ಬೆಂಗಳೂರಿನಲ್ಲಿ ನಿಲ್ಲದ ಅಕ್ರಮ ಬೋರ್‌ವೆಲ್ ಸದ್ದು: ಒಂದೂವರೆ ತಿಂಗಳಲ್ಲಿ 36 ಪ್ರಕರಣ ದಾಖಲು
ತೀವ್ರ ನೀರಿನ ಬಿಕ್ಕಟ್ಟು, ಅಂತರ್ಜಲ ಮಟ್ಟ ಕುಸಿತ ಈ ಎಲ್ಲ ಸಮಸ್ಯೆಗಳ ಮಧ್ಯೆ ಬೆಂಗಳೂರಿನಲ್ಲಿ ಅಕ್ರಮ ಬೋರ್‌ವೆಲ್ ಕೊರೆಯಿಸುವಿಕೆ ಅವ್ಯಾಹತವಾಗಿ ನಡೆದಿದೆ. ಅಕ್ರಮ ಕೊಳವೆ ಬಾವಿ ಕೊರೆಯಿಸುವಿಕೆ ಸಂಬಂಧ ಒಂದೂವರೆ ತಿಂಗಳ ಅವಧಿಯಲ್ಲಿ 36 ಪ್ರಕರಣಗಳನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ದಾಖಲಿಸಿದೆ.
ಬೆಂಗಳೂರು, ಮೇ 7: ಬೆಂಗಳೂರಿನಲ್ಲಿ ಉಂಟಾಗಿರುವ ತೀವ್ರ ನೀರಿನ ಬಿಕ್ಕಟ್ಟಿನ ಕಾರಣ ಅಕ್ರಮ ಕೊಳವೆ ಬಾವಿಗಳನ್ನು ನಿಯಂತ್ರಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಇತ್ತೀಚೆಗೆ ಕಠಿಣ ಕ್ರಮ ಕೈಗೊಂಡಿತ್ತು. ಅನುಮತಿ ಇಲ್ಲದೆ ಬೋರ್‌ವೆಲ್ ಕೊರೆಯುವಂತಿಲ್ಲ ಎಂದು ಆದೇಶವನ್ನೂ ಹೊರಡಿಸಿತ್ತು. ಇದೀಗ ಅಕ್ರಮ ಬೋರ್ವೆಲ್ಗಳಿಗೆ ಸಂಬಂಧಿಸಿ ಕಳೆದ 45 ದಿನಗಳಲ್ಲಿ 36 ಪ್ರಕರಣಗಳನ್ನು ದಾಖಲಿಸಿರುವುದು ತಿಳಿದುಬಂದಿದೆ. ಅಂತರ್ಜಲ ಮಟ್ಟ ಕುಸಿದಿರುವ ಕಾರಣ, ಹೊಸ ಬೋರ್‌ವೆಲ್ ಕೊರೆಯಿಸುವುದಿದ್ದರೆ ಪೂರ್ವಾನುಮತಿ ಪಡೆಯಬೇಕು ಎಂದು ಮಾರ್ಚ್ನಲ್ಲಿ ಜಲ ಮಂಡಳಿ ಆದೇಶ ಹೊರಡಿಸಿತ್ತು.
ಬೋರ್‌ವೆಲ್ ಕೊರೆಯುವಿಕೆಗೆ ಸಂಬಂಧಿಸಿದ ದೂರುಗಳ ಬಗ್ಗೆ ಅಧಿಕಾರಿಗಳು ಗಮನಹರಿಸುತ್ತಿದ್ದಾರೆ ಮತ್ತು ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ ಎಂದು ಜಲ ಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ವಿ ತಿಳಿಸಿದ್ದಾರೆ.
ಕ್ರಮ ಕೈಗೊಳ್ಳುವ ವಿಚಾರದಲ್ಲಿ ನಾವು ಸಾರ್ವಜನಿಕ ದೂರುಗಳನ್ನು (ಅಕ್ರಮ ಬೋರ್‌ವೆಲ್ ಕೊರೆಯುವಿಕೆಯ ವಿರುದ್ಧ) ಅವಲಂಬಿಸಿರುತ್ತೇವೆ. ಏಕೆಂದರೆ ನಾವು ಎಲ್ಲಾ ಪ್ರದೇಶಗಳನ್ನು ಪರಿಶೀಲಿಸುವುದು ವಾಸ್ತವದಲ್ಲಿ ಮತ್ತು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ದೂರುಗಳು ಬಂದ ಪ್ರದೇಶಗಳಿಗೆ ನಮ್ಮ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ. ಅಲ್ಲಿ ಬೋರ್‌ವೆಲ್ ಕೊರೆಯುವಿಕೆಯನ್ನು ತಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಆದರೆ, ಮಂಡಳಿಯ ಆದೇಶದ ಹೊರತಾಗಿಯೂ ಮಿತಿಮೀರಿದ ಬೋರ್‌ವೆಲ್ ಕೊರೆಯುವಿಕೆ ಕಡಿಮೆಯಾಗಿಲ್ಲ. ಕಠಿಣ ನಿರ್ಬಂಧಗಳ ನಡುವೆಯೂ ಅಕ್ರಮವಾಗಿ ಬೋರ್‌ವೆಲ್ ಕೊರೆಯುವಿಕೆ ಮುಂದುವರೆದಿದೆ ಎಂದು ನಾಗರಿಕರು ದೂರಿದ್ದಾರೆ.
ಆರಂಭದಲ್ಲಿ ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಳ್ಳುತ್ತಿದ್ದರು. ಅನೇಕ ಬಾರಿ, ಬೋರ್‌ವೆಲ್ ಕೊರೆಯುವಿಕೆಯು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತದೆ. ಸ್ವಲ್ಪ ಸಮಯದ ನಂತರ ಪುನರಾರಂಭವಾಗುತ್ತದೆ. ಕಳೆದ ಎರಡು ವಾರಗಳಲ್ಲಿ, ಜಲಮಂಡಳಿಯು ದೂರುಗಳನ್ನು ಸಕ್ರಿಯವಾಗಿ ಪರಿಹರಿಸಿಲ್ಲ ಎಂದು ವೈಟ್‌ಫೀಲ್ಡ್‌ನ ನಾಗರಿಕ ಕಾರ್ಯಕರ್ತ ಸಂದೀಪ್ ಅನಿರುದ್ಧನ್ ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ. ಸ್ಥಳೀಯ ನಿವಾಸಿಯೊಬ್ಬರು ವಸತಿ ನಿವೇಶನದಲ್ಲಿ ಬೋರ್‌ವೆಲ್ ಕೊರೆದು ಅಕ್ರಮವಾಗಿ ನೀರನ್ನು ಟ್ಯಾಂಕರ್‌ಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಜೆಪಿ ನಗರ 7ನೇ ಹಂತದ ಗೌರವ್ ನಗರದ ನಾಗರಿಕರೊಬ್ಬರು ಆರೋಪಿಸಿರುವುದನ್ನೂ ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯ ಜಲದಾಹಕ್ಕೆ ಸಿಗದ ಮುಕ್ತಿ; ನೀರಿಲ್ಲದೇ ಗೋಪಾಲಪುರ, ಹೊಸಹಳ್ಳಿ ಜನರ ಪರದಾಟ
ಆದರೆ, ಆರೋಪಗಳನ್ನು ನಿರಾಕರಿಸಿರುವ ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್, ನಮ್ಮ ಅಧಿಕಾರಿಗಳು ಪ್ರತಿ ದೂರನ್ನೂ ಪರಿಗಣಿಸಿ ಸ್ಥಳಕ್ಕೆ ಹಾಜರಾಗುತ್ತಾರೆ. ಜನರು ಸಮಸ್ಯೆಗಳನ್ನು ಮಂಡಳಿಗೆ ತಿಳಿಸಬೇಕು ಎಂದು ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ