ಲಾಭದ ಹಣ ದಾನ ಮಾಡುವುದಕ್ಕೆಂದು ಹೂಡಿಕೆ ಮಾಡಿದ ಉದ್ಯಮಿಗೆ ಕಾದಿತ್ತು ಶಾಕ್: 8 ಕೋಟಿ ರೂ. ಖತಂ!
ಬೆಂಗಳೂರಿನ ಹಿರಿಯ ಉದ್ಯಮಿ, ರಾಮ ಭಕ್ತರಾದ ರಾಜೇಂದ್ರ ನಾಯ್ಡು ಅವರನ್ನು ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ ವಂಚಿಸಿರುವ ಸೈಬರ್ ಖದೀಮರು, 8.3 ಕೋಟಿ ರೂ. ಎಗರಿಸಿದ್ದಾರೆ. ಹೂಡಿಕೆಯಿಂದ ಬಂದ ಲಾಭದ ಹಣವನ್ನು ದಾನ ಮಾಡಲು ಉದ್ದೇಶಿಸಿದ್ದ ರಾಜೇಂದ್ರ ನಾಯ್ಡು ಇದ್ದ ಹಣವನ್ನೂ ಕಳೆದು ಕೈಸುಟ್ಟುಕೊಂಡಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಅವರು ಕಳೆದುಕೊಂಡಿದ್ಹೇಗೆ? ವಂಚನೆ ಬೆಳಕಿಗೆ ಬಂದಿದ್ಹೇಗೆ? ಇಲ್ಲಿದೆ ಮಾಹಿತಿ.

ಬೆಂಗಳೂರು, ಡಿಸೆಂಬರ್ 15: ಅಯೋಧ್ಯೆಯ ರಾಮಭಕ್ತನಾಗಿರುವ ಹಿರಿಯ ಉದ್ಯಮಿಯೊಬ್ಬರು ಸೈಬರ್ ವಂಚಕರ (Cyber Fraud) ಭಾರೀ ಮೋಸಕ್ಕೆ ಒಳಗಾಗಿ 8.3 ಕೋಟಿ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ಬೆಳಕಿಗೆ ಬಂದಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ನಂಬಿಸಿ ಸೈಬರ್ ವಚಕರು ಅವರಿಂದ ಹಣ ಪೀಕಿಸಿದ್ದಾರೆ. ವಂಚನೆಗೆ ಒಳಗಾದವರು ರಾಜೇಂದ್ರ ನಾಯ್ಡು (71) ಎಂಬ ಉದ್ಯಮಿಯಾಗಿದ್ದು, ಅಯೋಧ್ಯೆಯ ರಾಮ ಭಕ್ತರಾಗಿದ್ದಾರೆ. ಅವರು ಅಯೋಧ್ಯೆಯ ರಾಮಮಂದಿರಕ್ಕೆ ಬೆಳ್ಳಿ ಪೂಜಾ ಸಾಮಾಗ್ರಿಗಳನ್ನು ದೇಣಿಗೆ ನೀಡಿದ್ದರು. ಈ ಹಿಂದೆ ರಿಲಯನ್ಸ್ ಕ್ಯಾಪಿಟಲ್‌ನಲ್ಲಿ ಸಾಲ ಪಡೆದು ಅದನ್ನು ಸಂಪೂರ್ಣವಾಗಿ ತೀರಿಸಿದ್ದರು. ಈ ಮಾಹಿತಿಯನ್ನು ಸಂಗ್ರಹಿಸಿಕೊಂಡಿದ್ದ ಸೈಬರ್ ವಂಚಕರ ಜಾಲ, ನಾಯ್ಡು ಅವರಿಗೆ ಕರೆ ಮಾಡಿ ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದೆ ಎಂದು ನಂಬಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಿತು.
ಲಾಭ ಬಂದ ಹಣದಿಂದ ದಾನ-ಧರ್ಮ ಮಾಡಬಹುದೆಂದು ಭಾವಿಸಿದ್ದ ಉದ್ಯಮಿ
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಬಂದ ಲಾಭದ ಹಣವನ್ನು ದಾನ ಕಾರ್ಯಗಳಿಗೆ ಬಳಸಬಹುದು ಎಂಬ ಉದ್ದೇಶದಿಂದ ರಾಜೇಂದ್ರ ನಾಯ್ಡು ಹೂಡಿಕೆಗೆ ಮುಂದಾಗಿದ್ದರು. ರಿಲಯನ್ಸ್ ಕಂಪನಿಯ ಹೆಸರನ್ನು ಬಳಸಿ ನಂಬಿಕೆ ಮೂಡಿಸಿದ ವಂಚಕರು, RARCLLPRO ಎಂಬ ಮೊಬೈಲ್ ಆ್ಯಪ್ ಇನ್ಸ್ಟಾಲ್ ಮಾಡುವಂತೆ ಸೂಚಿಸಿದ್ದರು. ಆ್ಯಪ್ ಮೂಲಕ ಹೂಡಿಕೆ ವಿವರಗಳು ತೋರಿಸುತ್ತಿದ್ದುದರಿಂದ ನಂಬಿದ ನಾಯ್ಡು ಮೊದಲಿಗೆ 25 ಲಕ್ಷ ರೂಪಾಯಿ RTGS ಮೂಲಕ ವರ್ಗಾಯಿಸಿದ್ದರು.
ವಂಚನೆ ಎಂಬ ಬಗ್ಗೆ ಸಂಶಯ ಬಂದಿದ್ದು ಹೇಗೆ?
ಆ್ಯಪ್‌ನಲ್ಲಿ ಹೂಡಿಕೆ ಯಶಸ್ವಿಯಾಗಿದೆ ಎಂಬುದು ತೋರಿದ ಬಳಿಕ ಹಂತ ಹಂತವಾಗಿ ಒಟ್ಟು 8.3 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಿದ್ದಾರೆ. ಆ್ಯಪ್‌ನಲ್ಲಿ ಈ ಮೊತ್ತಕ್ಕೆ 59.4 ಕೋಟಿ ರೂಪಾಯಿ ಲಾಭಾಂಶ ಬಂದಿದೆ ಎಂದು ತೋರಿಸಲಾಗಿತ್ತು. ಇದರಲ್ಲಿ 15 ಕೋಟಿ ರೂಪಾಯಿ ವಿತ್‌ಡ್ರಾ ಮಾಡಲು ಪ್ರಯತ್ನಿಸಿದಾಗ ಸಾಧ್ಯವಾಗಿರಲಿಲ್ಲ. ಇದರಿಂದ ನಾಯ್ಡು ಅವರಿಗೆ ವಂಚನೆಯ ಅನುಮಾನ ಬಂದಿದೆ.
ಹಣ ವಿತ್‌ಡ್ರಾ ಮಾಡಲು ಸಾಧ್ಯವಾಗದ ಬಗ್ಗೆ ಪ್ರಶ್ನಿಸಿದಾಗ ವಂಚಕರು, ಅದಕ್ಕೆ ಶೇಕಡಾ 18 ರಷ್ಟು ಸೇವಾ ಶುಲ್ಕವಾಗಿ 2.70 ಕೋಟಿ ರೂಪಾಯಿ ಪಾವತಿಸಬೇಕು ಎಂದು ಬೇಡಿಕೆ ಇಟ್ಟರು. ಇದರಿಂದ ಅನುಮಾನಗೊಂಡ ರಾಜೇಂದ್ರ ನಾಯ್ಡು ತಕ್ಷಣ 1930 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿದರು.
ಇದನ್ನೂ ಓದಿ: ಸಂಜೆಯಾದ್ರೆ ಸಾಕು ಒಂಟಿಯಾಗಿ ಓಡಾಡೋ ಹೆಣ್ಣು ಮಕ್ಕಳೇ ಈತನ ಟಾರ್ಗೆಟ್: ಬೆಂಗಳೂರಿನಲ್ಲೊಬ್ಬ ವಿಚಿತ್ರ ಸೈಕೋ!
ಈ ಸಂಬಂಧ ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚಕರ ಖಾತೆಯಲ್ಲಿ ಇದ್ದ ಸುಮಾರು 61 ಲಕ್ಷ ರೂಪಾಯಿ ಹಣವನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ. ಸೈಬರ್ ವಂಚಕರ ಜಾಲ ಪತ್ತೆಗೆ ತನಿಖೆ ಮುಂದುವರೆದಿದೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು




