
ಬೆಂಗಳೂರು, ಸೆಪ್ಟೆಂಬರ್ 03: ಜಪ್ತಿ ಮಾಡಲಾದ ವಾಹನಗಳಿಂದಾಗುತ್ತಿರುವ ಸಮಸ್ಯೆಗೆ ಮುಕ್ತಿ ನೀಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ಪೊಲೀಸ್ ಠಾಣೆಗಳ ಆವರಣ, ರಸ್ತೆ ಹಾಗೂ ಫುಟ್‌ಪಾತ್‌ಗಳಲ್ಲಿ ನಿಂತಿದ್ದ 8,500 ವಾಹನಗಳ ಸ್ಥಳಾಂತರಕ್ಕೆ ಸಿದ್ಧತೆ ನಡೆಸಿದೆ. ಈ ಸಂಬಂಧ ಕಂದಾಯ ಇಲಾಖೆ ಜಾಗ ಗುರುತಿಸಲಾಗಿದ್ದು, ಪೊಲೀಸ್ ಇಲಾಖೆ ಮೂಲಕ ವಾಹನಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿ ಇರುವ ಕಾರಣ ಹಲವು ವರ್ಷಗಳಿಂದ ಜಪ್ತಿ ಮಾಡಲಾದ ವಾಹನಗಳು ಠಾಣೆ ಹಾಗೂ ಸುತ್ತಮುತ್ತ ನಿಂತಿದ್ದವು. ಹಾಳಾದ ಈ ವಾಹನಗಳಿಂದ ಪೊಲೀಸ್ ಠಾಣೆ ಜಾಗ ಅತಿಕ್ರಮಣ, ರಸ್ತೆ ಹಾಗೂ ಫುಟ್‌ಪಾತ್‌ಗಳಿಗೂ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕೃಷ್ಣ ಬೈರೇಗೌಡ, ನಾವು ಸಾರ್ವಜನಿಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. 2 ತಿಂಗಳ ಸತತ ಪ್ರಯತ್ನದ ನಂತರ ಈ ಸಮಸ್ಯೆಗೆ ಕೊನೆಗೂ ಪರಿಹಾರ ಕಂಡುಕೊಂಡಿದ್ದೇವೆ. ಜಪ್ತಿ ವಾಹನಗಳನ್ನು ನಿಲುಗಡೆಗೊಳಿಸಲು ಕಂದಾಯ ಇಲಾಖೆಯು ಇದೀಗ ಅಗತ್ಯವಿರುವ ಜಾಗಗಳನ್ನು ಒದಗಿಸಿಕೊಟ್ಟಿದೆ. ಕೆ.ಆರ್.ಪುರಂ, ಬಿದರಹಳ್ಳಿ, ಬೇಗೂರು ಸೇರಿದಂತೆ ಹಲವು ಕಡೆಗಳಲ್ಲಿ ಜಮೀನು ಕಾಯ್ದಿರಿಸಲಾಗಿದ್ದು, ಆನೇಕಲ್, ಯಲಹಂಕ, ಬೆಂಗಳೂರು ಉತ್ತರ ಭಾಗದಲ್ಲೂ ಹೆಚ್ಚುವರಿ ಜಾಗಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾದ ಜಾಗವನ್ನು ಪೊಲೀಸ್ ಇಲಾಖೆ ವಶಕ್ಕೆ ಪಡೆದು ಜೆಸಿಬಿ ಮೂಲಕ ಲೆವೆಲಿಂಗ್ ಹಾಗೂ ಕಾಂಪೌಂಡ್/ಬೇಲಿ ನಿರ್ಮಾಣ ಮಾಡಲಾಗುವುದು ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ: ಉದ್ಘಾಟನೆಗೆ ಸಿದ್ಧವಾದ ಪಿಂಕ್ ಲೈನ್ ಮೆಟ್ರೋ ಮಾರ್ಗ: ಕೊಂಚ ಟ್ರಾಫಿಕ್ ಸಮಸ್ಯೆಗೆ ಮುಕ್ತಿ
ಯಾವ ಠಾಣೆಯ ವಾಹನವನ್ನು ಯಾವ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂಬುದನ್ನು ಪೊಲೀಸ್ ಇಲಾಖೆ ನಿರ್ಧರಿಸಲಿದೆ. ಮುಂದಿನ 15–20 ದಿನಗಳಲ್ಲಿ 8,500 ಜಪ್ತಿ ವಾಹನಗಳ ಸ್ಥಳಾಂತರ ಮಾಡುವ ಗುರಿ ಇಟ್ಟುಕೊಳ್ಳಲಾಗಿದ್ದು, ವಾಹನಗಳ ಸ್ಥಳಾಂತರದಿಂದ ಪೊಲೀಸ್ ಠಾಣೆಗಳ ಆವರಣ, ಫುಟ್‌ಪಾತ್ ಹಾಗೂ ರಸ್ತೆಗಳು ಮುಕ್ತವಾಗುವ ನಿರೀಕ್ಷೆ ಇದೆ. ಬೆಂಗಳೂರು ಟ್ರಾಫಿಕ್ ಹಾಗೂ ಫುಟ್‌ಪಾತ್ ಸುಧಾರಣೆಗೆ ಇದು ಮತ್ತೊಂದು ಹೆಜ್ಜೆಯಾಗಿದೆ ಎಂದಿರುವ ಸಚಿವರು, ಜಪ್ತಿ ವಾಹನಗಳ ನಿಲುಗಡೆಗೆ ಜಾಗ ನೀಡಿದ ಕಂದಾಯ ಇಲಾಖೆಗೆ ಧನ್ಯವಾದವನ್ನೂ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.