ಬೆಂಗಳೂರು ತಲುಪಿದ ಗ್ರೂಪ್​ ಕ್ಯಾಪ್ಟನ್ ವರುಣ್​ ಸಿಂಗ್​ ಅವರಿರುವ ಏರ್​ ಆಂಬುಲೆನ್ಸ್

ರಕ್ಷಣಾ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಅವರೊಂದಿಗೆ ನಿನ್ನೆ ಬಿಪಿನ್ ರಾವತ್ ಸಹ ಪ್ರಯಾಣ ಬೆಳೆಸಿದ್ದರು. 14 ಮಂದಿಯ ಪೈಕಿ ವರುಣ್ ಸಿಂಗ್ ಮಾತ್ರ ಬದುಕುಳಿದಿದ್ದರು.

ಬೆಂಗಳೂರು ತಲುಪಿದ ಗ್ರೂಪ್​ ಕ್ಯಾಪ್ಟನ್ ವರುಣ್​ ಸಿಂಗ್​ ಅವರಿರುವ ಏರ್​ ಆಂಬುಲೆನ್ಸ್
ವರುಣ್​ ಸಿಂಗ್​
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 09, 2021 | 6:17 PM

ಬೆಂಗಳೂರು: ತಮಿಳುನಾಡಿನ ಕುನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ವಾಯುಪಡೆಯ ಗ್ರೂಪ್​ ಕ್ಯಾಪ್ಟನ್ ವರುಣ್​ ಸಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲಾಗಿದೆ. ವರುಣ್ ಸಿಂಗ್ ಅವರಿದ್ದ ಏರ್ ಆಂಬುಲೆನ್ಸ್ ಸೂಲೂರು ವಾಯುನೆಲೆಯಿಂದ ಗುರುವಾರ ಸಂಜೆ ಬೆಂಗಳೂರು ತಲುಪಿತು. ಎಚ್​ಎಎಲ್ ವಿಮಾನ ನಿಲ್ದಾಣಕ್ಕೆ ಬಂದ ಏರ್​ ಆಂಬುಲೆನ್ಸ್​ನಿಂದ ವರುಣ್ ಸಿಂಗ್ ಅವರನ್ನು ಓಲ್ಡ್​ ಏರ್​ಪೋರ್ಟ್​ ರಸ್ತೆಯಲ್ಲಿರುವ ಕಮಾಂಡೊ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕಮಾಂಡೋ ಆಸ್ಪತ್ರೆ ಬಳಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ರಕ್ಷಣಾ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಅವರೊಂದಿಗೆ ನಿನ್ನೆ ಬಿಪಿನ್ ರಾವತ್ ಸಹ ಪ್ರಯಾಣ ಬೆಳೆಸಿದ್ದರು. 14 ಮಂದಿಯ ಪೈಕಿ ವರುಣ್ ಸಿಂಗ್ ಮಾತ್ರ ಬದುಕುಳಿದಿದ್ದರು. ದೇಹದ ಬಹುತೇಕ ಭಾಗ ಸುಟ್ಟು ಹೋಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.

ತಮಿಳುನಾಡಿನ ಕುನೂರ್​ನಲ್ಲಿ ಬುಧವಾರ (ಡಿ.8) ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಣ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಾಯುಪಡೆಯ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಪ್ರಸ್ತುತ ವೆಲ್ಲಿಂಗ್​ಟನ್​ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2020ರಲ್ಲಿ ತಮ್ಮ ತೇಜಸ್ ಯುದ್ಧವಿಮಾನವನ್ನು ಕಾಪಾಡಿಕೊಂಡಿದ್ದಕ್ಕಾಗಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಶೌರ್ಯ ಚಕ್ರ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ವರುಣ್ ಸಿಂಗ್ ಸಹ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವಾಯುಪಡೆಯು ಟ್ವೀಟ್​ ಮೂಲಕ ತಿಳಿಸಿದೆ. ಘಟನೆ ಕುರಿತು ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಪಘಾತದಲ್ಲಿ ಮೃತಪಟ್ಟಿವರಿಗೆ ಸಂತಾಪ ಸೂಚಿಸಿದ್ದಾರೆ. ದುರ್ಘಟನೆಯಲ್ಲಿ ಬದುಕುಳಿದಿರುವ ಏಕೈಕ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಕಳೆದ ಆಗಸ್ಟ್ 15ರಂದು ವಿಂಗ್ ಕಮಾಂಡರ್​ ವರುಣ್ ಸಿಂಗ್ ಅವರು ಹಗುರ ಯುದ್ಧ ವಿಮಾನ (Light Combat Aircraft – LCA) ಸ್ಕ್ವಾರ್ಡನ್​ನಲ್ಲಿ ಪೈಲಟ್ ಆಗಿದ್ದರು. ಅವರಿಗೆ ಭಾರತದ ಸಶಸ್ತ್ರಪಡೆಗಳಿಗೆ ಶಾಂತಿಕಾಲದಲ್ಲಿ ನೀಡುವ ಮೂರನೇ ಅತ್ಯುನ್ನತ ಗೌರವವಾದ ಶೌರ್ಯಚಕ್ರ ನೀಡಿ ಪುರಸ್ಕರಿಸಲಾಗಿತ್ತು. ರಕ್ಷಣಾ ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಅಕ್ಟೋಬರ್ 12, 2020ರಂದು ಎಲ್​ಸಿಎ ತೇಜಸ್​ನಲ್ಲಿ ಹಾರಾಟ ನಡೆಸುತ್ತಿದ್ದ ವರುಣ್ ಸಿಂಗ್ ತಮ್ಮ ಮೂಲನೆಲೆಯಿಂದ ಬಹುದೂರದಲ್ಲಿದ್ದರು. ವಿಮಾನದ ನಿಯಂತ್ರಣ ವ್ಯವಸ್ಥೆ ಮತ್ತು ಒತ್ತಡ ನಿರ್ವಹಣೆ ವ್ಯವಸ್ಥೆಗಳಲ್ಲಿ ದೋಷ ಕಾಣಿಸಿಕೊಂಡಿತ್ತು. ವಿಮಾನವು ಎತ್ತರದಲ್ಲಿದ್ದಾಗ ಕಾಕ್​ಪಿಟ್​ನಲ್ಲಿ ಒತ್ತಡ ವೈಫಲ್ಯ ಕಂಡುಬಂದಿತ್ತು.

ತಾಂತ್ರಿಕ ಲೋಪವನ್ನು ಸಮರ್ಥವಾಗಿ ಗುರುತಿಸಿ ವಿಮಾನದ ಎತ್ತರವನ್ನು ತಕ್ಷಣ ಕಡಿಮೆ ಮಾಡಿದರು. ಎತ್ತರ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುವಾಗ ವಿಮಾನದ ನಿಯಂತ್ರಣ ವ್ಯವಸ್ಥೆ ವಿಫಲವಾಗಿ, ವಿಮಾನವು ಪೈಲಟ್​ನ ನಿಯಂತ್ರಣ ಕಳೆದುಕೊಳ್ಳುವ ಅಪಾಯ ಎದುರಾಗಿತ್ತು. ಅತ್ಯಂತ ಚಾಕಚಕ್ಯತೆ ಮತ್ತು ಜಾಣತನದಿಂದ ಪರಿಸ್ಥಿತಿ ನಿಭಾಯಿಸಿದ ವಿಕ್ರಮ್ ಸಿಂಗ್, ವಿಮಾನವನ್ನು ಕಾಪಾಡಿಕೊಂಡಿದ್ದರು ಎಂದು ರಕ್ಷಣಾ ಇಲಾಖೆ ತಿಳಿಸಿದೆ. ಇಂಥ ಸಂದರ್ಭದಲ್ಲಿ ವಿಮಾನ ಇದ್ದಕ್ಕಿದ್ದಂತೆ ಮೇಲೇರುವುದು-ಕೆಳಗಿಳಿಯುವುದು ಸಾಮಾನ್ಯ. ಇದು ಪೈಲಟ್​ಗಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಕ್ಕೆ ದೊಡ್ಡಸವಾಲು ತಂದೊಡ್ಡುತ್ತದೆ. ಈ ಸಂದರ್ಭದಲ್ಲಿ ವಿಂಗ್ ಕಮಾಂಡರ್ ವರುಣ್ ಸಿಂಗ್ ಅತ್ಯುನ್ನತ ಮಟ್ಟದ ಮಾನಸಿಕ ಸ್ಥೈರ್ಯದೊಂದಿಗೆ ಹಾರಾಟ ಕೌಶಲವನ್ನೂ ಪ್ರದರ್ಶಿಸಿದರು.

ಒಮ್ಮೆ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡರೂ, ಮತ್ತೊಮ್ಮೆ 10,000 ಅಡಿಗಳಷ್ಟು ಎತ್ತರದಲ್ಲಿ ವಿಮಾನ ಸಂಪೂರ್ಣವಾಗಿ ನಿಯಂತ್ರಣ ತಪ್ಪಿದ ಅನುಭವವಾಯಿತು. ವಿಮಾನವು ಹೇಗೆಂದರೆ ಹಾಗೆ ಹೊರಳಲು ಶುರುಮಾಡಿತು. ಇಂಥ ಸಂದರ್ಭಗಳಲ್ಲಿ ತಮ್ಮ ಜೀವ ಉಳಿಸಿಕೊಳ್ಳಲು ಪೈಲಟ್​ಗಳಿಗೆ ವಿಮಾನದಿಂದ ಹೊರಜಿಗಿಯಲು ಅನುಮತಿಯಿದೆ. ತನ್ನ ಜೀವಕ್ಕೆ ಅಪಾಯವಿದ್ದರೂ ಲೆಕ್ಕಿಸದ ವಿಕ್ರಮ್ ಸಿಂಗ್, ಅಪರೂಪದ ಧೈರ್ಯ ಮತ್ತು ಕೌಶಲಗಳನ್ನು ಪ್ರದರ್ಶಿಸಿದರು. ಯುದ್ಧವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು.

ಕರ್ತವ್ಯದ ಕರೆಯನ್ನೂ ಮೀರಿ ವರ್ತಿಸಿದ ಪೈಲಟ್ ವಿಮಾನವನ್ನು ತಮ್ಮದೇ ನಿಖರ ಲೆಕ್ಕಾಚಾರದಲ್ಲಿ ಲ್ಯಾಂಡ್ ಮಾಡಿದರು. ವಿಮಾನದ ತಾಂತ್ರಿಕ ವೈಫಲ್ಯವನ್ನು ನಿಖರವಾಗಿ ಪತ್ತೆ ಮಾಡಲು ಮತ್ತು ಮುಂದಿನ ದಿನಗಳಲ್ಲಿ ಅಂಥ ಸಂದರ್ಭಗಳು ಎದುರಾದಾಗ ನಿರ್ವಹಿಸಬೇಕಾದ ರೀತಿಯನ್ನು ಅರಿತುಕೊಳ್ಳಲು ಇದು ನೆರವಾಯಿತು. ತಮ್ಮ ಜೀವವನ್ನು ಒತ್ತೆಯಿಟ್ಟು ಅವರು ಪ್ರದರ್ಶಿಸಿದ ಅತ್ಯುನ್ನತ ವೃತ್ತಿಪರ ನಡವಳಿಕೆ, ಮಾನಸಿಕ ಸ್ಥೈರ್ಯ ಮತ್ತು ಚುರುಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವು ನಾಗರಿಕರ ಜೀವ, ಆಸ್ತಿಪಾಸ್ತಿ ಹಾಗೂ ಯುದ್ಧವಿಮಾನದ ನಷ್ಟವನ್ನು ತಪ್ಪಿಸಿತು ಎಂದು ಹೇಳಿಕೆಯು ತಿಳಿಸಿದೆ.

ತಮಿಳುನಾಡಿನ ವೆಲ್ಲಿಂಗ್​ಟನ್​ನಲ್ಲಿರುವ ಡಿಫೆನ್ಸ್​ ಸ್ಟಾಫ್ ಕಾಲೇಜ್​ಗೆ ತೆರಳುತ್ತಿದ್ದ ರಕ್ಷಣಾ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಕೊಯಮತ್ತೂರಿನ ಸೂಲೂರು ಸಮೀಪ ಹೆಲಿಕಾಪ್ಟರ್​ ಪತನಗೊಂಡು ಮೃತಪಟ್ಟರು. ರಾವತ್ ಅವರೊಂದಿಗೆ ಅವರ ಪತ್ನಿ ಮಧುಲಿಕಾ ರಾವತ್, ಸೆಕ್ಯುರಿಟಿ ಕಮಾಂಡೊಗಳು, ಡೆಫೆನ್ಸ್ ಅಸಿಸ್ಟೆಂಟ್ ಮತ್ತು ವಾಯುಪಡೆಯ ಪೈಲಟ್ ಮೃತಪಟ್ಟರು.

ಇದನ್ನೂ ಓದಿ: ಚಿಕಿತ್ಸೆಗೆ ಸ್ಪಂದಿಸುತ್ತಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್‌: ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ‌ ಕಮಾಂಡ್ ಆಸ್ಪತ್ರೆಗೆ ರವಾನೆ
ಇದನ್ನೂ ಓದಿ: ಅಂದು ಪಾಕ್​ ಸೇನಾ ಮುಖ್ಯಸ್ಥ ಬಜ್ವಾರನ್ನು ತಬ್ಬಿದ್ದ ನವಜೋತ್​ ಸಿಂಗ್ ಸಿಧು, ಇಂದು ಬಿಪಿನ್​ ರಾವತ್​ ನಿಧನಕ್ಕೆ ಸಂತಾಪ ಸೂಚಿಸಿಲ್ಲ-ಬಿಜೆಪಿ ಆಕ್ಷೇಪ