ನೆರೆ ಸಂತ್ರಸ್ತರಿಗಾಗಿ ಕಂದಾಯ ಇಲಾಖೆಯಿಂದ 255 ಕೋಟಿ ಹಣ ಬಿಡುಗಡೆ: ಸಚಿವ ಆರ್ ಅಶೋಕ್
ನೆರೆ ಸಂತ್ರಸ್ತರಿಗಾಗಿ ಕಂದಾಯ ಇಲಾಖೆಯಿಂದ 255 ಕೋಟಿ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರು: ನೆರೆ ಸಂತ್ರಸ್ತರಿಗಾಗಿ ಕಂದಾಯ ಇಲಾಖೆಯಿಂದ 255 ಕೋಟಿ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ (R Ashok) ಹೇಳಿದ್ದಾರೆ. ಮಳೆ ಹಾನಿ ಕುರಿತ ವರದಿ ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ಅನದಾನ ಕೋರಿ ಮನವಿ ಸಲ್ಲಿಸಲಾಗುತ್ತೆ. ಎನ್ಡಿಆರ್ಫ್ (NDRF) ಅಡಿ 1022.05 ಕೋಟಿ ಅನುದಾನ ಬರಬೇಕಿದೆ ಎಂದು ತಿಳಿಸಿದರು.
ಈಗಾಗಲೇ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಭೇಟಿ ನೀಡ್ತಿದ್ದಾರೆ. ಮಳೆಯಿಂದ ಮನೆಗಳಿಗೆ ಹಾನಿಯಾದರೆ ತಕ್ಷಣ ಪರಿಹಾರ ನೀಡಲಾಗುತ್ತದೆ. ರಾಜ್ಯದಲ್ಲಿ ಜೂನ್ನಿಂದ ಈವರೆಗೂ ಮಳೆಯಿಂದ 96 ಜನ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯೊಳಗೆ ರಾಮನಗರ, ಬಳ್ಳಾರಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 992 ಮನೆಗಳು ಹಾನಿಯಾಗಿವೆ. 10, 274 ಅರ್ಧ ಮನೆ ಹಾನಿಯಾಗಿವೆ. ನಿನ್ನೆ ಒಂದೇ ದಿನದಲ್ಲಿ 148 ಮನೆಗಳು ಹಾನಿಯಾಗಿದ್ದು, 258 ಪಶುಗಳು ಸಾವನ್ನಪ್ಪಿವೆ ಎಂದು ಹೇಳಿದರು.
ರಾಜ್ಯದಲ್ಲಿ 820 ಮಿಲಿಮೀಟರ್ ಮಳೆಯಾಗಿದೆ. ದಾವಣಗೆರೆ, ತುಮಕೂರು, ವಿಜಯಪುರ, ಮೈಸೂರು, ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದೆ. ಒಟ್ಟು 27 ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಮಳೆಯಾಗಿದೆ. ರಾಮನಗರ, ಮಂಡ್ಯದಲ್ಲಿ 9 ಮಿಲಿಮೀಟರ್ನಷ್ಟು ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ 20 ಜಿಲ್ಲೆಯಲ್ಲಿ ಮಳೆ ಎಫೆಕ್ಟ್ ಆಗಿದೆ. 29, 967 ಜನರಿಗೆ ಸಮಸ್ಯೆ ಆಗಿದೆ ಎಂದು ತಿಳಿಸಿದರು.
ಜುಲೈ ಮತ್ತು ಅಗಸ್ಟ್ ತಿಂಗಳಿನಲ್ಲಿ ಕೃಷಿ ಬೆಳೆ 3,100.83 ಹೆಕ್ಟೇರ್, ತೋಟಗಾರಿಕಾ ಬೆಳೆ 201.95 ಹೆಕ್ಟೇರ್, ಬಹುವಾರ್ಷಿಕ ಬೆಳೆ 265.51 ಹೆಕ್ಟೇರ್, ಮೆಕ್ಕಲು ಮತ್ತು ಕೃಷಿ ಭೂಮಿ 0.84 ಹೆಕ್ಟೇರ್ ಮತ್ತು ರೇಷ್ಮೆ ಬೆಳೆ 0.13 ಹೆಕ್ಟೇರ್ನಷ್ಟು ಭೂಮಿ ನಾಶವಾಗಿದೆ. 467 ಜಾನುವಾರುಗಳು ಸಾವನ್ನಪ್ಪಿವೆ. 24,408 ಮನೆಗಳು ಹಾನಿಯಾಗಿವೆ. 22,734 ಕಿ.ಮೀ ರಸ್ತೆ ಹಾನಿಯಾಗಿದ್ದು, ಇದರಲ್ಲಿ ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳು 4159 ಕಿ.ಮೀ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿಚಾರವಾಗಿ ಮಾತನಾಡಿದ ಅವರು ಮೈದಾನದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಗಣೇಶೋತ್ಸವ ಆಚರಣೆಗೆ 5 ಅರ್ಜಿಗಳು ಬಂದಿವೆ. ಅದರಲ್ಲಿ 3 ಅರ್ಜಿಗಳು ಹೊರಗಿನ ಅರ್ಜಿಗಳಾದ ಕಾರಣ ಅವುಗಳನ್ನು ರದ್ದು ಮಾಡಿದ್ದೇವೆ. ಯಾರು ಉತ್ಸವ ಮಾಡಿದರೆ ಗೊಂದಲ ಕಡಿಮೆಯಾಗುತ್ತದೆ ಎಂಬ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ಇನ್ನೂ ಘೋಷಣೆ ಮಾಡಲು 10 ಗಂಟೆಗಳ ಕಾಲ ಸಮಯ ಇದೆ. ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಮಧ್ಯಾಹ್ನ 2 ಗಂಟೆಗೆ ಮುಂದೂಡಲ್ಪಟ್ಟಿದೆ ಎಂದು ಹೇಳಿದ್ದಾರೆ.
ಸ್ಥಳೀಯ ನಾಯಕರ ಜೊತೆ ಸಂಪರ್ಕದಲ್ಲಿದ್ದೇನೆ. ಕಾನೂನು ಸುವ್ಯವಸ್ಥೆ ಕಾಪಾಡುವ ಎಲ್ಲಾ ವ್ಯವಸ್ಥೆ ಮಾಡುತ್ತೇವೆ. ಗಣೇಶೋತ್ಸವ ಮಾಡಬೇಕೋ ಮಾಡಬಾರದೋ ಎಂಬ ಬಗ್ಗೆ ಸರ್ಕಾರ ಒಂದು ಗಟ್ಟಿ ನಿಲುವು ತೆಗೆದುಕೊಳ್ಳುತ್ತದೆ. ನಮ್ಮ ಎಜಿ ಸುಪ್ರೀಂ ಕೋರ್ಟ್ನಲ್ಲಿ ಇದ್ದಾರೆ. ನಾವು ಕೇವಿಯಟ್ ಹಾಕಿದ್ದೇವೆ. ಯಾರು ಏನೇ ಹೇಳಿದರೂ ಇದು ಕಂದಾಯ ಇಲಾಖೆ ಭೂಮಿ. ವಕ್ಫ್ ಬೋರ್ಡ್ಗೆ ಇದ್ದರೂ ಜಮೀನು ಕೊಡುವುದು ಕಂದಾಯ ಇಲಾಖೆ ಎಂದು ತಿಳಿಸಿದ್ದಾರೆ.
ಬೀದಿಯಲ್ಲಿ ಮಾತಾಡುವವರು ದಾಖಲೆ ತೆಗೆದುಕೊಂಡು ಬರಲಿ. ದಾಖಲೆ ಕೊಡದೇ ಇದ್ದರೆ ಅದಕ್ಕೆ ಮೂರು ಕಾಸಿನ ಬೆಲೆ ಇಲ್ಲ. ಕರ್ನಾಟಕದಲ್ಲಿರುವ ಎಲ್ಲಾ ಆಸ್ತಿ ಕಂದಾಯ ಇಲಾಖೆಯದ್ದೇ. ಚಾಮರಾಜಪೇಟೆ ಶಾಸಕರು ಯಾರೂ ನನ್ನನ್ನು ಭೇಟಿ ಮಾಡಿಲ್ಲ. ಭೇಟಿ ಮಾಡಿದರೆ ಮಾತುಕತೆ ಮಾಡುತ್ತೇನೆ. ಸ್ಥಳೀಯ ಎರಡು ಅರ್ಜಿ ಸಲ್ಲಿಸಿದವರ ಪೂರ್ವಾಪರ ಪರಿಶೀಲನೆ ಮಾಡುತ್ತಿದ್ದೇವೆ. ಕಾನೂನು ಸುವ್ಯವಸ್ಥೆ ಎಲ್ಲವೂ ಸುಸ್ಥಿತಿಗೆ ಬಂದ ಮೇಲೆ ಎಲ್ಲವನ್ನೂ ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:49 pm, Tue, 30 August 22