ತನಗೆ ಮರ್ಯಾದೆ ಕೊಡ್ಲಿಲ್ಲ ಅಂತಾ ಹೆಂಡತಿಯನ್ನೇ ಕೊಲ್ಲಲು ಸುಪಾರಿ ಕೊಟ್ಟ ಪತಿ!
ಮೈಸೂರಿನ ಬಿ.ಎಂ. ಶ್ರೀ ನಗರದಲ್ಲಿ ಪತಿಯೊಬ್ಬ ತನ್ನ ಪತ್ನಿ ಮರ್ಯಾದೆ ನೀಡಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಲು 5 ಲಕ್ಷ ರೂ. ಸುಪಾರಿ ನೀಡಿದ್ದ ಘಟನೆ ಬೆಳಕಿಗೆ ಬಂದಿದೆ. ಮನೆಗೆ ನುಗ್ಗಿ ಕೊಲೆ ಯತ್ನಿಸಿದ್ದ ಪತಿಯ ಸ್ನೇಹಿತರು, ಘಟನೆಯನ್ನು ಅಗ್ನಿ ಅವಘಡ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪತಿ ಸೇರಿ ಆರೋಪಿಗಳನ್ನು ಮೇಟಗಳ್ಳಿ ಪೊಲೀಸರು ಬಂಧಿಸಿದ್ದಾರೆ.

ಮೈಸೂರು, ಡಿಸೆಂಬರ್ 19: ಈಗಿನ ಕಾಲದಲ್ಲಿ ಹೆಂಡತಿ ಗಂಡನನ್ನು, ಗಂಡ ಹೆಂಡತಿಯನ್ನು ಕೊಲ್ಲುವ ಕೇಸ್ಗಳು ಪದೇ ಪದೇ ಕೇಳಿ ಬರುತ್ತವೆ. ಅನೈತಿಕ ಸಂಬಂಧ ಸೇರಿ ಹತ್ತು ಹಲವು ಕಾರಣಕ್ಕೆ ಈ ರೀತಿಯ ಕೊಲೆಗಳು ನಡೆಯುತ್ತವೆ. ಆದರೆ ಪತಿಯೊಬ್ಬ ಹೆಂಡತಿ ತನಗೆ ಮರ್ಯಾದೆ ಕೊಡುವುದಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಆಕೆಯನ್ನು ಕೊಲ್ಲಲು ಸುಪಾರಿ ಕೊಟ್ಟ ಘಟನೆ ಮೈಸೂರಿನ (Mysuru) ಬಿ ಎಂ ಶ್ರೀ ನಗರದಲ್ಲಿ ನಡೆದಿದೆ. ಗಂಡನ ಈ ಕೃತ್ಯಕ್ಕೆ ಆತನ ಸ್ನೇಹಿತರೂ ಸಾಥ್ ನೀಡಿದ್ದು, ಮಾಹಿತಿ ತಿಳಿದ ಮೇಟಗಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆ ಮಾಡಿ ಅಗ್ನಿ ಅವಘಡವೆಂದು ಬಿಂಬಿಸಲು ಹೊರಟ ಆರೋಪಿಗಳು
ಪಾನಿಪುರಿ ವ್ಯಾಪಾರ ಮಾಡುತ್ತಿದ್ದ ಮಹೇಶ್, ಕ್ಷುಲ್ಲಕ ಕಾರಣಕ್ಕೆ ಪತ್ನಿ ನಾಗರತ್ನ ಕೊಲೆಗೆ 5 ಲಕ್ಷ ರೂ. ಸುಪಾರಿ ನೀಡಿದ್ದ. ಗಂಡನ ಸಂಪಾದನೆಯನ್ನು ಬಡ್ಡಿಗೆ ಬಿಡುತ್ತಿದ್ದ ಪತ್ನಿ, ಮಹೇಶ್ಗೆ ಹಣ ನೀಡುತ್ತಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಮಹೇಶ್, ತನಗೆ ಕಿಂಚಿತ್ತೂ ಮರ್ಯಾದೆ ಕೊಡದ ಪತ್ನಿ ಕೊಲೆಗೆ ಸ್ಕೆಚ್ ಹಾಕಿದ್ದ. ಮನೆಗೆ ನುಗ್ಗಿ ಗ್ಯಾಸ್ ಪೈಪ್ ಕತ್ತರಿಸಿ ಪೆಟ್ರೋಲ್ ಸುರಿದು ಹೆಂಡತಿಯನ್ನು ಮುಗಿಸಿ ಎಂದು ಪ್ಲಾನ್ ರೂಪಿಸಿದ್ದ.
ಆತನ ಪ್ಲಾನ್ ಪ್ರಕಾರವೇ ವಿರಾಜಪೇಟೆ ಮೂಲದ ಭಾಸ್ಕರ್ ಮತ್ತು ಅಭಿಷೇಕ್ ಎನ್ನುವವರಿಬ್ಬರೂ ನಾಗರತ್ನ ಒಬ್ಬರೇ ಇರುವ ಸಮಯ ನೋಡಿಕೊಂಡು ಮನೆಗೆ ಬಂದಿದ್ದರು. ಈ ವೇಳೆ ಮಹಿಳೆಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆಗೆ ಯತ್ನಿಸಿದ್ದರು. ಹಲ್ಲೆಯ ನಂತರ ಗ್ಯಾಸ್ ಸಿಲಿಂಡರ್‌ಗಳನ್ನು ಸೋರಿಕೆ ಮಾಡಿದ ಆರೋಪಿಗಳು , ಘಟನೆಯನ್ನಯ ಅಗ್ನಿ ಅವಘಡ ಎಂದು ಬಿಂಬಿಸಲು ಯತ್ನಿಸಿದ್ದರು. ಈ ವೇಳೆ ಮನೆಯ ಹಲವು ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಗಾಯಗೊಂಡ ನಾಗರತ್ನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ. ತನ್ನದೇ ಸ್ನೇಹಿತರಿಗೆ ಸುಪಾರಿ ಕೊಟ್ಟಿದ್ದ ಮಹೇಶ್ ಸೇರಿದಂತೆ ಕೊಲೆಗೆ ಯತ್ನಿಸಿದ್ದ ಆರೋಪಿಗಳನ್ನು ಮೇಟಗಳ್ಳಿ ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಗಂಡನೇ ಪತ್ನಿಯನ್ನು ಕೊಲ್ಲುವಂತೆ ಸುಪಾರಿ ನೀಡಿದ್ದ ವಿಚಾರ ಬೆಳಕಿಗೆ ಬಂದಿದೆ.
ಇದನ್ನೂ ಓದಿ ಚಿಕ್ಕಬಳ್ಳಾಪುರದಲ್ಲಿ KSRTC ಬಸ್ಗೆ ನುಗ್ಗಿ ಬ್ಯಾಗ್ ಕದ್ದು ಎಸ್ಕೇಪ್: ಕಳುವಾಗಿದ್ದು ಅರ್ಧಕೋಟಿ ಹಣ!
ಶಿಶು ವೈದ್ಯರ ಮೇಲೆ ಹಲ್ಲೆ ಮಾಡಿದ ತಂದೆ ಮಗ
ಕ್ಷುಲ್ಲಕ ಕಾರಣಕ್ಕೆ ವೈದ್ಯರ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಸಾತಗಳ್ಳಿ ಬಡಾವಣೆಯಲ್ಲಿ ನಡೆದಿದೆ. ಶಿಶು ಆಸ್ಪತ್ರೆಯ ವೈದ್ಯ ಡಾ. ಅನೂಪ್ ಮೇಲೆ ರುಬಿಯಾಜ್ ಷರೀಫ್ ಹಾಗೂ ಆತನ ತಂದೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಮೂರು ವರ್ಷದ ಮಗುವನ್ನು ಆಸ್ಪತ್ರೆಗೆ ದಾಖಲಾದ ಮಗುವನ್ನು ನೋಡಲು ಬಂದಿದ್ದ ರುಬಿಯಾಜ್ ಷರೀಫ್, ಚಪ್ಪಲಿ ಧರಿಸಿಕೊಂಡೇ ಕ್ಲಿನಿಕ್ ಒಳಗೆ ಪ್ರವೇಶಿಸಿದ್ದನು. ಚಪ್ಪಲಿ ಹೊರಗೆ ಬಿಡುವಂತೆ ವೈದ್ಯರು ಮನವಿ ಮಾಡಿದಾಗ ಮಾತಿನ ಚಕಮಕಿ ನಡೆದಿದ್ದು, ಬಳಿಕ ತಾನೂ ಚಪ್ಪಲಿ ಹೊರಗೆ ಬಿಟ್ಟಿದ್ದನ್ನು ತೋರಿಸಲು ವೈದ್ಯರು ಹೊರಗೆ ಬಂದ ಸಮಯದಲ್ಲಿ ಏಕಾಏಕಿ ಹಲ್ಲೆ ನಡೆಸಲಾಗಿದೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಎಫ್‌ಐಆರ್ ದಾಖಲಾಗಿದ್ದರೂ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ ಎನ್ನಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



