ಬಕ್ರೀದ್ ಹಬ್ಬ: ಕುರಿ, ಮೇಕೆಗಳ ವ್ಯಾಪಾರ ಜೋರು; ಮಾರುಕಟ್ಟೆಯಲ್ಲಿ ಅಮೀನಗಡ ಟಗರುಗಳದ್ದೇ ಹವಾ!

ಮುಸ್ಲಿಂ ಬಾಂಧವರ ಪವಿತ್ರ ಬಕ್ರೀದ್ ಹಬ್ಬದ ಸಂಭ್ರಮ ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಜೋರಾಗಿದೆ. ಹಬ್ಬಕ್ಕೆ ಬೇಕಾದ ಕುರಿ ಮತ್ತು ಮೇಕೆಗಳ ವ್ಯಾಪಾರ ಜೋರಾಗಿದ್ದು, ವಿವಿಧ ತಳಿಯ ಕುರಿಗಳಿಗೆ ಭಾರೀ ಬೇಡಿಕೆ ಬಂದಿದೆ. ವಿಶೇಷವಾಗಿ ಬಾಗಲಕೋಟೆಯ ಆಮೀನಗಡ ಟಗರುಗಳು ಒಂದೂವರೆ ಲಕ್ಷ ರೂಪಾಯಿವರೆಗೂ ಮಾರಾಟವಾಗುತ್ತಿವೆ.

ಬಕ್ರೀದ್ ಹಬ್ಬ: ಕುರಿ, ಮೇಕೆಗಳ ವ್ಯಾಪಾರ ಜೋರು; ಮಾರುಕಟ್ಟೆಯಲ್ಲಿ ಅಮೀನಗಡ ಟಗರುಗಳದ್ದೇ ಹವಾ!
ಬಕ್ರೀದ್
Image Credit source: tv9 kannada

Updated on: May 27, 2026 | 9:49 PM

ಬೆಂಗಳೂರು, ಮೇ 27: ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ಬಕ್ರೀದ್‌ಗೆ (Bakrid) ಕ್ಷಣಗಣನೆ ಶುರುವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಕುರಿ ಮತ್ತು ಮೇಕೆಗಳ ವ್ಯಾಪಾರ ವಹಿವಾಟು ಭರ್ಜರಿಯಾಗಿ ಕಳೆಗಟ್ಟಿದೆ. ಬೆಂಗಳೂರಿನ (bangaluru) ಐತಿಹಾಸಿಕ ಚಾಮರಾಜಪೇಟೆ ಈದ್ಗಾ ಮೈದಾನದ ಮುಖ್ಯರಸ್ತೆಗಳು ಇದೀಗ ಸಂಪೂರ್ಣವಾಗಿ ಕುರಿ ಸಂತೆಯಾಗಿ ಬದಲಾಗಿದೆ. ಹಬ್ಬಕ್ಕೆ ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಇರುವುದರಿಂದ, ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕುರಿ ಮತ್ತು ಮೇಕೆಗಳನ್ನು ಮಾರಾಟಕ್ಕೆ ತರಲಾಗಿದೆ. ವಿಶೇಷವಾಗಿ ಈ ಬಾರಿ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಅಮೀನಗಡ ತಳಿಯ ಟಗರುಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿದ್ದು, ಪ್ರಮುಖ ಆಕರ್ಷಣೆಯಾಗಿವೆ.

ಮುಖ್ಯಾಂಶಗಳು

  • ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ಬಕ್ರೀದ್‌ಗೆ ಕ್ಷಣಗಣನೆ; ರಾಜಧಾನಿಯಲ್ಲಿ ಭರ್ಜರಿ ಸಿದ್ಧತೆ
  • ಚಾಮರಾಜಪೇಟೆ ಈದ್ಗಾ ಮೈದಾನ ರಸ್ತೆಯಲ್ಲಿ ಕುರಿ, ಮೇಕೆಗಳ ವ್ಯಾಪಾರ ವಹಿವಾಟು ಜೋರು
  • ಅಮೀನಗಡದ ಟಗರುಗಳದ್ದೇ ಹವಾ; ಬರೋಬ್ಬರಿ 1.5 ಲಕ್ಷ ರೂ.ವರೆಗೆ ಮಾರಾಟ!

ಇದನ್ನೂ ಓದಿ: ಬಕ್ರೀದ್ ಸ್ಪೆಷಲ್: ಪೆರೆಸಂದ್ರ ಸಂತೆಯಲ್ಲಿ ಕುರಿಗಳಿಗೆ ಭಾರೀ ಬೇಡಿಕೆ!

ಇಲ್ಲಿನ ಮುಖ್ಯರಸ್ತೆಯಲ್ಲಿ ವ್ಯಾಪಾರಿಗಳು ಕಳೆದ ಒಂದು ವಾರದಿಂದ ಬೀಡುಬಿಟ್ಟಿದ್ದಾರೆ. ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಇಲ್ಲಿ ವಹಿವಾಟು ಜೋರಾಗಿರುತ್ತೆ. ಅಮೀನಗಡದ ಟಗರುಗಳಿಗೆ ಭಾರೀ ಬೇಡಿಕೆ ಇದೆ. ಬರೋಬ್ಬರಿ ಒಂದೂವರೆ ಲಕ್ಷ ರೂಪಾಯಿವರೆಗೆ ಮಾರಾಟವಾಗುತ್ತಿವೆ.

ಯಾವ ಕುರಿಗೆ ಎಷ್ಟು ಬೆಲೆ?

  • ಬಂಡೂರ್ ಟಗರು- 1 ಲಕ್ಷ ರೂ
  • ಕಿಲಾರಿ ಕುರಿ- 80 ಸಾವಿರ ರೂ
  • ನಾಟಿ ಕುರಿ- 60 ಸಾವಿರ ರೂ
  • ಕರಿ ಕುರಿ-40 ಸಾವಿರ ರೂ
  • ಬಾಗೇವಾಡಿ ಕುರಿ- 1.5 ಲಕ್ಷ ರೂ
  • ಅಮೀನ್​ಗಡ ಕುರಿ- 60 ಸಾವಿರ ರೂ
  • ಮೈಲಾರಿ ಟಗರು- 70 ಸಾವಿರ ರೂ

ಸಂತೆಯಲ್ಲಿ ಬಂಡೂರು, ಶಿರೋಹಿ, ಮೌಳಿ, ಗೆಣಸಿ ಹಾಗೂ ಶಿರಾ ತಳಿಯ ಕುರಿಗಳು ಕೂಡ ಲಭ್ಯವಿವೆ. ಗಾತ್ರ ಮತ್ತು ತೂಕದ ಆಧಾರದ ಮೇಲೆ ಬೆಲೆ ನಿರ್ಧರಿಸಲಾಗುತ್ತದೆ. ಕಳೆದ ಬಾರಿಗಿಂತ ಈ ಬಾರಿ ಕುರಿಗಳಿಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮೂಡಿದೆ.

ಇದನ್ನೂ ಓದಿ: ಬಕ್ರೀದ್ ಹಬ್ಬದ ವೇಳೆ ಗೋಹತ್ಯೆ ತಡೆಗೆ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ: ಕಸಾಯಿಖಾನೆಗಳ ಬಂದ್​​ಗೆ ಒತ್ತಾಯ

ಒಟ್ಟಿನಲ್ಲಿ ಪವಿತ್ರ ತ್ಯಾಗದ ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಹಣದ ಹೊಳೆ ಹರಿಯುತ್ತಿದ್ದು, ತಮಗೆ ಇಷ್ಟವಾದ, ಕೊಬ್ಬಿದ ಕುರಿಗಳನ್ನು ಖರೀದಿಸಲು ಮುಸ್ಲಿಂ ಬಾಂಧವರು ಮುಗಿಬೀಳುತ್ತಿದ್ದಾರೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us