AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇ.ಡಿ. ಅಧಿಕಾರಿಗಳು ಸಮಾಧಾನಗೊಂಡಿದ್ದಾರೆ; ಯಾವುದೇ ನೋಟಿಸ್ ಕೊಟ್ಟಿಲ್ಲ: ಶಾಸಕ ಜಮೀರ್

ಮಾಜಿ ಸಚಿವ.. ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ಗೆ ನಿನ್ನೆ(ಜುಲೈ 5) ಬೆಳಗ್ಗೆ ಜಾರಿ ನಿರ್ದೇಶನಾಲಯದ ಭರ್ಜರಿ ಶಾಕ್ ನೀಡಿದ್ರು. ಬೆಳ್ಳಂಬೆಳಗ್ಗೆ ಜಮೀರ್ ನಿವಾಸದ ಮೇಲೆ ದಾಳಿ ಮಾಡಿದ ಇಡಿ ಅಧಿಕಾರಿಗಳು ಜಮೀರ್ಗೆ ಸೇರಿದ ಹಲವಾರು ಕಡೆ ಏಕಕಾಲಕ್ಕೆ ದಾಳಿ ಮಾಡಿ, ದಾಖಲೆಗಳನ್ನ ಪರಿಶೀಲಿಸಿದ್ರು. ಇಂದು ಕೂಡ ಈ ಪರಿಶೀಲನೆ ಮುಂದುವರೆದಿದ್ದು ಸತತ 23 ಗಂಟೆ ಪರಿಶೀಲನೆಯ ಬಳಿಕ ಅಧಿಕಾರಿಗಳು ನಿರ್ಗಮಿಸಿದ್ದಾರೆ.

ಇ.ಡಿ. ಅಧಿಕಾರಿಗಳು ಸಮಾಧಾನಗೊಂಡಿದ್ದಾರೆ; ಯಾವುದೇ ನೋಟಿಸ್ ಕೊಟ್ಟಿಲ್ಲ: ಶಾಸಕ ಜಮೀರ್
ಶಾಸಕ ಜಮೀರ್ ಅಹ್ಮದ್ ನಿವಾಸ
TV9 Web
| Updated By: ಆಯೇಷಾ ಬಾನು|

Updated on:Aug 06, 2021 | 7:53 AM

Share

ಬೆಂಗಳೂರು: ನಿನ್ನೆ ಬೆಳಗ್ಗೆ ರಾಜ್ಯದ ಜನ ನೂತನ ಸಂಪುಟದಲ್ಲಿ ಯಾಱರಿಗೆ ಯಾವ ಖಾತೆ ಕೊಡ್ತಾರೆ ಅನ್ನೋ ಟೆನ್ಷನ್ನಲ್ಲಿ ಇದ್ರೆ.. ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ಗೆ ಇಡಿ ಶಾಕ್ ನೀಡಿತ್ತು.(Zameer Ahmed Khan ED Raid) ಜಮೀರ್ ಅಹ್ಮದ್ ಖಾನ್ಗೆ ಸೇರಿದ್ದ ಮನೆಗಳು, ಕಚೇರಿ, ಫ್ಲ್ಯಾಟ್ಗಳ ಮೇಲೆ ರೇಡ್ ಮಾಡಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಾಮರಾಜಪೇಟೆ ಶಾಸಕರಿಗೆ(Chamrajpet MLA) ಭರ್ಜರಿಯಾಗಿ ಬಿಸಿ ಮುಟ್ಟಿಸಿದ್ದಾರೆ. ಮುಂಜಾನೆಯ ಸಿಹಿ ನಿದ್ರೆಯಲ್ಲಿದ್ದ ಜಮೀರ್ ಕಣ್ಣು ಬಿಡೋ ಮುಂಚೆಯೇ ಇಡಿ ಅಧಿಕಾರಿಗಳು ರೇಡ್ ಮಾಡಿದ್ರು. ಜಮೀರ್ ನಿವಾಸಗಳು, ಅವರ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ದಾಳಿ ಮಾಡಿ ತಮಗೆ ಬೇಕಿದ್ದ ಮಾಹಿತಿ ಕಲೆ ಹಾಕಿದ್ರು. ಇಂದು ಕೂಡ ತನಿಖೆ ಮುಂದುವರೆದಿದ್ದು ಈಗ ಅಂತ್ಯಗೊಂಡಿದೆ.

ಇಡಿ ಅಧಿಕಾರಿಗಳು ನನಗೆ ಯಾವುದೇ ನೋಟಿಸ್ ಕೊಟ್ಟಿಲ್ಲ ಇನ್ನು ಅಧಿಕಾರಿಗಳು ನಿರ್ಗಮಿಸುತ್ತಿದ್ದಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್, ನಿನ್ನೆ ಬೆಳಗ್ಗೆ 7.30-8 ಗಂಟೆ ವೇಳೆಗೆ ಇಡಿಯವರು ಬಂದಿದ್ರು. ನನ್ನ ಮನೆ ವಿಚಾರವಾಗಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ರು. ನನ್ನ ಮನೆ, ನನ್ನ ಸಹೋದರನ ಮನೆಯಲ್ಲಿ ಪರಿಶೀಲಿಸಿದ್ದಾರೆ. ಮನೆಗೆ ಜಾಗ ಖರೀದಿಸಿದ್ದು ಯಾವಾಗ, ಎಷ್ಟು ವೆಚ್ಚವಾಗಿದೆ ಈ ಸಂಬಂಧ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ರು. ಇಡಿ ಅಧಿಕಾರಿಗಳಿಗೆ ಎಲ್ಲಾ ಮಾಹಿತಿಯನ್ನು ಕೊಟ್ಟಿದ್ದೇನೆ. ಇಡಿಯವರು ಬ್ಯಾಂಕ್‌ನಿಂದಲೂ ಮಾಹಿತಿ ಪಡೆದಿದ್ದಾರೆ. ಇಡಿ ಅಧಿಕಾರಿಗಳು ನನಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ಕರೆದಾಗ ಬರಬೇಕು ಎಂದು ಹೇಳಿಹೋಗಿದ್ದಾರೆ ಎಂದರು.

ಇನ್ನು ನನ್ನ ಮನೆ ವಿಚಾರವಾಗಿ ಹಲವರು ದೂರು ಕೊಟ್ಟಿದ್ದರಂತೆ. ಹೀಗಾಗಿ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಎಲ್ಲರಿಗೂ ನನ್ನ ಮೇಲೆ, ನನ್ನ ಮನೆಯ ಮೇಲೆ ಕಣ್ಣು. ದೂರಿನ ಹಿಂದೆ ರಾಜಕೀಯ ಹಿನ್ನೆಲೆಯೂ ಇರಬಹುದು. ರಾಜಕೀಯದಲ್ಲಿ ಶತ್ರುಗಳು ಸಹಜ. ದೂರು ನೀಡಿದ್ದು ಒಳ್ಳೇದಾಯ್ತು, ಇವತ್ತಲ್ಲ ನಾಳೆ ಆಗ್ಬೇಕಿತ್ತು. ದೂರುದಾರರಿಗೆ ನಾನು ಉತ್ತರಿಸಲ್ಲ, ದೇವರೇ ಉತ್ತರಿಸ್ತಾರೆ. ನಾನು ಕಳ್ಳತನ, ಲೂಟಿ ಮಾಡಿದ್ದರೆ ತಪ್ಪು. ಆದ್ರೆ ಇದು ನನ್ನ ಸ್ವಂತ ದುಡಿಮೆಯಿಂದ ಸಂಪಾದಿಸಿದ ಹಣ. ನಾನು ದುಡಿದ ಹಣದಿಂದ ನನ್ನ ಮನೆಯನ್ನು ನಿರ್ಮಿಸಿದ್ದೇನೆ. ನನ್ನ ಮನೆಯನ್ನು ನಿರ್ಮಿಸಲು 7 ವರ್ಷ ತೆಗೆದುಕೊಂಡಿದ್ದೇನೆ. ಇಡಿ ಅಧಿಕಾರಿಗಳ ನಿರೀಕ್ಷೆಗೆ ತಕ್ಕಂತೆ ಏನೂ ಸಿಕ್ಕಿಲ್ಲ. ನಾನು ನೀಡಿದ ದಾಖಲೆಗಳು ಸರಿಯಿದ್ದ ಕಾರಣ ವಾಪಸ್ ತೆರಳಿದ್ದಾರೆ. ನಾವು ಟ್ರಾವೆಲ್ ಏಜೆನ್ಸಿಯನ್ನು ನಡೆಸುತ್ತೇವೆ. ಇಡಿ ಅಧಿಕಾರಿಗಳು ಅದರ ಮೇಲೂ ದಾಳಿ ನಡೆಸಿದ್ದಾರೆ. ಅಲ್ಲೂ ಇಡಿ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ ಎಂದರು.

ಜಮೀರ್ ಅಹ್ಮದ್ ಖಾನ್ಗೆ ಇಡಿ ರೇಡ್ನ ಶಾಕ್ ನಿನ್ನೆ ಬೆಳಗ್ಗೆ 5 ಗಂಟೆಗೆ ಅಜ್ಞಾತನ ಸ್ಥಳದಿಂದ 25 ಕಾರುಗಳಲ್ಲಿ ಹೊರಟ 45 ಜನ ಅಧಿಕಾರಿಗಳು ಜಮೀರ್ ಅಹ್ಮದ್ ಖಾನ್ಗೆ ಸೇರಿದ ಆಸ್ತಿಗಳ ಮೇಲೆ ದಾಳಿ ನಡೆಸಿದ್ರು. ಬೆಳಗ್ಗೆ 6 ಗಂಟೆಯಿಂದ ಶುರುವಾದ ರೇಡ್ನಲ್ಲಿ ಇಡಿ ಅಧಿಕಾರಿಗಳು ತಮಗೆ ಬೇಕಿರೋ ಎಲ್ಲ ಮಾಹಿತಿಗಳನ್ನ ಕಲೆ ಹಾಕಿದ್ರು. ಆರಂಭದಲ್ಲಿ ಜಮೀರ್ ಮೇಲೆ ನಡೆದಿರೋದು ಐಟಿ ರೇಡ್ ಅಂತಾ ಎಲ್ಲರೂ ಅಂದುಕೊಂಡಿದ್ರು. ಆದ್ರೆ.. ಯಾವಾಗ ರೋಷನ್ ಬೇಗ್ ಮೇಲೆ ರೇಡ್ ನಡೀತೋ ಆಗ ಗೊತ್ತಾಗಿದ್ದೇ.. ಇದು ಇಡಿ ರೇಡ್ ಅಂತಾ. ಐಟಿ ರೇಡ್ ಆದ್ರೆ, ಆದಾಯಕ್ಕಿಂತಾ ಹೆಚ್ಚಿನ ಆಸ್ತಿ ಹೊಂದಿದ್ರೆ ಅಥವಾ ಸರಿಯಾಗಿ ಲೆಕ್ಕ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ರೇಡ್ ಮಾಡಿದ್ದಾರೆ ಅಂದುಕೊಳ್ಳಬಹುದಿತ್ತು. ಆದ್ರೆ, ಇಡಿ ರೇಡ್ ನಡೆದಿರೋದ್ರಿಂದ ಇದರ ಹಿಂದೆ ಹಲವಾರು ಕಾರಣಗಳಿವೆ ಅನ್ನೋದು ಮೇಲ್ನೋಟಕ್ಕೆ ಕಂಡು ಬರ್ತಿದೆ.

ಇಡಿಗೆ ಸಾಥ್ ನೀಡಿದ್ದೇಕೆ ಐಆರ್ಎಸ್ ಅಧಿಕಾರಿಗಳು? ಸಾಮಾನ್ಯವಾಗಿ ಇಡಿ ರೇಡ್ ಮಾಡಿದಾಗ ನಿರ್ದಿಷ್ಟ ಅಧಿಕಾರಿಗಳು ಮಾತ್ರ ಇರುತ್ತಾರೆ. ಯಾವುದೇ ಕಾರಣಕ್ಕೂ ಹೊರಗಿನ ಅಧಿಕಾರಿಗಳನ್ನ ದಾಳಿ ಸ್ಥಳಕ್ಕೆ ಭೇಟಿ ನೀಡಲು ಸಹ ಅವಕಾಶ ನೀಡೋದಿಲ್ಲ. ಇದರ ನಡುವೆ ಜಮೀರ್ ಅಹ್ಮದ್ ಖಾನ್ ಮೇಲೆ ರೇಡ್ ಮಾಡುವ ವೇಳೆ.. ಅದ್ರಲ್ಲೂ ಸುಮಾರು 12 ಗಂಟೆಗಳ ಬಳಿಕ ಇಡಿ ಜೊತೆಗೆ ಇಬ್ಬರು ಐಆರ್ಎಸ್ ಅಧಿಕಾರಿಗಳು ಬಂದು ಕೂಡಿಕೊಂಡಿದ್ರು. ಇಂಡಿಯನ್ ರೆವಿನ್ಯೂ ಸರ್ವೀಸಸ್ ಐಟಿ ವಿಭಾಗದ ಇಬ್ಬರು ಅಧಿಕಾರಿಗಳು ಇಡಿ ರೇಡ್ ವೇಳೆಯೇ ಜಮೀರ್ ಮನೆಗೆ ಬಂದು ಇಡಿ ಅಧಿಕಾರಿಗಳಿಗೆ ದಾಳಿಯಲ್ಲಿ ಭಾಗಿಯಾದ್ರು. ಹೀಗಾಗಿ ಐಆರ್ಎಸ್ ಅಧಿಕಾರಿಗಳು ಇಡಿ ಅಧಿಕಾರಿಗಳಿಗೆ ಸಾಥ್ ನೀಡಿದ್ದೇಕೆ ಅನ್ನೋ ಪ್ರಶ್ನೆ ಏಳುವಂತೆ ಮಾಡಿದೆ.

ಜಮೀರ್ ನಿವಾಸ ಸೇರಿದಂತೆ ಅವರ ಒಡೆತನದ ಕಲಾಸಿಪಾಳ್ಯದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಯುಬಿ ಸಿಟಿ ಹಾಗೂ ಸದಾಶಿವನಗರದ ಗೆಸ್ಟ್ ಹೌಸ್ ಸೇರಿ ಹಲವೆಡೆ ಪರಿಶೀಲನೆ ನಡೆಸಿ, ಆಸ್ತಿ ವಿವರಗಳನ್ನೊಳಗೊಂಡ ದಾಖಲೆಗಳನ್ನ ವಶಕ್ಕೆ ಪಡೆದಿದ್ದ ಇಡಿ ಅಧಿಕಾರಿಗಳು ರಾತ್ರಿ 8 ಗಂಟೆ ಬಳಿಕ ಕಡತಗಳ ಪರಿಶೀಲನೆ ಆರಂಭಿಸಿದ್ರು. ಅಲ್ದೆ, ಜಮೀರ್ ಮನೆಯಲ್ಲಿರೋ ಚಿನ್ನಾಭರಣ, ದುಬಾರಿ ಅಲಂಕೃತ ವಸ್ತುಗಳು, ಪೀಠೋಪಕರಣಗಳ ಮೌಲ್ಯ ಮಾಪನ ಮಾಡಿದ್ರು. ಅಕ್ಕಸಾಲಿಗರು, ಪೀಠೋಪಕರಣಗಳ ಮೌಲ್ಯಮಾಪಕರನ್ನ ಕರೆಸಿ ಮೌಲ್ಯ ನಿರ್ಧರಿಸಲು ಮುಂದಾಗಿರೋ ಇಡಿ ಕಡತಗಳ ನಕಲು ತೆಗೆದುಕೊಳ್ಳಲು ಪ್ರಿಂಟರ್ ತರಿಸಿತು.

ಜಮೀರ್ ಸಹೋದರರಿಗೂ ಇಡಿ ಅಧಿಕಾರಿಗಳಿಂದ ಗ್ರಿಲ್! ಜಮೀರ್ ಅಹ್ಮದ್ ಖಾನ್ರ ಐವರು ಸಹೋದರಾದ ಜಮೀಲ್, ಶಕೀಲ್, ಆದಿಲ್, ಫಾಜಿಲ್ ಹಾಗೂ ಮುಜಾಮಿಲ್ಗೂ ಇಡಿ ರೇಡ್ನ ಬಿಸಿ ತಟ್ಟಿದೆ. ಐವರ ಪೈಕಿ ಶಕೀಲ್ ಹಾಗೂ ಮುಜಾಮಿಲ್ರನ್ನ ಇಡಿ ಅಧಿಕಾರಿಗಳು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ರು. ಸುಮಾರು 1 ಗಂಟೆ ಶಕೀಲ್ಗೆ ವಿಚಾರಣೆ ಬಿಸಿ ಮುಟ್ಟಿಸಿದ್ರೆ, ಮುಜಾಮಿಲ್ ವಿಚಾರಣೆ ತಡರಾತ್ರಿಯಾದ್ರೂ ಮುಂದುವರಿದಿತ್ತು. ಜಮೀರ್ ಮನೆ ಪಕ್ಕದಲ್ಲೇ ಐವರು ಸಹೋದರರ ನಿವಾಸಗಳಿವೆ. ಐದು ಅಂತಸ್ತಿನ ಕಟ್ಟಡದಲ್ಲಿ ಒಬ್ಬೊರಿಗೆ ಒಂದು ಫ್ಲೋರ್ ಹಂಚಿರುವ ಜಮೀರ್ ಅಹ್ಮದ್ ತಮ್ಮ ಮಗ ಮತ್ತು ತಾಯಿಗೆ ಪ್ರತ್ಯೇಕ ನಿವಾಸ ಮಾಡಿಕೊಟ್ಟಿದ್ದಾರೆ.

ಜಮೀರ್ ಪರಮಾಪ್ತ ಮುಜಾಹಿದ್ಗೂ ತಟ್ಟಿದ ಇಡಿ ಬಿಸಿ ಜಮೀರ್ ಪರಮಾಪ್ತ ಮುಜಾಹಿದ್ಗೂ ಇಡಿ ದಾಳಿ ಬಿಸಿ ತಟ್ಟಿದೆ. ಫ್ರೇಜರ್ ಟೌನ್ನ ಎಂ.ಎಂ ಸ್ಟ್ರೀಟ್ನಲ್ಲಿರೋ ಜಮೀರ್ ಆಪ್ತ ಮುಜಾಹಿದ್ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಮೀರ್ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಮುಜಾಹಿದ್ ಶಿವಾಜಿನಗರದಿಂದ ಕಾರ್ಪೋರೇಟರ್ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ. ಮುಂಬರುವ ಕಾರ್ಪೊರೇಟರ್ ಚುನಾವಣೆಯಲ್ಲಿ ಫ್ರೇಜರ್ ಟೌನ್ ಅಭ್ಯರ್ಥಿ ಅಂತಲೇ ಮುಜಾಹಿದ್ ಬಿಂಬಿತನಾಗಿದ್ದ. ಜೊತೆಗೆ ಐಎಂಎ ಹಗರಣದ ರೂವಾರಿ ಮನ್ಸೂರ್ಗೆ ನೆರವು ನೀಡಿದ್ದ ಆರೋಪ ಈತನ ಮೇಲಿದೆ. ಮನ್ಸೂರ್ ದೇಶ ಬಿಡುವಾಗ ಏರ್ಪೋರ್ಟ್ವರೆಗೂ ಮುಜಾಹಿದ್ ಸಾಥ್ ನೀಡಿದ್ದ. ಇದೇ ಕಾರಣಕ್ಕೆ ಎಸ್ಐಟಿ ಮುಜಾಹಿದ್ ವಿಚಾರಣೆ ನಡೆಸಿತ್ತು.

ಜಮೀರ್ ಮನೆ ಎದುರು ಪ್ರೊಟೆಸ್ಟ್.. ರಾತ್ರಿ ಅಲ್ಲಿಯೇ ನಿದ್ರೆ.. ಶಾಸಕ ಜಮೀರ್ ಅಹ್ಮದ್ ಖಾನ್ ಮೇಲೆ ಇಡಿ ದಾಳಿ ನಡೆದಿದೆ ಅಂತಾ ಗೊತ್ತಾಗ್ತಿದ್ದಂತೆ ಅವರ ಬೆಂಬಲಿಗರು ದಾಳಿ ಖಂಡಿಸಿ ನಿನ್ನೆ ಬೆಳಗ್ಗೆಯಿಂದ ಪ್ರತಿಭಟನೆ ನಡೆಸಿದ್ರು. ರಾತ್ರಿಯಾದ್ರೂ ಜಮೀರ್ ಅಹ್ಮದ್ ಖಾನ್ರ ಕಟ್ಟಾ ಬೆಂಬಲಿಗರು ಮನೆಯ ಬಳಿಯೇ ಪ್ರೊಟೆಸ್ಟ್ ನಡೆಸಿದ್ರು. ಯಾವಾಗ ಇಡಿ ಅಧಿಕಾರಿಗಳು ರಾತ್ರಿ ಊಟವನ್ನ ತರಿಸಿದ್ರೋ.. ಜಮೀರ್ ಬೆಂಬಲಿಗರಿಗೆ ಇವತ್ತು ರಾತ್ರಿ ಕೂಡ ಅಧಿಕಾರಿಗಳು ಮನೆಯಿಂದ ಹೊರ ಹೋಗಲ್ಲ ಅನ್ನೋದು ಪಕ್ಕಾ ಆಯ್ತು. ಇದೇ ಕಾರಣಕ್ಕೆ ಜಮೀರ್ ಅಹ್ಮದ್ ಖಾನ್ರ ಸುಮಾರು 50ಕ್ಕೂ ಹೆಚ್ಚು ಬೆಂಬಲಿಗರು ಅವರ ಮನೆಯ ಬಳಿಯೇ ಪ್ರತಿಭಟನೆ ಮಾಡುತ್ತಾ ರಾತ್ರಿ ನಿದ್ರೆ ಜಾರಿದ್ರು.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಲವಾರು ದಾಖಲೆ ವಶ ಪಡಿಸಿಕೊಂಡಿದ್ದು, ಜಮೀರ್ ಅಹ್ಮದ್ ಬಂಧನ ಸಾಧ್ಯತೆ ಸಹ ತಳ್ಳಿ ಹಾಕುವಂತಿಲ್ಲ. ಇದಕ್ಕೆ ಪುಷ್ಟಿ ನೀಡುವಂತೆ ಜಮೀರ್ ಸಹೋದರ ಮುಜಾಮಿಲ್ರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ. ಒಂದು ವೇಳೆ ಜಮೀರ್ರನ್ನ ಇಡಿ ಬಂಧಿಸದಿದ್ದರೂ ವಿಚಾರಣೆಗೆ ಬುಲಾವ್ ನೀಡುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಶಾಸಕ ಜಮೀರ್ ಅಹ್ಮದ್ ಸಹೋದರ ಶಕೀಲ್ ಅಹ್ಮದ್ ಖಾನ್​ ಇಡಿ ಅಧಿಕಾರಿಗಳ ವಶಕ್ಕೆ ಪಡೆದು ಬಿಡುಗಡೆ

Published On - 7:08 am, Fri, 6 August 21