ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ ವಿಚಾರದಲ್ಲಿ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಸಿಗದೇ ಇರುವುದರಿಂದ ಕೇಸ್ ವಜಾ ಆಗಿತ್ತು. ಆದರೆ, ಇದೀಗ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಯಾಗಿದ್ದು, ಯಡಿಯೂರಪ್ಪ ಸೇರಿದಂತೆ ಪ್ರತಿವಾದಿಗಳಿಗೆ ಹೈಕೋರ್ಟ್ ನೋಟಿಸ್ (Notice) ನೀಡಿದೆ. ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಶಶಿಧರ ಮರಡಿ, ಸಂಜಯ್ಶ್ರೀ, ಚಂದ್ರಕಾಂತ ರಾಮಲಿಂಗಮ್, ಡಾ.ಜಿ.ಸಿ.ಪ್ರಕಾಶ್, ಎಸ್.ಟಿ.ಸೋಮಶೇಖರ್, ಕೆ.ರವಿ, ವಿರೂಪಾಕ್ಷಪ್ಪ ಯಮಕನಮರಡಿಗೆ ನೋಟಿಸ್ ಜಾರಿ ಮಾಡಲಾಗಿದೆ. ದೂರುದಾರ ಟಿ.ಜೆ.ಅಬ್ರಹಾಂ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ಏಕಸದಸ್ಯ ಪೀಠದಿಂದ ನೋಟಿಸ್ ಜಾರಿ ಮಾಡಲಾಗಿದೆ.
ಯಡಿಯೂರಪ್ಪ ಈಗ ಮುಖ್ಯಮಂತ್ರಿ ಅಲ್ಲದೇ ಇರುವುದರಿಂದ ಪೂರ್ವಾನುಮತಿ ಅಗತ್ಯವಿಲ್ಲವೆಂದು ವಕೀಲರು ವಾದ ಮಂಡಿಸಿದ್ದಾರೆ. ಟಿ.ಜೆ.ಅಬ್ರಹಾಂ ಈ ವಿಚಾರವಾಗಿ ಅರ್ಜಿ ಸಲ್ಲಿಸಿದ್ದು, ಅವರ ಪರವಾದ ವಕೀಲರು ಹೀಗೆ ವಾದ ಮಂಡಿಸಿದ್ದಾರೆ. ಪೂರ್ವಾನುಮತಿ ಬಗ್ಗೆ ವಾದ ಆಲಿಸಬೇಕಾದ ಅಗತ್ಯ ಇರುವುದರಿಂದ ಹೈಕೋರ್ಟ್ ಏಕಸದಸ್ಯ ಪೀಠದಿಂದ ಯಡಿಯೂರಪ್ಪ ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್ ನೀಡಲಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬದವರ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣವನ್ನು ಸಿಬಿಐ ಅಥವಾ ಎಸ್ಐಟಿ ತನಿಖೆಗೆ ವಹಿಸಬೇಕೆಂದು ಕೋರಿ ಪಿಐಎಲ್ ಸಲ್ಲಿಸುವುದಕ್ಕೆ ಅವಕಾಶ ನೀಡುವಂತೆ ಹೈಕೋರ್ಟ್ನಲ್ಲಿ ಟಿ.ಜೆ.ಅಬ್ರಹಾಂ ಅರ್ಜಿ ಸಲ್ಲಿಸಿದ್ದರು. ಆದರೆ ಟಿ.ಜೆ.ಅಬ್ರಹಾಂ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್, ಈ ಹಿಂದೆ ಅರ್ಜಿದಾರರು ಖಾಸಗಿ ದೂರು ಸಲ್ಲಿಸಿದ್ದ ಹಿನ್ನೆಲೆ ಈಗಿನದನ್ನು ಪಿಐಎಲ್ ಆಗಿ ಪರಿಗಣಿಸಲು ಸಾಧ್ಯವಿಲ್ಲವೆಂದು ಅರ್ಜಿಯನ್ನು ತಿರಸ್ಕರಿಸಿತ್ತು.
ಅದೇ ವೇಳೆ, ಅರ್ಜಿಯನ್ನು ಮಾರ್ಪಡಿಸಿ ಸಂಬಂಧಿಸಿದ ಪೀಠಕ್ಕೆ ವರ್ಗಾಯಿಸಲು ರಿಜಿಸ್ಟ್ರಾರ್ ಜನರಲ್‌ರಿಗೆ ಹೈಕೋರ್ಟ್ ಸೂಚನೆ ನೀಡಿತ್ತು. ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಪೂರ್ವಾನುಮತಿ ನಿರಾಕರಣೆ ಹಿನ್ನೆಲೆ ಇತ್ತೀಚೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತನಿಖೆಗೆ ಆದೇಶಿಸಲು ನಿರಾಕರಿಸಿತ್ತು. ಹೀಗಾಗಿ ಟಿ.ಜೆ.ಅಬ್ರಹಾಂ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ:
ಬಿಎಸ್ ಯಡಿಯೂರಪ್ಪ, ಕುಟುಂಬದವರ ವಿರುದ್ಧ ಭ್ರಷ್ಟಾಚಾರ ಆರೋಪ: ಪಿಐಎಲ್ ಆಗಿ ಪರಿಗಣಿಸಲು ಸಾಧ್ಯವಿಲ್ಲವೆಂದ ಹೈಕೋರ್ಟ್
ಭ್ರಷ್ಟಾಚಾರ ತಡೆ ಕಾಯ್ದೆಗೆ ವಿರುದ್ಧ ಆದೇಶ ನೀಡಬಾರದು: ಡಿ ಕೆ ಶಿವಕುಮಾರ್ ಪರ ವಕೀಲರ ಮನವಿಗೆ ಸಿಬಿಐ ಆಕ್ಷೇಪ
(Allegations of corruption High Court issues notice to defendants including BS Yediyurappa and Vijayendra)