ಶಾಲಾ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಬಾಲಕಿ; ಕಿಮ್ಸ್ ಆಸ್ಪತ್ರೆ ಬಳಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಡೆಲ್ಲಿ ಪಬ್ಲಿಕ್ ಶಾಲಾ ಬಸ್ ಹರಿದು ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬನಶಂಕರಿಯ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಬೆಂಗಳೂರು: ಶಾಲಾ ಬಸ್ ಹರಿದು ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ (Bengaluru) ಬನಶಂಕರಿಯ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಹಾರೋಹಳ್ಳಿಯ ನಿವಾಸಿ ಕೀರ್ತನಾ(16) ಮೃತ ದುರ್ದೈವಿ. ಬೈಕ್ನಲ್ಲಿ ಹರ್ಷಿತಾ, ಮೃತ ಕೀರ್ತನಾ ಬರುತ್ತಿದ್ದರು. ಆಗ ಹಿಂದಿನಿಂದ ಬಂದ ಡೆಲ್ಲಿ ಪಬ್ಲಿಕ್ ಸ್ಕೂಲ್ ಬಸ್ ಬೈಕ್ಗೆ ಡಿಕ್ಕಿ ಹೊಡೆದಿತ್ತು. ಕೆಳಗೆ ಬಿದ್ದ ಬಾಲಕಿ ಕೀರ್ತನಾ ಮೇಲೆ ಶಾಲಾ ಬಸ್ (School Bus) ಹರಿದಿದೆ. ಕೀರ್ತನಾಳನ್ನ ಹಿಂದೆ ಕೂರಿಸಿಕೊಂಡು ಹೋಗ್ತಿದ್ದ ಅಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಬಾಲಕಿ ಕೀರ್ತನಾ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಮಗಳನ್ನ ನೆನೆದು ಕೀರ್ತನಾ ತಾಯಿ ಬಿಕ್ಕಿಬಿಕ್ಕಿ ಅಳುತ್ತಿದ್ದು, ಕಿಮ್ಸ್ ಶವಾಗಾರದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನು ಓದಿ: ಶಾಕಿಂಗ್ ಘಟನೆ: ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾದ ಯುವ ನಟಿ
ಮೃತ ಕೀರ್ತನಾ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಳು. ಮೇ 19ರಂದು ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಎಸ್ಎಸ್ಎಲ್ಸಿಯಲ್ಲಿ ಶೇಕಡಾ 70ರಷ್ಟು ಅಂಕ ಗಳಿಸಿದ್ದಳು. ಇಂದು ಪ್ರಥಮ PU ಪ್ರವೇಶಕ್ಕೆ ಅಪ್ಲಿಕೇಷನ್ ತರಲು ಕೀರ್ತನಾ ಮತ್ತು ಕೀರ್ತನಾ ಅಕ್ಕ ಇಬ್ಬರೂ ಬೈಕ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಜವರಾಯನಂತೆ ಬಂದ ಶಾಲಾ ಬಸ್ ಬೈಕ್ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಳಗೆ ಬಿದ್ದ ಕೀರ್ತನಾ ಮೇಲೆ ಶಾಲಾ ಬಸ್ ಹರಿದಿದೆ. ಕೀರ್ತನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಕೀರ್ತನಾ ಕಳೆದ 1 ತಿಂಗಳಿಂದ ಚೌಚೌ ಅಂಗಡಿಯಲಲ್ಲಿ ಕೆಲಸ ಮಾಡುತ್ತಿದ್ದಳು. ತಂದೆ ಆಟೋ ಡ್ರೈವರ್ ಆಗಿ ಕೆಲಸ ಮಾಡ್ತಿದ್ದರು. ತಾಯಿ ಕೂಡ ಮನೆ ಕೆಲಸ ಮಾಡುತ್ತಿದ್ದರು. ತಂದೆ ತಾಯಿಗೆ ಸಹಾಯ ಆಗ್ಲಿ ಅಂತ ಕೀರ್ತನಾ ಕೆಲಸಕ್ಕೆ ಹೋಗುತ್ತಿದ್ದಳು. ಕಾಲೇಜು ಆರಂಭದವರೆಗೆ ಕೆಲಸಕ್ಕೆ ಹೋಗ್ತೀನಿ ಅಂತ ಸ್ನೇಹಿತರ ಬಳಿ ಕಷ್ಟ ಹೇಳಿಕೊಂಡಿದ್ದಳು. ಕೀರ್ತನಾ ತಂದೆ ತಾಯಿಗೆ ಮೂರು ಜನರೂ ಹೆಣ್ಣು ಮಕ್ಕಳು. ಇದಕ್ಕೆ ಬಸ್ ಚಾಲಕ ನಿರ್ಲಕ್ಷ್ಯವೇ ಕಾರಣ.ತಂದೆ ತಾಯಿಗೆ ಪರಿಹಾರ ಕೊಡಿಸಿ ಅಂತ ಮೃತ ಬಾಲಕಿ ಕುಟುಂಬಸ್ಥರ ಅಳಲು ತೋಡಿಕೊಂಡಿದ್ದಾರೆ. SSLC ಪರೀಕ್ಷೆಯ ಹಾಲ್ ಟಿಕೆಟ್ ಗಾಗಿ ಕೀರ್ತನಾ ತಾಯಿ ತಾಳಿ ಅಡವಿಟ್ಟಿದ್ದರು. ಪೂರ್ತಿ ಶುಲ್ಕ ಕೊಡುವವರೆಗೂ ಹಾಲ್ ಟಿಕೆಟ್ ಕೊಡೊಲ್ಲ ಅಂತ ಶಾಲೆಯ ಸಿಬ್ಬಂದಿ ಹೇಳಿದ್ದರು. ಟಿಸಿ, ಮಾರ್ಕ್ಸ್ ಕೊಡೊಲ್ಲ ಅಂತ ಕೇವಲ 3 ಸಾವಿರಕ್ಕೆ ತಾಳಿ ಅಡವಿಟ್ಟಿದ್ದರು. ಈಗ ಮಗಳೇ ಹೋಗಿಬಿಟ್ಳು. ತಂದೆ ತಾಯಿ ತುಂಬಾ ಬಡವರು, ಕೂಲಿ ಮಾಡಿ ಮಗಳನ್ನ ಓದಿಸುತ್ತಿದ್ದರು. ಕೀರ್ತನಾ ಯಾವಾಗ್ಲೂ ನಗು ಮುಖದಿಂದ ಇರ್ತಿದ್ದಳು. ಈ ನಗು ಮಾಯವಾಯ್ತು, ಖಾಸಗಿ ಶಾಲೆಯಿಂದ ಮಕ್ಕಳಿಗೂ ಟಾರ್ಚರ್, ಪೋಷಕರಿಗೂ ಹಿಂಸೆಯಾಗುತ್ತಿದೆ ಎಂದು ಕೀರ್ತನಾ ಸ್ನೇಹಿತೆ ತಾಯಿ ಕಣ್ಣೀರು ಹಾಕಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:43 pm, Thu, 26 May 22