
ಬೆಂಗಳೂರು, ಮೇ 08: ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣು ಜಿರಾಫೆ ಮೃತಪಟ್ಟಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದಿದೆ. 3 ವರ್ಷ 10 ತಿಂಗಳ ಶಿವಾನಿ ಹೆಸರಿನ ಹೆಣ್ಣು ಜಿರಾಫೆ ಕೊನೆಯುಸಿರೆಳೆದಿದ್ದು, ಅನಾರೋಗ್ಯದಿಂದ ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ ಎನ್ನಲಾಗಿದೆ. ಅಂತಿಮವಾಗಿ ಕರುಳು ಸುತ್ತಿಕೊಂಡು ರಕ್ತಪರಿಚಲನೆ ಆಗದೆ ಜಿರಾಫೆ ಮೃತಪಟ್ಟಿದೆ.
ಇದನ್ನೂ ಓದಿ: ತುಮಕೂರಿನಲ್ಲಿ ಹೆಚ್ಚಾಯ್ತು ಹಕ್ಕಿ ಜ್ವರದ ಭೀತಿ; 50ಕ್ಕೂ ಹೆಚ್ಚು ನವಿಲುಗಳ ಸಾವು!
ಜಿರಾಫೆ ‘ಶಿವಾನಿ’ ಬನ್ನೇರುಘಟ್ಟ ಜೈವಿಕ ಉದ್ಯಾನವನದ (BBP) ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಜಿರಾಫೆಗೆ ಹಲವು ಪಶುವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಬಿಬಿಪಿ ಅಧಿಕಾರಿಗಳ ಪ್ರಕಾರ, ಮೇ 3ರಿಂದ ಆಹಾರ ಸೇವನೆ ನಿಲ್ಲಿಸಿದ್ದ ಜಿರಾಫೆಯನ್ನು ಪಶುವೈದ್ಯರ ತಂಡ ನಿಗಾದಲ್ಲಿಟ್ಟು ಚಿಕಿತ್ಸೆ ನೀಡುತ್ತಿತ್ತು. ಆದರೆ ಗುರುವಾರ ಬೆಳಗ್ಗೆ ಸುಮಾರು 11 ಗಂಟೆಗೆ ಮೃತಪಟ್ಟಿದೆ.
ಪೋಸ್ಟ್‌ಮಾರ್ಟಂ ವರದಿಯಲ್ಲಿ ‘ಸಿಕಲ್ ಟಾರ್ಷನ್’ (Caecal Torsion) ಎಂಬ ಗಂಭೀರ ಆರೋಗ್ಯ ಸಮಸ್ಯೆಯಿಂದ ಶಿವಾನಿ ಸಾವನ್ನಪ್ಪಿರುವುದು ತಿಳಿದುಬಂದಿದೆ. ಶಿವಾನಿಯ ದೇಹದ ಮಾದರಿಗಳನ್ನು ಹೆಬ್ಬಾಳದ ಪಶು ಆರೋಗ್ಯ ಮತ್ತು ಪಶುವೈದ್ಯಕೀಯ ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಭಾರತ್ ಮತ್ತು ಬಬ್ಲಿ ಜಿರಾಫೆಗಳಿಗೆ 2022ರಲ್ಲಿ ಶಿವಾನಿ ಜನಿಸಿತ್ತು. ಬನ್ನೇರುಘಟ್ಟದಲ್ಲಿದ್ದ ಏಕೈಕ ಜಿರಾಫೆ ‘ಗೌರಿ’ಗೆ ಸಂಗಾತಿ ಕಲ್ಪಿಸುವ ಉದ್ದೇಶದಿಂದ ಹಲವು ತಿಂಗಳ ಮಾತುಕತೆ ಬಳಿಕ 2024ರಲ್ಲಿ ಶಿವಾನಿಯನ್ನು ವಿಶೇಷ ವಿನ್ಯಾಸದ ಪಂಜರ ಹೊಂದಿದ್ದ ಮಲ್ಟಿ-ಆಕ್ಸಲ್ ಲಾರಿಯಲ್ಲಿ ಭದ್ರತಾ ವ್ಯವಸ್ಥೆಯೊಂದಿಗೆ ಬನ್ನೇರುಘಟ್ಟಕ್ಕೆ ತರಲಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.