
ಬೆಂಗಳೂರು, ಜೂನ್ 18: ನಮ್ಮ ಮೆಟ್ರೋದ (Namma Metro) 10 ಪ್ರಮುಖ ನಿಲ್ದಾಣಗಳಲ್ಲಿ ಅಮುಲ್ (Ammul) ಕಿಯೋಸ್ಕ್ ಮಳಿಗೆ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ ಲಿ. ಜೊತೆಗೆ ಬಿಎಂಆರ್‌ಸಿಎಲ್ ಒಪ್ಪಂದ ಮಾಡಿಕೊಂಡಿರುವುದಕ್ಕೆ ಸಾರ್ವಜನಿಕರ ವಲಯದಿಂದ ವಿರೋಧ ವ್ಯಕ್ತವಾಗುತ್ತಿದೆ. ವಿರೋಧ ಬೆನ್ನಲ್ಲೇ ಎಂಟು ನಿಲ್ದಾಣಗಳಲ್ಲಿ ಅಮುಲ್‌ಗೆ ಮತ್ತು ಎರಡು ನಿಲ್ದಾಣಗಳಲ್ಲಿ ಕೆಎಂಎಫ್ಗೆ ಮಳಿಗೆ ತೆರೆಯಲು ಅನುಮತಿ ನೀಡಲಾಗಿದೆ ಎಂದು ವರದಿಯಾಗಿತ್ತು. ಇದರಿಂದ ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲ ಮೂಡಿದ್ದು, ಈ ಗೊಂದಲಗಳಿಗೆ ಬಿಎಂಆರ್ಸಿಎಲ್ನ (BMRCL) ಸಾರ್ವಜನಿಕ ಮುಖ್ಯ ಸಂಪರ್ಕಾಧಿಕಾರಿ ಯಶ್ವಂತ್ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾರ್ವಜನಿಕ ಮುಖ್ಯ ಸಂಪರ್ಕಾಧಿಕಾರಿ ಯಶ್ವಂತ್, “ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆಗಳು ಟೆಂಡರ್ ಮೂಲಕ ಆಗಿದೆ. ಅಮುಲ್ ಟೆಂಡರ್‌ನಲ್ಲಿ ಭಾಗಿಯಾಗಿ 10 ಮಳಿಗೆಗಳನ್ನು ತೆಗೆದುಕೊಂಡಿದೆ. ಎಂ.ಜಿ.ರೋಡ್, ಮಹಾಲಕ್ಷ್ಮೀ ಲೇಔಟ್, ವಿಜಯನಗರದಲ್ಲಿ ನಂದಿನಿ ಮಳಿಗೆಗಳಿದ್ದವು. ಈಗ ವಿಜಯನಗರದಲ್ಲಿ ಮಾತ್ರ ಮಳಿಗೆ ಇದೆ, ಎರಡು ಕಡೆ ಕಾರಣಾಂತರದಿಂದ ತೆಗೆದಿದ್ದಾರೆ” ಎಂದು ತಿಳಿಸಿದರು.
“ಟೆಂಡರ್‌ನಲ್ಲಿ ಭಾಗಿಯಾಗಿದರೆ ನಂದಿನಿ ಮಳಿಗೆಗೂ ಅವಕಾಶ ಕೊಡುತ್ತೇವೆ. ನಮಗೆ ಯಾರು ಕೂಡ ಮುಖ್ಯ ಅಲ್ಲ. 10 ಮಳಿಗೆಗೆ ಪ್ರತಿ ತಿಂಗಳು 7 ಲಕ್ಷ ರೂಪಾಯಿಯಂತೆ 5 ವರ್ಷಕ್ಕೆ ಟೆಂಡರ್ ಆಗಿದೆ. ಇತ್ತೀಚಿಗೆ ನಾವು ಕರೆದಿರುವ ಟೆಂಡರ್‌ನಲ್ಲಿ ಕೆಎಂಎಫ್ ಭಾಗಿಯಾಗಿರಲಿಲ್ಲ” ಎಂದು ಹೇಳಿದರು.
ಪಟ್ಟಂದೂರು ಅಗ್ರಹಾರ, ಇಂದಿರಾನಗರ, ಬೆನ್ನಿಗಾನಹಳ್ಳಿ, ಬೈಯಪ್ಪನಹಳ್ಳಿ, ಟ್ರಿನಿಟಿ, ಸರ್. ಎಂ.ವಿಶ್ವೇಶ್ವರಯ್ಯ, ಮೆಜೆಸ್ಟಿಕ್, ನ್ಯಾಷನಲ್ ಕಾಲೇಜು, ಜಯನಗರ ಹಾಗೂ ಬನಶಂಕರಿ ನಿಲ್ದಾಣದಲ್ಲಿ ಅಮುಲ್ ಮಳಿಗೆಗಳು ತೆರೆಯಲು ಒಪ್ಪಂದವಾಗಿದೆ ಎಂದು ವರದಿಯಾಗಿದೆ.
ಈಗಾಗಲೇ ವಿವೇಕಾನಂದ ಮೇಟ್ರೋ ನಿಲ್ದಾಣದಲ್ಲಿ ಅಮುಲ್ ಮಳಿಗೆ ಬಾಗಿಲು ತೆರೆದಿದೆ. ಇದರಿಂದ, ಕೆಎಂಎಫ್ ನಂದಿನಿಗೆ ಭಾರಿ ಅನ್ಯಾಯವಾಗಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ನಮ್ಮದೇ ಕೆಎಂಎಫ್ ನಂದಿನಿ ಇರುವಾಗ ಅಮುಲ್‌ಗೆ ಏಕೆ ಅವಕಾಶ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಮಳಿಗೆ ಸ್ಥಾಪನೆಗೆ ಮುಂದಾದ ಬಿಎಂಆರ್‌ಸಿಎಲ್: ಸಾರ್ವಜನಿಕರಿಂದ ಆಕ್ಷೇಪ
ಅಮುಲ್ ಮಳಿಗೆ ತೆರೆದಿರುವುದಕ್ಕೆ ಸಾಮಾಜಿಕ ಜಲಾತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ‘ಕೆಎಂಎಫ್ ನಂದಿನಿ ಇರುವಾಗ ಅಮುಲ್‌ಗೆ ಅವಕಾಶ ಮಾಡಿಕೊಟ್ಟಿರುವುದು ಯಾಕೆ? ಬಿಎಂಆರ್‌ಸಿಎಲ್ ಗುಜರಾತ್ ಮೂಲದ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡು ಅಮುಲ್ ಉತ್ಪನ್ನಗಳಿಗೆ ಯಾಕಾಗಿ ಪ್ರಾಶಸ್ತ್ರ ನೀಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಪ್ರಶ್ನಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:49 pm, Wed, 18 June 25