ಬೆಂಗಳೂರಿನಲ್ಲಿ ಶೂಟೌಟ್: ವಿಚ್ಛೇದನ ಕೋರ್ಟ್ನಲ್ಲಿರುವಾಗಲೇ ಹೆಂಡ್ತಿಯನ್ನ ಗುಂಡಿಕ್ಕಿ ಕೊಂದ ಪತಿ
ದಂಪತಿ ಸಂಸಾರದಲ್ಲಿ ಮನಸ್ತಾಪ ಉಂಟಾಗಿದ್ದು, ಗಂಡ ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಗಂಡ ಅನುಮಾನಪಟ್ಟ ಹಿನ್ನೆಲೆಯಲ್ಲಿ ಹೆಂಡತಿ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು. ಆದ್ರೆ, ಕೋರ್ಟ್ನಲ್ಲಿ ವಿಚ್ಛೇದನ ಅರ್ಜಿ ವಿಚಾರಣೆ ಇರುವಾಗಲೇ ಪತಿ, ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಡಿವೋರ್ಸ್ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ಮುಗಿಸಿಕೊಂಡು ಬರುತ್ತಿರುವಾಗಲೇ ನಡು ರಸ್ತೆಯಲ್ಲೇ ಗನ್ ತೆಗೆದು ಪತ್ನಿಗೆ ಶೂಟ್ ಮಾಡಿ ಕೊಂದಿದ್ದಾನೆ. ಈ ಶೂಟೌಟ್ನಿಂದ ಬೆಂಗಳೂರು ಬೆಚ್ಚಿಬಿದ್ದಿದೆ.

ಬೆಂಗಳೂರು, (ಡಿಸೆಂಬರ್ 23): ಗಂಡ ಹೆಂಡತಿ (Husband And Wife) ಜಗಳ ಸಾವಿನಲ್ಲಿ ಅಂತ್ಯವಾಗಿದೆ. ಹೆಂಡತಿ ಜೊತೆ ಜಗಳ ತೆಗೆದ ಪತಿ ಏಕಾಏಕಿ ಗನ್ ತೆಗೆದು ಹೆಂಡತಿ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಬೆಂಗಳೂರಿನ (Bengaluru) ಬಸವೇಶ್ವರ ನಗರದ ವೆಸ್ಟಿನ್ ಹೋಟೆಲ್ ಬಳಿ ನಡೆದಿದೆ. ಇದರಿಂದ ಗಂಭೀರ ಗಾಯಗೊಂಡು ಪತ್ನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಮೃತ ಮಹಿಳೆಯನ್ನು ಭುವನೇಶ್ವರಿ ಎಂದು ಗುರುತಿಸಲಾಗಿದ್ದು, ಆರೋಪಿಯಾದ ಪತಿ ಬಾಲ ಮುರುಗನ್ ಘಟನೆ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ವಿಚ್ಛೇದನ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ಬರುತ್ತಿರುವಾಗಲೇ ಬಾಲ ಮುರುಗನ್, ನಡುರಸ್ತೆಯಲ್ಲೇ ಹೆಂಡತಿ ಭುವನೇಶ್ವರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಈ ಶೂಟೌಟ್ನಿಂದ ಬಸವೇಶ್ವರ ನಗರವೇ ಬೆಚ್ಚಿಬಿದ್ದಿದೆ.
ಹೆಂಡ್ತಿ ಮೇಲೆ ಅನುಮಾನಪಟ್ಟು ಶೂಟ್
ಬಾಲಮುರುಗನ್ ಹಾಗೂ ಭುವನೇಶ್ವರಿ 2011ರಲ್ಲಿ ಮದುವೆಯಾಗಿದ್ದು, ಬಳಿಕ ತಮಿಳುನಾಡಿನ ಸೇಲಂನಿಂದ ಬಂದು ಬೆಂಗಳೂರಿನ ರಾಜಾಜಿನಗರದಲ್ಲಿ ಎರಡು ಮಕ್ಕಳೊಂದಿಗೆ ನೆಲೆಸಿದ್ದರು. ಬಾಲಮುರುಗನ್ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಪತ್ನಿ ಭುವನೇಶ್ವರಿ ಬ್ಯಾಂಕ್ ಉದ್ಯೋಗಿ ಆಗಿದ್ದರು.ಆದ್ರೆ, ಪತ್ನಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಈ ಸಂಬಂಧ ಆಗಾಗ ಗಲಾಟೆ ಮಾಡುತ್ತಿದ್ದ. ಇದರಿಂದ ಬೇಸತ್ತು ಭುವನೇಶ್ವರಿ, ವಿಚ್ಛೇದನ ಕೇಳಿದ್ದಳು. ಇದಕ್ಕೆ ಮುರುಗನ್ ಒಪ್ಪಿರಲಿಲ್ಲ. ಕೊನೆಗೆ ಭುವನೇಶ್ವರಿ 2024ರಲ್ಲಿ ಮುರುಗನ್ನಿಂದ ದೂರವಾಗಿ ಕೆಪಿ ಅಗ್ರಹಾರಕ್ಕೆ ಶಿಫ್ಟ್ ಆಗಿದ್ದರು. ಬಳಿಕ ಅವರು ಡಿವೋರ್ಸ್ ಗಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಕೋರ್ಟ್ ಮುರುಗನ್ಗೆ ನೋಟಿಸ್ ನೀಡಿತ್ತು. ಅದರಂತೆ ಮುರುಗನ್ ನ್ಯಾಯಾಲಯಕ್ಕೆ ಹಾಜರಾಗಿದ್ದ. ಇತ್ತ ಭುವನೇಶ್ವರಿ ಸಹ ವಿಚಾರಣೆಗೆ ಹಾಜರಾಗಿದ್ದು, ಎಲ್ಲಾ ವಿಚಾರಣೆ ಮುಗಿಸಿ ಕೋರ್ಟ್ನಿನಿಂದ ಇಬ್ಬರು ಆಚೆ ಬಂದಿದ್ದರು.
ಇದನ್ನೂ ಓದಿ: ತನಗೆ ಮರ್ಯಾದೆ ಕೊಡ್ಲಿಲ್ಲ ಅಂತಾ ಹೆಂಡತಿಯನ್ನೇ ಕೊಲ್ಲಲು ಸುಪಾರಿ ಕೊಟ್ಟ ಪತಿ!
ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳ ತೀವ್ರ ಸ್ವರೂಪ ಹೋಗಿದೆ. ಇದರಿಂದ ಆಕ್ರೋಶಗೊಂಡ ಪತಿ ಮುರುಗನ್, ನಡು ರಸ್ತೆಯಲ್ಲೇ ಗನ್ ತೆಗೆದು ಪತ್ನಿ ಭುವನೇಶ್ವರಿ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಭುವನೇಶ್ವರಿಯನ್ನು ಕೂಡಲೇ ಆಸ್ಪತ್ರೆಗೆ ದಾಖಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಹೆಂಡ್ತಿಗೆ ಶೂಟ್ ಮಾಡಿ ಪೊಲೀಸ್ ಠಾಣೆಗೆ
ಹೆಂಡತಿ ಮೇಲೆ ಗುಂಡು ಹಾರಿಸಿದ ಬಳಿಕ ಮುರುಗನ್ ನೇರವಾಗಿ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಕೂಡಲೇ ಪೊಲಿಸರು, ಶೂಟೌಟ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಅನೈತಿಕ ಸಂಬಂಧ ಅನುಮಾನ ಹಾಗೂ ಡಿವೋರ್ಸ್ ಕೇಳಿರುವುದಕ್ಕೆ ಕೊಂದಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಈ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ಇನ್ನು ಆರೋಪಿ ಪಿಸ್ತೂಲನ್ನು ಅಕ್ರಮವಾಗಿ ತರಿಸಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆಯೂ ತನಿಖೆ ಕೈಗೊಂಡಿದ್ದಾರೆ.
ಪ್ರಕರಣ ಮಾಹಿತಿ ಬಿಚ್ಚಿಟ್ಟ ಡಿಸಿಪಿ ಎಸ್.ಗಿರೀಶ್
ಘಟನೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪಶ್ಚಿಮ ವಿಭಾಗ ಡಿಸಿಪಿ ಎಸ್.ಗಿರೀಶ್, ಪತಿಯೇ ಪತ್ನಿಯನ್ನ ಕೊಲೆ ಮಾಡಿದ್ದಾನೆ. ಇಂದು ಸಂಜೆ 6.30 ರ ಸುಮಾರಿಗೆ ಇಂಡಸ್ಟ್ರಿಯಲ್ ಏರಿಯಾದಲ್ಲಿ ಘಟನೆ ನಡೆದಿದೆ. ಸದ್ಯ ಪತಿ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಇಬ್ಬರು ಸೇಲಂನವರು 2011ರಲ್ಲಿ ಮದುವೆಯಾಗಿದ್ದರು. 2018ರಲ್ಲಿ ಇಬ್ಬರು ಬೆಂಗಳೂರಿಗೆ ಬಂದು ವೈಟ್ ಫಿಲ್ಡ್ ನಲ್ಲಿ ನೆಲೆಸಿದ್ದರು. ಆದ್ರೆ, ಎರಡು ವರ್ಷಗಳಿಂದ ಮನಸ್ತಾಪ ಉಂಟಾಗಿದೆ. ಪತ್ನಿ ಮೇಲೆ ಆತನಿಗೆ ಅನೈತಿಕ ಸಂಬಂಧ ಅನುಮಾನ ಇತ್ತು. ಹೀಗಾಗಿ ಆಕೆ ಗಂಡನನ್ನು ಬಿಟ್ಟು ಬಂದು ರಾಜಾಜಿನಗರದಲ್ಲಿ ವಾಸವಿದ್ದಳು. ಇನ್ನು ಪತಿ ಚೋಳರಪಾಳ್ಯದಲ್ಲಿ ಪತಿ ವಾಸವಿದ್ದ. ಹಾವನೂರು ಸರ್ಕಲ್ ಬಳಿಯ ಬ್ಯಾಂಕ್ ನಲ್ಲಿ ಪತ್ನಿ ಕೆಲಸ ಮಾಡುತ್ತಿದ್ದು, 3 ಕಿ.ಮೀ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಇದನ್ನ ಗಮನಿಸಿ ಕಾದು ಇಂದು ಶೂಟ್ ಮಾಡಿದ್ದಾನೆ. ಒಟ್ಟು 5 ರೌಂಡ್ ಫೈರ್ ಮಾಡಿದ್ದಾನೆ. ಅದರಲ್ಲಿ 2 ತಲೆಗೆ, 2 ಬಾರಿ ಕೈಗೆ ಗುಂಡು ಬಿದ್ದಿದೆ. ಆತ ನಂತರ ಮಾಗಡಿ ರೋಡ್ ಠಾಣೆಗೆ ಬಂದು ಸರೆಂಡರ್ ಆಗಿದ್ದಾನೆ. ಮುಂದಿನ ತನಿಖೆ ನಡೆಸುತ್ತಿದ್ದೇವೆ. ಪಿಸ್ತೂಲ್ ಪರ್ಮಿಷನ್ ಇದ್ಯಾ ಇಲ್ವಾ ಎಂದು ಪರಿಶೀಲನೆ ಮಾಡಬೇಕಿದೆ ಎಂದು ಮಾಹಿತಿ ನೀಡಿದರು.
ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:41 pm, Tue, 23 December 25




