
ಬೆಂಗಳೂರು, ಜುಲೈ 14: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಲಷ್ಕರೆ ತೊಯ್ಬಾ (ಎಲ್‌ಇಟಿ) ಉಗ್ರ ನಾಸಿರ್‌ಗೆ (Nasir) ಸಹಾಯ ಮಾಡುತ್ತಿದ್ದ ಮೂವರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ (NIA) ವಿಶೇಷ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ. ಆರು ದಿನ ಕಸ್ಟಡಿ ವಿಚಾರಣೆ ಸೋಮವಾರ (ಜು.14) ಮುಗಿದ ಹಿನ್ನೆಲೆಯಲ್ಲಿ ಎನ್‌ಐಎ ಆರೋಪಿಗಳಾದ ಅನೀಸ್ ಫಾತಿಮಾ, ಎಎಸ್ಐ ಚಾನ್ ಪಾಷಾ ಮತ್ತು ವೈದ್ಯ ನಾಗರಾಜ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ನ್ಯಾಯಲಯ ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಉಗ್ರ ಟಿ ನಾಸಿರ್ನನ್ನು ನ್ಯಾಯಾಲಯಕ್ಕೆ ಕರೆತರುವಾಗ ಸ್ಫೋಟಿಸಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಹೋಗುವಂತೆ ಪ್ಲ್ಯಾನ್ ರೂಪಿಸಲಾಗಿತ್ತು. ಟಿ ನಾಸಿರ್ ಪೊಲೀಸರ ಕೈಯಿಂದ ತಪ್ಪಿಸಿಕೊಂಡ ಬಳಿಕ, ಆತನನ್ನು ಬಾಂಗ್ಲಾದೇಶಕ್ಕೆ ಕಳುಹಿಸಲು ಆರೋಪಿಗಳು ನಿರ್ಧರಿಸಿದ್ದರು ಎಂದು ಎನ್‌ಐಎ ವಿಚಾರಣೆ ತಿಳಿದುಬಂದಿದೆ.
ಇನ್ನು, ಉಗ್ರ ನಾಸೀರ್ಗೆ ಪೊಲೀಸ್ ಸಮವಸ್ತ್ರ ಧರಿಸಿ ಕರೆದುಕೊಂಡು ಹೋಗಬೇಕು ಎಂದು ಪ್ಲಾನ್ ಮಾಡಲಾಗಿತ್ತು. ಈ ಸಂಬಂಧ ಆರೋಪಿಗಳು 10 ಜೊತೆ ಪೊಲೀಸ್ ಸಮವಸ್ತ್ರ ಖರೀದಿ ಮಾಡಿದ್ದರು. ಸದ್ಯ ಹತ್ತೂ ಜೊತೆ ಪೊಲೀಸ್ ಸಮವಸ್ತ್ರಗಳನ್ನು ಎನ್‌ಐಎ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: ಉಗ್ರ ನಾಸಿರ್ನನ್ನು ಎಸ್ಕೆಫ್ ಮಾಡಿಸಲು ಫಾತಿಮಾ ತಡರಾತ್ರಿ ಪ್ಲಾನ್: ಫೋನ್ನಲ್ಲಿ ಗಂಟೆಗಟ್ಟಲೇ ಮಾತುಕತೆ
ಪೊಲೀಸ್ ಸಮವಸ್ತ್ರ ಖರೀದಿಗೆ ಎಎಸ್ಐ ಚಾನ್ ಪಾಷ ಸಹಾಯ ಮಾಡಿದ್ದನು. ಎಎಸ್ಐ ಚಾನ್ ಪಾಷಾ ಸೂಚನೆ ಮೇರೆಗೆ ಉಳಿದ ಆರೋಪಿಗಳು ಶಿವಾಜಿನಗರದಲ್ಲಿ ಪೊಲೀಸ್ ಸಮವಸ್ತ್ರ ಖರೀದಿ ಮಾಡಿದ್ದರು. ಎಎಸ್ಐ ಚಾನ್ ಪಾಷ ಟಿ ನಾಸಿರ್ನನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಲು ಸಿಬ್ಬಂದಿಗಳನ್ನು ನಿಯೋಜನೆ ಮಾಡಿದ್ದನು. ಟಿ ನಾಸಿರ್ನನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಲು ವಯಸ್ಸಾಗಿರುವ ಮತ್ತು ಶಕ್ತಿ ಇಲ್ಲದವರನ್ನು ನೇಮಕ ಮಾಡಿದ್ದನು.
ನಂತರ ದಾರಿ ನಡುವೆ ಸ್ಫೋಟಿಸಿ, ಪೊಲೀಸ್ ಸಮವಸ್ತ್ರದಲ್ಲಿ ಟಿ ನಾಸಿರ್ನನ್ನು ಪರಾರಿ ಮಾಡಿಸುವುದು ಇವರ ಯೋಜನೆಯಾಗಿತ್ತು. ನಂತರ ಕೇರಳಕ್ಕೆ ಕರೆದುಕೊಂಡು ಹೋಗಿ, ಅಲ್ಲಿಂದ ಸಮುದ್ರ ಮಾರ್ಗವಾಗಿ ಪಶ್ಚಿಮ ಬಂಗಾಳಕ್ಕೆ, ಇಲ್ಲಿಂದ ಬಾಂಗ್ಲಾದೇಶಕ್ಕೆ ಕರೆದುಕೊಂಡು ಹೋಗುವ ಪ್ಲಾನ್ ಆರೋಪಿಗಳು ರೂಪಿಸಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:02 pm, Mon, 14 July 25