ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರ ವಿಚಾರ: ಸಿಎಂ ಡಿಕೆ ಶಿವಕುಮಾರ್​​ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪತ್ರ

ಕರ್ನಾಟಕದ ಕಬ್ಬು ಬೆಳೆಗಾರರು ಎದುರಿಸುತ್ತಿರುವ ತೂಕದ ವ್ಯತ್ಯಾಸ ಹಾಗೂ ಇತರ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸುವಂತೆ ಆಗ್ರಹಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮುಖ್ಯಮಂತ್ರಿ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಸಂಬಂಧಪಟ್ಟ ರಾಜ್ಯದ ಅಧಿಕಾರಿಗಳು ಈ ವಿಷಯಗಳನ್ನು ಪರಿಶೀಲಿಸಿ, ಅಗತ್ಯವೆನಿಸಿದ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ನೀವು ಮಧ್ಯಪ್ರವೇಶಿಸಬೇಕು ಎಂದವರು ಆಗ್ರಹಿಸಿದ್ದಾರೆ.

ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರ ವಿಚಾರ: ಸಿಎಂ ಡಿಕೆ ಶಿವಕುಮಾರ್​​ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪತ್ರ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಡಿಕೆ ಶಿವಕುಮಾರ್
Image Credit source: Tv9 Kannada

Updated on: Oct 15, 2026 | 7:57 AM

ಬೆಂಗಳೂರು, ಅಕ್ಟೋಬರ್​ 15: ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರ ವಿಚಾರ ಸಂಬಂಧ ರಾಜ್ಯದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪತ್ರ ಬರೆದಿದ್ದಾರೆ.ಕರ್ನಾಟಕದ ಕಬ್ಬು ಬೆಳೆಗಾರರ ಪ್ರತಿನಿಧಿಗಳು ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪಿಸಿದ ಕೆಲವು ಸಮಸ್ಯೆಗಳ ಬಗ್ಗೆ ಅವರು ಪತ್ರದಲ್ಲಿ ಉಲ್ಲೇಖಿಸಿದ್ದು, ರಾಜ್ಯದ ಕೆಲವು ಸಕ್ಕರೆ ಕಾರ್ಖಾನೆಗಳಲ್ಲಿ ಅನುಸರಿಸಲಾಗುತ್ತಿದೆ ಎನ್ನಲಾದ ಕೆಲವು ಪದ್ಧತಿಗಳಿಂದ ಕಬ್ಬು ಬೆಳೆಗಾರರಿಗೆ ಪಾವತಿಸಬೇಕಾದ ಕಬ್ಬಿನ ಬೆಲೆ ಹಾಗೂ ಅವರ ಒಟ್ಟಾರೆ ಆರ್ಥಿಕ ಲಾಭದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ ಎಂದು ರೈತರು ಗಮನಕ್ಕೆ ತಂದಿರೋದಾಗಿ ಮಾಹಿತಿ ನೀಡಿದ್ದಾರೆ.

ಸಿಎಂ ಡಿಕೆಶಿಗೆ ಪ್ರಹ್ಲಾದ್​​ ಜೋಶಿ ಬರೆದ ಪತ್ರದಲ್ಲೇನಿದೆ?

Karnataka Sting Operation Row: ಮಾಜಿ ಮುಖ್ಯಮಂತ್ರಿ ವರ್ಚಸ್ಸಿಗೆ ಮಸಿ ಬಳಿಯಲು ಷಡ್ಯಂತ್ರ: HD Kumaraswamy

ಕೆಲವು ಸಕ್ಕರೆ ಕಾರ್ಖಾನೆಗಳು ವಾಸ್ತವಿಕ ಸಕ್ಕರೆ ಉತ್ಪಾದನೆಗಿಂತ ಕಡಿಮೆ ಪ್ರಮಾಣವನ್ನು ವರದಿ ಮಾಡುತ್ತಿವೆ ಎಂದು ರೈತರು ಆರೋಪಿಸಿದ್ದಾರೆ. ಇದರಿಂದ ಕಬ್ಬಿನ ಬೆಲೆ ನಿಗದಿಪಡಿಸುವ ಪ್ರಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವುದರ ಜೊತೆಗೆ ಕಬ್ಬು ಬೆಳೆಗಾರರಿಗೆ ಆರ್ಥಿಕ ನಷ್ಟವಾಗುತ್ತಿದೆ ಎಂದು ರೈತರು ತಿಳಿಸಿದ್ದಾರೆ. ಸಕ್ಕರೆ ಕಾರ್ಖಾನೆಗಳಲ್ಲಿ ದಾಖಲಿಸುವ ಕಬ್ಬಿನ ತೂಕ ಮತ್ತು ಹೊರಗಿನ ತೂಕದ ಸೇತುವೆಗಳಲ್ಲಿ (ವೇಬ್ರಿಡ್ಜ್‌ಗಳಲ್ಲಿ) ದಾಖಲಿಸುವ ನೈಜ ತೂಕದ ನಡುವೆ ವ್ಯತ್ಯಾಸಗಳಿರುವ ಬಗ್ಗೆ ಕಳವಳ ವ್ಯಕ್ತವಾಗಿದೆ. ಇದರಿಂದ ರೈತರಿಗೆ ಕಡಿಮೆ ಹಣ ಪಾವತಿಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಯಂತ್ರಗಳ ಮೂಲಕ ಕಟಾವು ಮಾಡಿದ ಕಬ್ಬಿನ ತೂಕದಲ್ಲಿ ಸುಮಾರು ಶೇ. 8ರಷ್ಟು ಕಡಿತ ಮಾಡಲಾಗುತ್ತಿದೆ ಎಂದು ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಈ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ. ಯಾಂತ್ರೀಕೃತ ಕಟಾವು ಪದ್ಧತಿಯನ್ನು ಅಳವಡಿಸಿಕೊಳ್ಳುವ ರೈತರಿಗೆ ಇಂತಹ ಕಡಿತಗಳು ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಶೀಲನೆಗೆ ರಮೇಶ್ ಚಂದ್ ನೇತೃತ್ವದಲ್ಲಿ ಸಮಿತಿ ರಚಿಸಿದ ಕೇಂದ್ರ ಸರ್ಕಾರ

ಈ ಸಮಸ್ಯೆಗಳ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ರಾಜ್ಯದ ಅಧಿಕಾರಿಗಳು ಈ ವಿಷಯಗಳನ್ನು ಪರಿಶೀಲಿಸಿ, ಅಗತ್ಯವೆನಿಸಿದ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ನೀವು ಮಧ್ಯಪ್ರವೇಶಿಸಬೇಕು. ಸಕ್ಕರೆ ಕಾರ್ಖಾನೆಗಳು ವರದಿ ಮಾಡುವ ಸಕ್ಕರೆ ಉತ್ಪಾದನೆ ಅಂಕಿಅಂಶಗಳನ್ನು ಸ್ವತಂತ್ರವಾಗಿ ಪರಿಶೀಲಿಸುವ ವ್ಯವಸ್ಥೆ ಕಲ್ಪಿಸಬೇಕು. ಕಬ್ಬಿನ ತೂಕವನ್ನು ನಿಖರವಾಗಿ ದಾಖಲಿಸುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಸಕ್ಕರೆ ಕಾರ್ಖಾನೆಗಳಲ್ಲಿ ಅಳವಡಿಸಲಾಗಿರುವ ತೂಕದ ಸೇತುವೆಗಳ (ವೇಬ್ರಿಡ್ಜ್‌ಗಳ) ನಿಯತಕಾಲಿಕ ಮಾಪನಾಂಕ ನಿರ್ಣಯ, ಪರಿಶೀಲನೆ ಮತ್ತು ತಪಾಸಣೆ ನಡೆಸುವಂತೆ ಸಂಬಂಧಪಟ್ಟ ರಾಜ್ಯದ ಸಕ್ಷಮ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕು.

ಯಂತ್ರಗಳ ಮೂಲಕ ಕಟಾವು ಮಾಡಿದ ಕಬ್ಬಿನ ತೂಕದಲ್ಲಿ ಸುಮಾರು ಶೇ. 8ರಷ್ಟು ಕಡಿತ ಮಾಡುವ ಪದ್ಧತಿಯನ್ನು ಸಕ್ಕರೆ ಕಾರ್ಖಾನೆಗಳು ಹಾಗೂ ಕಬ್ಬು ಬೆಳೆಗಾರರ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಮರುಪರಿಶೀಲಿಸಬೇಕು. ಕಬ್ಬಿಗೆ ರಾಜ್ಯ ಸಲಹಾ ಬೆಲೆ (State Advised Price – SAP) ಘೋಷಿಸುವ ಸಾಧ್ಯತೆಯನ್ನು ರಾಜ್ಯ ಸರ್ಕಾರ ಪರಿಶೀಲಿಸಬೇಕು. ಕೇಂದ್ರ ಸರ್ಕಾರ ನಿಗದಿಪಡಿಸುವ ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆ (Fair and Remunerative Price – FRP)ಗಿಂತ ಹೆಚ್ಚಿನ ಬೆಲೆ ನೀಡಬೇಕೆಂದು ಕರ್ನಾಟಕದ ಕಬ್ಬು ಬೆಳೆಗಾರರು ಬೇಡಿಕೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ, ರೈತರಿಗೆ ಲಾಭದಾಯಕ ಬೆಲೆ ದೊರೆಯುವಂತೆ ಸಂಬಂಧಪಟ್ಟ ಅಂಶಗಳನ್ನು ಪರಿಗಣಿಸಿ ಸೂಕ್ತ ರಾಜ್ಯ ಸಲಹಾ ಬೆಲೆಯನ್ನು ನಿಗದಿಪಡಿಸುವ ಬಗ್ಗೆ ರಾಜ್ಯ ಸರ್ಕಾರ ಪರಿಶೀಲಿಸಬಹುದು ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:55 am, Thu, 15 October 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us