫ್ಐಆರ್ ಬೆಳಗ್ಗೆಯೇ ಆಗಿದೆಯಲ್ಲ. ಎಫ್ಐಆರ್ ಆದ ಮೇಲೆ ಬಂಧಿಸುವ ಅಧಿಕಾರವಿದೆಯಲ್ಲ.
ಸಂದೇಶ್ ಚೌಟ: ಆದರೆ ಸಿಎಂ ಸುದ್ದಿಗೋಷ್ಠಿಯಲ್ಲಿ ಬಂಧಿಸುವಂತೆ ಸೂಚನೆ ನೀಡಿದ್ದಾರೆ.
ಹೈಕೋರ್ಟ್ ಜಡ್ಜ್ : ಇದಕ್ಕೆ ದಾಖಲೆಗಳಿದ್ದರೆ ನೀಡಿ ಎಂದು ಹೈಕೋರ್ಟ್ ಜಡ್ಜ್ ಅರ್ಜಿದಾರರ ಪರ ವಕೀಲ ಸಂದೇಶ್ ಚೌಟ ಅವರಿಗೆ ಸೂಚಿಸಿತು. ಬಳಿಕ ಸಂದೇಶ್ ಚೌಟ ಅವರು ಪತ್ರಿಕೆಯ ವರದಿಯನ್ನು ಕೋರ್ಟ್ ಗೆ ಸಲ್ಲಿಸಿದರು.
ಸಂದೇಶ್ ಚೌಟ: ತನಿಖಾಧಿಕಾರಿ ಮಾತ್ರ ಬಂಧನಕ್ಕೆ ನಿರ್ಧರಿಸಬೇಕು, ಸಿಎಂ ಅಲ್ಲ. ಸಸ್ಪೆಂಡ್ ಆದ ಅಧಿಕಾರಿಯೇ ತನಿಖಾಧಿಕಾರಿಯಾಗಿದ್ದರು. ಕ್ಯಾಬಿನೆಟ್ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಈ ಸೂಚನೆ ನೀಡಿದ್ದಾರೆ ಎಂದು ವಾದ ಮಂಡಿಸಿದರು.
ನಿಖಿಲ್ ಸೋಸಲೆ ಪರ ಹಿರಿಯ ವಕೀಲ ಸಂದೇಶ್ ಚೌಟ ಅವರ ವಾದ ಆಲಿಸಿದ ಹೈಕೋರ್ಟ್, ಅರ್ಜಿ ವಿಚಾರಣೆಯನ್ನು ಜೂನ್ 9 ಮಧ್ಯಾಹ್ನ 2.30ಕ್ಕೆ ಮುಂದೂಡಿತು.