
ಬೆಂಗಳೂರು, (ಅಕ್ಟೋಬರ್ 07): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನ ತಾಳಲಾರದೇ ನರಳಾಡುವವರು ಲಕ್ಷಾಂತರ ಮಂದಿ, ಆದರೆ ಸಂಚಾರ ನಿಯಮಗಳನ್ನ ಪಾಲಿಸೋಕೆ ನಿರಾಸಕ್ತಿ. ಹೌದು… ಸಂಚಾರ ಪೊಲೀಸರು ನೀಡಿರುವ ದಾಖಲೆಯಿಂದ ಇದು ತಿಳಿದುಬರುತ್ತಿದೆ. ಟ್ರಾಫಿಕ್ ಪೊಲೀಸರ ನಿರಂತರ ಜಾಗೃತಿಯೂ ಹೊರತಾಗಿಯೂ ಸಂಚಾರ ನಿಯಮಗಳನ್ನ ಪಾಲನೆ ಮಾಡುವತ್ತ ವಾಹನ ಸವಾರರು ಮನಸ್ಸು ಮಾಡುತ್ತಿಲ್ಲ. 2026 ರ ಆಗಸ್ಟ್ ವರೆಗೆ ಅಂದರೆ ಕೇವಲ ಎಂಟೇ ತಿಂಗಳಲ್ಲಿ ಬರೋಬ್ಬರಿ 24.54 ಲಕ್ಷ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಬೇಕಾಬಿಟ್ಟಿ ಪಾರ್ಕಿಂಗ್, ಸಿಗ್ನಲ್ ಜಂಪ್, ಒನ್ ವೇ ಹಾಗೂ ನೋ ಎಂಟ್ರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಳವಾಗಿವೆ.
2025ರಲ್ಲಿ 21.08 ಲಕ್ಷ ಪ್ರಕರಣಗಳು ದಾಖಲಾಗಿದ್ದು, ಈ ಅಂದರೆ 2026ರಲ್ಲಿ ಕೇವಲ ಎಂಟೇ ತಿಂಗಳಿಗೆ ಆ ದಾಖಲೆ ಉಡೀಸ್ ಮಾಡಿದ್ದಾರೆ ವಾಹನ ಸವಾರರು. ಅಪಾಯಕಾರಿ ವಾಹನ ಚಾಲನೆ, ಸಿಗ್ನಲ್ ಜಂಪ್, ನೋ ಪಾರ್ಕಿಂಗ್, ನೋ ಎಂಟ್ರಿ, ಫುಟ್ ಪಾತ್ ಡ್ರೈವಿಂಗ್ ಇವುಗಳಲ್ಲಿ ಪ್ರಮುಖವಾಗಿದೆ. ವಾಹನಗಳ ಸಂಖ್ಯೆ ಏರಿಕೆಯೊಂದಿಗೆ ನಿಯಮ ಪಾಲನೆಗೆ ನಿರ್ಲಕ್ಷ್ಯವೂ ಹೆಚ್ಚುತ್ತಿದೆ.
ಇನ್ನು ಸಂಚಾರ ನಿಯಮಗಳ ಉಲ್ಲಂಘನೆಯ ಅಂಕಿ ಅಂಶಗಳನ್ನ ನೋಡುವುದಾದರೆ 2024ರಲ್ಲಿ 18,63,476 ಕೇಸ್ಗಳು ದಾಖಲಾಗಿದ್ದರೆ, 2025ರಲ್ಲಿ 21,08,932 ಕೇಸ್ಗಳು ದಾಖಲಾಗುವ ಮೂಲಕ ಏರಿಕೆ ಕಂಡಿದೆ. ಇನ್ನು ಪ್ರಸ್ತುತ ವರ್ಷದ ಆಗಸ್ಟ್ ತಿಂಗಳಲ್ಲೇ ಬರೋಬ್ಬರಿ 24,54,286 ಕೇಸ್ಗಳು ದಾಖಲಾಗುವ ಮೂಲಕ ಕಳೆದ ವರ್ಷದ ಎಲ್ಲಾ ದಾಖಲೆಗಳು ವರ್ಷ ಮುಗಿಯುವ ಮುನ್ನವೇ ಬ್ರೇಕ್ ಆಗಿದೆ.
ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಮಿತಿಮೀರಿರುವ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಪೊಲೀಸರು ಮಾತ್ರವಲ್ಲ ವಾಹನ ಸವಾರರು ಮುಂದಾಗಬೇಕಿದೆ. ಸ್ವಯಂಪ್ರೇರಿತರಾಗಿ ಸಂಚಾರ ನಿಯಮಗಳನ್ನ ಪಾಲನೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ.