ಮೇಕೆದಾಟು ಪಾದಯಾತ್ರೆ ಬೆಂಗಳೂರು ಪ್ರವೇಶಕ್ಕೆ ಅನುಮತಿ ನೀಡದಂತೆ ಬಿಜೆಪಿ ಶಾಸಕರ ಒತ್ತಡ; ಬಿಜೆಪಿ ನಾಯಕರು ಹೇಳಿದ್ದೇನು?

ಬೆಂಗಳೂರು ಪ್ರವೇಶ ಮಾಡಿದರೆ ಅದನ್ನು ನೀವು ರಾಜಕೀಯವಾಗಿ ಎದುರಿಸಬೇಕು. ಅದಕ್ಕೆ ನೀವು ಸಿದ್ಧರಾಗಿ ಎಂದು ಬೆಂಗಳೂರಿನ ಸಚಿವರಿಗೆ ಸಿಎಂ ಕಿವಿಮಾತು ಹೇಳಿದ್ದಾರೆ ಎಂಬ ಬಗ್ಗೆಯೂ ತಿಳಿದುಬಂದಿದೆ. ಬೆಂಗಳೂರು ಪ್ರತಿನಿಧಿಸುವ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಹೇಳಿದ್ದಾರೆ ಎನ್ನಲಾಗಿದೆ.

ಮೇಕೆದಾಟು ಪಾದಯಾತ್ರೆ ಬೆಂಗಳೂರು ಪ್ರವೇಶಕ್ಕೆ ಅನುಮತಿ ನೀಡದಂತೆ ಬಿಜೆಪಿ ಶಾಸಕರ ಒತ್ತಡ; ಬಿಜೆಪಿ ನಾಯಕರು ಹೇಳಿದ್ದೇನು?
ಮೇಕೆದಾಟು ಪಾದಯಾತ್ರೆಯಲ್ಲಿ ಡಿ.ಕೆ.ಶಿವಕುಮಾರ್

ಬೆಂಗಳೂರು: ಮೇಕೆದಾಟು ಪಾದಯಾತ್ರೆ ಬೆಂಗಳೂರು ಪ್ರವೇಶ ವಿಚಾರವಾಗಿ ಬೆಂಗಳೂರು ಪ್ರವೇಶಕ್ಕೆ ಅನುಮತಿ ನೀಡದಂತೆ ಒತ್ತಡ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಮೇಲೆ‌ ಬೆಂಗಳೂರಿನ ಬಿಜೆಪಿ ಶಾಸಕರಿಂದ ಒತ್ತಡ ಇದೆ ಎಂದು ತಿಳಿದುಬಂದಿದೆ. ಶಾಸಕರು ಕರೆ ಮಾಡಿ ಸಿಎಂಗೆ ಒತ್ತಡ ಹಾಕಿದ್ದಾರೆ ಎಂದು ಹೇಳಲಾಗಿದೆ. ಪಾದಯಾತ್ರೆಯನ್ನು ಬೆಂಗಳೂರಿನಲ್ಲಿ ರಾಜಕೀಯವಾಗಿ ಎದುರಿಸಿ. ಬೆಂಗಳೂರು ಪ್ರವೇಶ ಮಾಡಿದರೆ ಅದನ್ನು ನೀವು ರಾಜಕೀಯವಾಗಿ ಎದುರಿಸಬೇಕು. ಅದಕ್ಕೆ ನೀವು ಸಿದ್ಧರಾಗಿ ಎಂದು ಬೆಂಗಳೂರಿನ ಸಚಿವರಿಗೆ ಸಿಎಂ ಕಿವಿಮಾತು ಹೇಳಿದ್ದಾರೆ ಎಂಬ ಬಗ್ಗೆಯೂ ತಿಳಿದುಬಂದಿದೆ. ಬೆಂಗಳೂರು ಪ್ರತಿನಿಧಿಸುವ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಹೇಳಿದ್ದಾರೆ ಎನ್ನಲಾಗಿದೆ.

ಮೇಕೆದಾಟು ಪಾದಯಾತ್ರೆ ಬೆಂಗಳೂರು ಪ್ರವೇಶ ವಿಚಾರವಾಗಿ ಟಿವಿ9ಗೆ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಪ್ರತಿಕ್ರಿಯೆ ನೀಡಿದ್ದಾರೆ. ಪಾದಯಾತ್ರೆ ನಿಲ್ಲಬೇಕು ಎಂಬುದು ಒಂದೇ ನಮ್ಮ ಒತ್ತಡ. ಕೊರೊನಾ ಸನ್ನಿವೇಶ ಇರುವ ಕಾರಣ ನಿಲ್ಲಿಸಬೇಕು ಎಂದು ಒತ್ತಡ ಇದೆ. ಪಾದಯಾತ್ರೆ ಮುನ್ನಡೆಸುವ ನಾಯಕರು ವ್ಯವಹಾರ ಜ್ಞಾನ ಇದ್ದು ನಿಯಮ ಪಾಲಿಸುತ್ತಾರೆ ಅಂತಾ ಅಂದುಕೊಂಡಿದ್ದೆವು. ಕೊರೊನಾ‌ ಜಾಸ್ತಿಯಾದ್ರೆ ಇಬ್ಬರೇ ಪಾದಯಾತ್ರೆ ಮಾಡ್ತೇವೆ ಅಂತಾ ಹೇಳಿ ಈಗ ರಾಜಕೀಯ ಜಾತ್ರೆ ಮಾಡ್ತಿದ್ದಾರೆ. ಅವರು ಬುದ್ದಿವಂತರು ಅಂತಾ ಅಂದುಕೊಂಡು ಸುಮ್ಮನೇ ಇದ್ದೆವು. ಪಾದಯಾತ್ರೆ ತಡೆಯುವಂತೆ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ಎಂದು ಹೇಳಿದ್ದಾರೆ.

ಸರ್ಕಾರಕ್ಕೆ ಮನವಿ ಮಾಡಿದ್ದೇವೆ, ಕೋರ್ಟ್ ಕೂಡಾ ಕಾಂಗ್ರೆಸ್ ಗೆ ಛೀಮಾರಿ ಹಾಕಿದೆ. ಈಗಲಾದರೂ ಸರ್ಕಾರ ಕ್ರಮ ಕೈಗೊಳ್ಳಬೇಕು ಅಂತಾ ಕೋರ್ಟ್ ನೋಟೀಸ್ ಕೊಟ್ಟಿದೆ. ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸದಿದ್ದರೆ ಅನಿವಾರ್ಯವಾಗಿ ಏನೆಲ್ಲಾ ಮಾಡಬೇಕೋ ಅದನ್ನು ಬಿಜೆಪಿ ಮಾಡುತ್ತದೆ. ಕಾಂಗ್ರೆಸ್ ಹಠ ಹಿಡಿದು ಬೆಂಗಳೂರು ಪ್ರವೇಶ ಮಾಡಿದರೆ ಬಂಧಿಸುವಂತೆ ಅನಿವಾರ್ಯವಾಗಿ ನಾವು ಸರ್ಕಾರಕ್ಕೆ ಹೇಳಬೇಕಾಗುತ್ತದೆ. ತಡೆಯಲು ಅನೇಕ ಮಾರ್ಗಗಳಿವೆ, ಕಾಂಗ್ರೆಸ್ ಕೊರೋನಾ ಹರಡುವುದನ್ನು ತಡೆಯಲು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ಅಶ್ವತ್ಥ್ ನಾರಾಯಣ, ಹಾಲಪ್ಪ ಆಚಾರ್, ಎ ನಾರಾಯಣಸ್ವಾಮಿ ಪ್ರತಿಕ್ರಿಯೆ

ಹೈಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇವೆ. ಕಾಂಗ್ರೆಸ್ ನಾಯಕರು ನಾವು ಎರಡು ಜನ ಪಾದಯಾತ್ರೆ ಮಾಡುತ್ತೇವೆ ಅಂತ ಹೇಳಿದರು. ಆದರೆ ಸಾವಿರಾರು ಜನ ಸೇರಿ ಪಾದಯಾತ್ರೆ ಮಾಡುತ್ತಿದ್ದಾರೆ. ನಾವು ಅವರ ವಿರುದ್ದ ಕ್ರಮ ತೆಗೆದುಕೊಳ್ಳುತ್ತೆವೆ. ಕೇಸ್ ಕೂಡ ದಾಖಲು ಮಾಡಿದ್ದಾರೆ. ಜನ ಸಾಮಾನ್ಯರಿಗೆ ಒಂದು ರೂಲ್ಸ್ ರಾಜಕಾರಣಿಗಳಿಗೆ ಒಂದು ರೂಲ್ಸ್ ಅಲ್ಲ. ಎಲ್ಲರಿಗೂ ಒಂದೇ ರೂಲ್ಸ್. ಕಾಂಗ್ರೆಸ್​ನವರು ಅರ್ಥ ಮಾಡಿಕೊಳ್ಳದೆ ವರ್ತಿಸುತ್ತಿದ್ದಾರೆ. ಏನಾಗುತ್ತದೆ ಎಂದು ನೀವೇ ಕಾದು ನೋಡಿ. ಅವರ ವಿರುದ್ಧ ಕ್ರಮ ಹಾಗೆ ಆಗುತ್ತದೆ ರಾಜ್ಯಕ್ಕೆ ಸ್ಪಷ್ಟ ಸಂದೇಶವನ್ನು ಕೊಡಬೇಕು. ಕಾಂಗ್ರೆಸ್ ಮೇಲೆ ಮೃದುಧೋರಣೆ ಇಲ್ಲ. ಬಂಧಿಸುವಂತ ಕೆಲಸ ಆಗಿರಲಿಲ್ಲ, ಅದು ಆಗಬೇಕು. ಕಾಂಗ್ರೆಸ್ ಸವಾಲನ್ನು ಸರ್ಕಾರ ಸ್ವೀಕರಿಸಿ ಏನು ಕ್ರಮ ಆಗುತ್ತದೆ ನೋಡಿ ಎಂದು ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್​ನಿಂದ ಪಾದಯಾತ್ರೆ ಬಗ್ಗೆ ಕೊಪ್ಪಳ ಜಿಲ್ಲೆ ಕುಕನೂರಲ್ಲಿ ಸಚಿವ ಹಾಲಪ್ಪ ಆಚಾರ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್​ನವರು ತಮ್ಮ ಸರ್ಕಾರ ಇದ್ದಾಗ ನಿದ್ದೆ ಮಾಡಿದರು. ಈಗ ಕುಂಭಕರ್ಣ ನಿದ್ದೆಯಿಂದ ಎದ್ದಿದ್ದಾರೆ. ಪಾದಯಾತ್ರೆಯಲ್ಲಿ ಏನ್ ಶೂರತನ ತೋರಿಸ್ತಾರೋ ಗೊತ್ತಿಲ್ಲ. ಇದು ರಾಜಕೀಯ ಪಾದಯಾತ್ರೆ. ಪಾದಯಾತ್ರೆ ನಿಲ್ಲಸಲ್ಲ ಅಂತಾರೆ, ಅವರಿಗೆ ತಿಳಿವಳಿಕೆ ಇಲ್ಲ. ಅವರಿಗೆ ಕಾನೂನು ಉತ್ತರ ಕೊಡುತ್ತೆ ಎಂದು ಸಚಿವ ಹಾಲಪ್ಪ ಹೇಳಿದ್ದಾರೆ.

ಕಾಂಗ್ರೆಸ್​ನವರು ವಿವೇಚನೆ ಇಲ್ಲದವರಂತೆ ನಡೆದುಕೊಳ್ತಿದ್ದಾರೆ. ಕೊವಿಡ್ ಸಂದರ್ಭದಲ್ಲೂ ದಂಡು ಕಟ್ಟುಕೊಂಡು ಬರುತ್ತಿದ್ದಾರೆ. ಬೆಂಗಳೂರಿಗೆ ದಂಡು ಬರುತ್ತೇವೆಂದು ಡಿಕೆಶಿ ಪ್ರತಿಪಾದನೆ ಮಾಡಿದ್ದಾರೆ. ಅಧಿಕಾರ, ಕುರ್ಚಿಯೇ ಮುಖ್ಯ ಎಂಬ ಧೋರಣೆ ತೋರುತ್ತೆ. ಜನರ ಆರ್ಥಿಕತೆ, ಆರೋಗ್ಯದ ಬಗ್ಗೆ ಕಾಂಗ್ರೆಸ್​ಗೆ ಕಾಳಜಿ ಇಲ್ಲ. ಕೊವಿಡ್ ನಿಯಂತ್ರಣಕ್ಕೆ ಬಂದ ಬಳಿಕ ಪ್ರತಿಭಟನೆ ಮಾಡಲಿ ಎಂದು ಚಿತ್ರದುರ್ಗದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: Mekedatu Padayatra: ಹೈಕೋರ್ಟ್‌ ಆದೇಶ ನೀಡಿದ್ರೆ ಪಾದಯಾತ್ರೆ ನಿಲ್ಲಿಸುತ್ತೇವೆ: ಸಿದ್ದರಾಮಯ್ಯ ಹೇಳಿಕೆ

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ ವಿರುದ್ಧ ಹೈಕೋರ್ಟ್​ಗೆ ಪಿಐಎಲ್! ತುರ್ತು ವಿಚಾರಣೆಗೆ ಮನವಿ

Published On - 5:54 pm, Wed, 12 January 22

Click on your DTH Provider to Add TV9 Kannada