ಟ್ರಾಫಿಕ್ ಉಲ್ಲಂಘನೆ ಪೇಮೆಂಟ್ ಚಲನ್ ನೆಪದಲ್ಲಿ 5 ಲಕ್ಷ ರೂ. ವಂಚನೆ: ವಾಹನ ಚಾಲಕರೇ ಎಚ್ಚರ
ವಾಹನ ಚಾಲಕರೇ ಎಚ್ಚರ. ದಂಡ ಪಾವತಿ ನೆಪದಲ್ಲಿ ಸೈಬರ್ ವಂಚಕರು ನಿಮ್ಮನ್ನು ವಂಚಿಸಬಹುದು. ಏಕೆಂದರೆ ಇಂತಹದೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆಯೊಬ್ಬರಿಂದ 5 ಲಕ್ಷ ರೂ. ದೋಚಲಾಗಿದೆ. ಸದ್ಯ ದೂರು ದಾಖಲಾಗಿದೆ. ಆನ್ಲೈನ್ನಲ್ಲಿ ಯಾವುದೇ ಪೇಮೆಂಟ್ ಮಾಡುವುದಕ್ಕೂ ಮುನ್ನ ಎಚ್ಚರವಹಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

ಬೆಂಗಳೂರು, ಜನವರಿ 22: ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧಗಳು (Cyber Fraud) ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಶಿಕ್ಷಣವಂತರು ವಂಚಕರ ಜಾಲಕ್ಕೆ ಸಿಲುಕಿ ವಂಚನೆಗೆ ಒಳಗಾಗುತ್ತಿದ್ದಾರೆ. ಇದೀಗ ನಗದರಲ್ಲಿ ಅಂತಹದೊಂದು ಘಟನೆ ನಡೆದಿದೆ. ಟ್ರಾಫಿಕ್ ಚಲನ್ ಪಾವತಿ ನೆಪದಲ್ಲಿ ಸೈಬರ್ ಕದೀಮರ ಬಲೆಗೆ ಬಿದ್ದ ಮಹಿಳೆಯೊಬ್ಬರು ಬರೋಬ್ಬರಿ 5 ಲಕ್ಷ ರೂ ಕಳೆದುಕೊಂಡಿದ್ದಾರೆ. ಸದ್ಯ ಮಹಿಳೆ ಪೂರ್ವ ವಿಭಾಗದ ಸೈಬರ್ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ (FIR) ದಾಖಲಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.
ನಡೆದದ್ದೇನು?
ಮಹಿಳೆಯ ಮೊಬೈಲ್ ನಂಬರ್ಗೆ ನಿಮ್ಮ ಟ್ರಾಫಿಕ್ ದಂಡ ಪಾವತಿ ಮಾಡಿ ಎಂದು ಮೆಸೆಜ್ ಬಂದಿದೆ. ಜೊತೆಗೆ ಸೈಬರ್ ವಂಚಕರು ಲಿಂಕ್ ಕೂಡ ಕಳಿಸಿದ್ದರು. ಕೊಡಲೇ ಮಹಿಳೆ ಲಿಂಕ್ ಓಪನ್ ಮಾಡಿ ಕ್ರೆಡಿಟ್ ಕಾರ್ಡ್ ಡಿಟೇಲ್ಸ್ ಹಾಕಿದ್ದಾರೆ. ಡಿಟೇಲ್ಸ್ ನೀಡುತ್ತಿದ್ದಂತೆ ತಕ್ಷಣವೇ ಕ್ರೆಡಿಟ್ ಕಾರ್ಡ್ನಿಂದ 5 ಲಕ್ಷ ರೂ. ಕಡಿತಗೊಂಡಿದೆ. ಆ ಮೂಲಕ ಕದೀಮರು 500ರೂ. ಪೇಮೆಂಟ್ ರಿಕ್ವೆಸ್ಟ್ ಕಳಿಸಿ 5 ಲಕ್ಷ ರೂ ದೋಚಿದ್ದಾರೆ. ಸದ್ಯ ಮಹಿಳೆ ಪೂರ್ವ ವಿಭಾಗದ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ದಾವಣಗೆರೆ ಪಾಲಿಕೆ ವಲಯ ಕಚೇರಿಯ ತಂತ್ರಾಂಶವನ್ನು ಬಿಡದ ಸೈಬರ್ ವಂಚಕರು
ದಾವಣಗೆರೆ ಮಹಾನಗರ ಪಾಲಿಕೆ ವಲಯ ಕಚೇರಿಯ ತಂತ್ರಾಂಶವನ್ನು ಸೈಬರ್ ವಂಚಕರು ಹ್ಯಾಕ್ ಮಾಡಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಪಾಲಿಕೆ ಇ-ಆಸ್ತಿ ತಂತ್ರಾಂಶವನ್ನೇ ಹ್ಯಾಕ್ ಮಾಡಿದ್ದ, ಹ್ಯಾಕರ್ಸ್ ಅಕ್ರಮವಾಗಿ ಇ-ಆಸ್ತಿಗೆ ಅನುಮೋದನೆ ನೀಡಿದ್ದರು. ದಾವಣಗೆರೆ ಮಹಾನಗರ ಪಾಲಿಕೆಯ ವಲಯ ಕಚೇರಿ -1 ರಲ್ಲಿ ಘಟನೆ ನಡೆದಿದ್ದು, ಕೃತ್ಯ ನಡೆದು ಆರು ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ಬಿಎಂಟಿಸಿ ಬಸ್ನಲ್ಲಿ 6 ರೂ. ಬದಲು 60 ಸಾವಿರ ರೂ ಫೋನ್ ಪೇ ಮಾಡಿದ ಪ್ರಯಾಣಿಕ, ಮುಂದೇನಾಯ್ತು ನೋಡಿ
ಆಯುಕ್ತರ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದ್ದು, ಸೈಬರ್ ವಂಚಕರ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ವಲಯ ಆಯುಕ್ತ ಕೆ ನಾಗರಾಜ್ ದೂರ ದಾಖಲಿಸಿದ್ದರು.
ವರದಿ: ಪ್ರದೀಪ್ ಚಿಕ್ಕಾಟೆ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
