
ಬೆಂಗಳೂರು, ನವೆಂಬರ್ 1: ಪುಸ್ತಕ ಓದುವ ಅಭ್ಯಾಸವನ್ನು ಜೀವನದ ಭಾಗವಾಗಿಸಿಕೊಳ್ಳಬೇಕು. ಪ್ರತಿದಿನ ಓದಿಗೆ ಸ್ವಲ್ಪ ಸಮಯ ಮೀಸಲಿಡುವ ಮೂಲಕ ಸಮಾಜದಲ್ಲಿ ಉತ್ತಮ ಓದುವ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಕರೆ ನೀಡಿದ್ದಾರೆ. ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ ಬೆಂಗಳೂರಿನ ಕೆಂಪೇಗೌಡನಗರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್ನ ‘ಕೇಶವಶಿಲ್ಪ’ ಸಭಾಂಗಣದಲ್ಲಿ ಆಯೋಜಿಸಿರುವ 6ನೇ ‘ಕನ್ನಡ ಪುಸ್ತಕ ಹಬ್ಬ–2026’ ಉದ್ಘಾಟಿಸಿ ಅವರು ಮಾತನಾಡಿದರು. ಅಕ್ಟೋಬರ್ 31ರಿಂದ ಡಿಸೆಂಬರ್ 6ರವರೆಗೆ ಒಟ್ಟು 37 ದಿನಗಳ ಕಾಲ ಈ ಸಾಹಿತ್ಯ ಮತ್ತು ಸಂಸ್ಕೃತಿ ಉತ್ಸವ ನಡೆಯಲಿದೆ.
ಪುಸ್ತಕ ಹಬ್ಬವೆಂದರೆ ಲೇಖಕ ಮತ್ತು ಓದುಗ ಭೇಟಿಯಾಗುವ ಸುಂದರ ಸಂದರ್ಭ. ಒಂದು ತಲೆಮಾರಿನ ಅನುಭವ ಮತ್ತೊಂದು ತಲೆಮಾರಿನ ಕುತೂಹಲದೊಂದಿಗೆ ಸಂವಾದ ನಡೆಸುವ ಅವಕಾಶ ಎಂದು ನ್ಯಾಯಮೂರ್ತಿ ಅರವಿಂದ ಕುಮಾರ್ ಹೇಳಿದರು. ಒಂದು ಪುಸ್ತಕದ ತೂಕ ಕೆಲವು ಗ್ರಾಂಗಳಷ್ಟಿರಬಹುದು. ಆದರೆ ಅದು ಹೊತ್ತಿರುವ ಅನುಭವ ಶತಮಾನಗಳದ್ದಾಗಿರಬಹುದು. ಪುಸ್ತಕದ ಪುಟಗಳು ಸೀಮಿತವಾಗಿದ್ದರೂ, ಅದು ತೆರೆದಿಡುವ ಸಾಧ್ಯತೆಗಳು ಅಪಾರವಾಗಿರುತ್ತವೆ. ಉತ್ತಮ ಪುಸ್ತಕದ ಮಹತ್ವ ಅದನ್ನು ಓದಿ ಮುಗಿಸಿದ ನಂತರವೂ ನಮ್ಮೊಳಗೆ ಅದರ ವಿಚಾರಗಳು ಮುಂದುವರಿಯುವುದರಲ್ಲಿ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡ ರಾಜ್ಯೋತ್ಸವದ ಹೊಸ್ತಿಲಿನಲ್ಲಿ ಕನ್ನಡ ಪುಸ್ತಕ ಹಬ್ಬ ಆರಂಭವಾಗಿರುವುದು ಅರ್ಥಪೂರ್ಣವಾಗಿದೆ. ಕನ್ನಡದ ಮೇಲಿನ ಅಭಿಮಾನವು ಓದುವ ಅಭ್ಯಾಸವಾಗಿ, ಬರೆಯುವ ಪ್ರೇರಣೆಯಾಗಿ ಹಾಗೂ ಮುಂದಿನ ತಲೆಮಾರಿಗೆ ಭಾಷೆಯನ್ನು ತಲುಪಿಸುವ ಹೊಣೆಗಾರಿಕೆಯಾಗಿ ಬೆಳೆಯಬೇಕು ಎಂದರು.
ಇಂದು ತಂತ್ರಜ್ಞಾನದ ಮೂಲಕ ಮಾಹಿತಿ ಅತ್ಯಂತ ವೇಗವಾಗಿ ಹರಡುತ್ತಿದೆ. ಆದರೆ ಯಾವುದೇ ಸಂದೇಶವನ್ನು ಮುಂದಕ್ಕೆ ಕಳುಹಿಸುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವ ತಾಳ್ಮೆ ಬೆಳೆಸಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಅರವಿಂದ ಕುಮಾರ್ ಕಿವಿಮಾತು ಹೇಳಿದರು.
ಉತ್ತಮ ಪುಸ್ತಕಗಳು ಆತುರದ ತೀರ್ಮಾನಗಳನ್ನು ತಡೆಯುತ್ತವೆ ಹಾಗೂ ವಿಚಾರದ ಹಲವು ಮುಖಗಳನ್ನು ಪರಿಚಯಿಸಿ ವಿವೇಕದಿಂದ ಯೋಚಿಸುವ ಶಕ್ತಿಯನ್ನು ನೀಡುತ್ತವೆ ಎಂದರು.
ಕನ್ನಡದ ಮೂಲಕ ಜಗತ್ತಿನ ಜ್ಞಾನವನ್ನು ಅರಿಯಲು ಭಾಷಾಂತರ ಸಾಹಿತ್ಯಕ್ಕೂ ಹೆಚ್ಚಿನ ಒತ್ತು ಸಿಗಬೇಕು. ರೈತ, ಕಾರ್ಮಿಕ ಹಾಗೂ ಸಮಾಜದ ಅಂಚಿನಲ್ಲಿರುವವರ ಬದುಕಿನ ಕುರಿತ ಕೃತಿಗಳನ್ನು ಓದಿದಾಗ ಮಾತ್ರ ಅವರ ನೋವು ಮತ್ತು ಸ್ವಾಭಿಮಾನವನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು. ಪ್ರತಿದಿನ ಓದಿಗೆ ಸ್ವಲ್ಪ ಸಮಯ ಮೀಸಲಿಡಬೇಕು. ಒಂದು ಒಳ್ಳೆಯ ಪುಸ್ತಕವನ್ನು ಮತ್ತೊಬ್ಬರಿಗೆ ಪರಿಚಯಿಸಬೇಕು. ಮಕ್ಕಳಿಗೆ ಕಥೆ ಓದಿ ಕೇಳಿಸಬೇಕು. ಸಾಧ್ಯವಾದಾಗ ಶಾಲೆ ಅಥವಾ ಗ್ರಂಥಾಲಯಗಳಿಗೆ ಉಪಯುಕ್ತ ಪುಸ್ತಕಗಳನ್ನು ನೀಡಬೇಕು. ಇಂತಹ ಸಣ್ಣ ಪ್ರಯತ್ನಗಳೇ ಸಮಾಜದಲ್ಲಿ ಓದುವ ಸಂಸ್ಕೃತಿಯನ್ನು ಬಲಪಡಿಸುತ್ತವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪದ್ಮಭೂಷಣ ಪುರಸ್ಕೃತ ಬಹುಶ್ರುತ ವಿದ್ವಾಂಸ ಶತಾವಧಾನಿ ಡಾ. ಆರ್. ಗಣೇಶ್, ಇಂದಿನ ಕಾಲದಲ್ಲಿ ಜನರನ್ನು ಸಭೆಗೆ ಕರೆತರುವುದು ಹಾಗೂ ಪುಸ್ತಕ ಓದುವಂತೆ ಮಾಡುವುದು ದೊಡ್ಡ ಸವಾಲಾಗಿದೆ ಎಂದು ಹೇಳಿದರು. ನಮಗೆ ಬೇಕಾದ ವಿಷಯಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಓದುವುದರಿಂದ ಜ್ಞಾನದ ಬೇರುಗಳು ಹೇಗೆ ಬೆಳೆದಿವೆ ಎಂಬುದು ಸಂಪೂರ್ಣವಾಗಿ ಅರ್ಥವಾಗುವುದಿಲ್ಲ. ಕೆಲವೊಂದು ವಿಚಾರಗಳಲ್ಲಾದರೂ ಸಂಪೂರ್ಣಗ್ರಾಹಿಗಳಾಗಲು ಪುಸ್ತಕ ಓದುವ ಅಭ್ಯಾಸ ಅಗತ್ಯ ಎಂದರು.
ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳ ಬಗ್ಗೆ ಹೆಚ್ಚುತ್ತಿರುವ ಉಪೇಕ್ಷೆ ಆತಂಕಕಾರಿ. ಮಾತೃಭಾಷೆಯ ಬಳಕೆ ಮತ್ತು ಓದುವ ಅಭ್ಯಾಸ ಎರಡನ್ನೂ ಬೆಳೆಸಿಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಮುದ್ರಿತ ಪುಸ್ತಕಗಳ ಮಹತ್ವ ಕಡಿಮೆಯಾಗುವುದಿಲ್ಲ. ನಮ್ಮ ಜ್ಞಾನ ಪರಂಪರೆ ಮತ್ತು ಪುಸ್ತಕ ಸಂಸ್ಕೃತಿಯನ್ನು ನಾವೇ ಉಳಿಸಿ ಬೆಳೆಸಬೇಕು ಎಂದು ಹೇಳಿದರು.
6ನೇ ಕನ್ನಡ ಪುಸ್ತಕ ಹಬ್ಬ–2026 ಬೆಂಗಳೂರಿನ ಕೆಂಪೇಗೌಡನಗರದ ರಾಷ್ಟ್ರೋತ್ಥಾನ ಪರಿಷತ್ನ ‘ಕೇಶವಶಿಲ್ಪ’ ಸಭಾಂಗಣದಲ್ಲಿ ನಡೆಯುತ್ತಿದೆ.
ಕಳೆದ ಹಲವು ದಶಕಗಳಿಂದ ಸದಭಿರುಚಿಯ ಸಾಹಿತ್ಯ ಪ್ರಸಾರದಲ್ಲಿ ತೊಡಗಿರುವ ರಾಷ್ಟ್ರೋತ್ಥಾನ ಸಾಹಿತ್ಯವು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರತಿವರ್ಷ ಕನ್ನಡ ಪುಸ್ತಕ ಹಬ್ಬವನ್ನು ಆಯೋಜಿಸುತ್ತಿದೆ. ಈ ಬಾರಿಯ ಪುಸ್ತಕ ಹಬ್ಬದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಕೃತಿಗಳ ಜೊತೆಗೆ ನಾಡಿನ ಪ್ರಮುಖ ಪ್ರಕಾಶನ ಸಂಸ್ಥೆಗಳ ವಿವಿಧ ಮೌಲ್ಯಯುತ ಪುಸ್ತಕಗಳೂ ದೊರೆಯಲಿವೆ. ಪುಸ್ತಕಗಳನ್ನು ಶೇ 10ರಿಂದ ಶೇ 60ರವರೆಗೆ ರಿಯಾಯಿತಿ ದರದಲ್ಲಿ ಖರೀದಿಸಲು ಓದುಗರಿಗೆ ಅವಕಾಶ ಕಲ್ಪಿಸಲಾಗಿದೆ.
ಪುಸ್ತಕ ಪ್ರದರ್ಶನ ಮತ್ತು ಮಾರಾಟದ ಜೊತೆಗೆ ಹಬ್ಬದ ಅವಧಿಯಲ್ಲಿ ಹೊಸ ಪುಸ್ತಕಗಳ ಲೋಕಾರ್ಪಣೆ, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಉಪನ್ಯಾಸಗಳು, ವಿಚಾರ ಸಂಕಿರಣಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ವಿವಿಧ ಸಾಹಿತ್ಯಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ದೀಪಾವಳಿ ಸಂದರ್ಭದಲ್ಲಿ ಗೋಪೂಜೆ ಹಾಗೂ ದೇಸಿ ಗೋತಳಿಗಳ ಕುರಿತು ಜಾಗೃತಿ ಕಾರ್ಯಕ್ರಮಗಳೂ ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ