
ಬೆಂಗಳೂರು, ಸೆ.10: ರಾಜಧಾನಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಸಾರಿಗೆ ಇಲಾಖೆ ಚಾಲನೆ ನೀಡಿದೆ. ಇನ್ಮುಂದೆ ಓಲಾ (Ola), ಊಬರ್ (Uber) ಹಾಗೂ ಇತರ ಖಾಸಗಿ ಆ್ಯಪ್ ಆಧಾರಿತ ಟ್ಯಾಕ್ಸಿ ಬಳಸುವ ಪ್ರಯಾಣಿಕರು ‘ನಮ್ಮ ಬಿಎಂಟಿಸಿ ಮೊಬೈಲ್ ಆ್ಯಪ್ 2.0’ ಮೂಲಕ ಬಿಎಂಟಿಸಿ ಬಸ್‌ಗಳ ಲೈವ್ ಟ್ರ್ಯಾಕಿಂಗ್ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಸಾರಿಗೆ ಇಲಾಖೆ, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಖಾಸಗಿ ಆ್ಯಪ್ ಆಧಾರಿತ ಟ್ಯಾಕ್ಸಿಗಳಿಗೂ ಬಿಎಂಟಿಸಿಯ ಲೈವ್ ಟ್ರ್ಯಾಕಿಂಗ್ ಆ್ಯಪ್ ವಿಸ್ತರಿಸುವಂತೆ ನಿರ್ದೇಶನ ನೀಡಿದ್ದಾರೆ. ಇದರಿಂದ ಕ್ಯಾಬ್‌ಗಳಿಂದ ಇಳಿಯುವ ಪ್ರಯಾಣಿಕರು ತಮ್ಮ ಗಮ್ಯಸ್ಥಾನ ತಲುಪಲು ಲಭ್ಯವಿರುವ ಬಿಎಂಟಿಸಿ ಬಸ್‌ಗಳ ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಮೆಟ್ರೋ ಪ್ರಯಾಣಿಕರಿಗೆ ಲಾಸ್ಟ್ ಮೈಲ್ ಕನೆಕ್ಟಿವಿಟಿ ಕಲ್ಪಿಸಲು ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ 200 ಮಿನಿ ಏರ್-ಕಂಡೀಷನ್ಡ್ ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸುವಂತೆ ಸಚಿವರು ಬಿಎಂಟಿಸಿಗೆ ಸೂಚಿಸಿದ್ದಾರೆ. ಕೇಂದ್ರ ಸರ್ಕಾರದ ಈ ಯೋಜನೆಯಡಿ ಬಿಎಂಟಿಸಿ ಖರೀದಿಸುತ್ತಿರುವ ಒಟ್ಟು 4,500 ಎಲೆಕ್ಟ್ರಿಕ್ ಬಸ್‌ಗಳ ಪೈಕಿ ಈ 200 ಮಿನಿ ಎಸಿ ಬಸ್‌ಗಳು ಭಾಗವಾಗಿರಲಿವೆ.ಈ ಮಿನಿ ಬಸ್‌ಗಳು ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ವಸತಿ ಬಡಾವಣೆಗಳು ಹಾಗೂ ಪ್ರಮುಖ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಿವೆ.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಕಳೆದುಹೋಗಿ, ಬೇರೆ ಯಾರೋ ಅದನ್ನು ಬಳಸಿದರೆ, ನೀವೇ ಬಿಲ್ ಕಟ್ಟಬೇಕಾ? ಇಲ್ಲಿದೆ ಉತ್ತರ
ಬೆಂಗಳೂರಿನ ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳ ಅನುಕೂಲಕ್ಕಾಗಿ ಬಿಎಂಟಿಸಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಹವಾನಿಯಂತ್ರಿತ ಬಸ್‌ಗಳನ್ನು ಒದಗಿಸಲಾಗುವುದು. ಈ ಕುರಿತು ಸಂಬಂಧಪಟ್ಟ ಕಂಪನಿಗಳೊಂದಿಗೆ ತಕ್ಷಣವೇ ಮಾತುಕತೆ ನಡೆಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:09 am, Thu, 10 September 26