
ಬೆಂಗಳೂರು, ಏಪ್ರಿಲ್ 07: ನಗರದಲ್ಲಿ ಧಾರ್ಮಿಕ ಮುಖಂಡರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಕರಣವು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ತ್ಯಾಗರಾಜನಗರ ನಿವಾಸಿಯಾಗಿರುವ ಮಹಿಳೆಯೊಬ್ಬರು ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ (Harassment) ಹಾಗೂ ಮಾನಸಿಕ ಶೋಷಣೆಯ ಆರೋಪ ಮಾಡಿ ದೂರು ಸಲ್ಲಿಸಿದ್ದಾರೆ.
‘ನಾನು ಸ್ವಾಮಿಜಿ ಅವರ ಭಕ್ತೆಯಾಗಿದ್ದೆ. ಅವರು ನನ್ನನ್ನು ಮಠಕ್ಕೆ ಕರೆಸಿ ಪ್ರಸಾದ ಕೊಡುತ್ತೇನೆ ಎಂದು ಹೇಳಿ ನನ್ನ ವಿಶ್ವಾಸವನ್ನು ದುರುಪಯೋಗ ಮಾಡಿಕೊಂಡು ನನ್ನೊಂದಿಗೆ ದೈಹಿಕವಾಗಿ ತಪ್ಪಾಗಿ ವರ್ತಿಸಿದರು. ಆ ಸಮಯದಲ್ಲಿ ನನ್ನ ತಿಳುವಳಿಕೆಯಿಲ್ಲದೆ ವಿಡಿಯೋ ಮಾಡಿಕೊಂಡಿದ್ದಾರೆ. ಆ ವಿಡಿಯೋವನ್ನು ಬಳಸಿ ಅವರು ನನ್ನನ್ನು ಬ್ಲಾಕ್ಮೇಲ್ ಮಾಡುತ್ತಿದ್ದು, ಪ್ರತಿ ರಾತ್ರಿ ಫೋನ್ ಮಾಡಿ
ಬೆತ್ತಲೆ ವಿಡಿಯೋ ಕಾಲ್ ಮಾಡು, ಇಲ್ಲದಿದ್ದರೆ ನಿನ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತೇನೆ ಎಂದು ಬೆದರಿಸುತ್ತಿದ್ದಾರೆ.ಈ ಕಾರಣದಿಂದ ನನಗೆ ಭಯ, ಮಾನಸಿಕ ಒತ್ತಡ ಹಾಗೂ ಅವಮಾನ ಉಂಟಾಗಿದೆ. ಆದ್ದರಿಂದ, ಈ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ FIR ದಾಖಲಿಸಿ ತನಿಖೆ ನಡೆಸುವಂತೆ ವಿನಂತಿಸುತ್ತೇನೆ’ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ ಕೋಟ್ಯಾಂತರ ರೂ. ಮೌಲ್ಯದ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದ ಕಾಂಟ್ರಾಕ್ಟರ್ ಅನುಮಾನಾಸ್ಪದ ಸಾವು!
ಈ ಕುರಿತು ಮಹಿಳೆ ಮುಖ್ಯಮಂತ್ರಿ, ಗೃಹ ಸಚಿವರು, ರಾಜ್ಯ ಮಹಿಳಾ ಆಯೋಗ ಹಾಗೂ ಮಾನವ ಹಕ್ಕು ಆಯೋಗ ಸೇರಿದಂತೆ ಸಂಬಂಧಿತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಪ್ರಸ್ತುತ ಈ ಆರೋಪಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಸಂಬಂಧಿತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೊಂದೆಡೆ, ಆರೋಪಗಳು ಸಾಬೀತಾಗುವವರೆಗೆ ಯಾರನ್ನೂ ತಪ್ಪಿತಸ್ಥರಾಗಿ ಪರಿಗಣಿಸಲಾಗುವುದಿಲ್ಲ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆಯ ವರದಿ ಹೊರಬರುವುದನ್ನು ಕಾದು ನೋಡಲಾಗುತ್ತಿದೆ.
ಏಪ್ರಿಲ್ 4ರಂದು ಸ್ವಾಮೀಜಿಯವರು ಮಹಿಳೆ ಸೇರಿ ನಾಲ್ವರ ವಿರುದ್ಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಫೆಬ್ರವರಿ 11ರಂದು ಕಗ್ಗೋಡ ಬಳಿ ತಮ್ಮ ವಾಹನವನ್ನು ಅಡ್ಡಗಟ್ಟಿ ಹಣಕ್ಕಾಗಿ ಬೆದರಿಸಿ ಹಲ್ಲೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಬೆಂಗಳೂರು ಮೂಲದ ಮಹಿಳೆ ಸೇರಿ ಪೃಥ್ವಿಗೌಡ, ಯಶವಂತ್ ಹಾಗೂ ಸ್ಪೀಡ್ ನ್ಯೂಸ್ ಎಂಡಿ ವೀರೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಿಳೆ ಫೌಂಡೇಷನ್ ಹೆಸರಿನಲ್ಲಿ ಹಣ ಬೇಡಿಕೆ ಇಟ್ಟು, ನೀಡದಿದ್ದರೆ ಅಪಪ್ರಚಾರ ಹಾಗೂ ಸುಳ್ಳು ಆರೋಪ ಮಾಡುವುದಾಗಿ ಬೆದರಿಸಿದ್ದಾಳೆ ಎಂದು ಸ್ವಾಮೀಜಿ ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:07 pm, Tue, 7 April 26