ಆಗಸ್ಟ್ 16 ರವರೆಗೆ ಬಿಬಿಎಂಪಿ ಮೀಸಲಾತಿ ಅಂತಿಮಗೊಳಿಸಬೇಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

BBMP Delimitation: ಕರ್ನಾಟಕ ಸರ್ಕಾರವು ಅವೈಜ್ಞಾನಿಕವಾಗಿ ವಾರ್ಡ್ ಪುನರ್​ವಿಂಗಡನೆಗೆ ಆದೇಶ ಮಾಡಿದೆ. ಈ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಆಗಸ್ಟ್ 16 ರವರೆಗೆ ಬಿಬಿಎಂಪಿ ಮೀಸಲಾತಿ ಅಂತಿಮಗೊಳಿಸಬೇಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಬಿಬಿಎಂಪಿ ಮತ್ತು ಕರ್ನಾಟಕ ಹೈಕೋರ್ಟ್​ (ಸಂಗ್ರಹ ಚಿತ್ರ)
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Aug 10, 2022 | 2:35 PM

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Bruhat Bengaluru Mahanagara Palike – BBMP) ವಾರ್ಡ್​ ಪುನರ್​ವಿಂಗಡನೆ ಪ್ರಶ್ನಿಸಿ ಹೈಕೋರ್ಟ್​ಗೆ (Karnataka High Court) ದಾಖಲಾಗಿದ್ದ ಹಲವು ರಿಟ್ ಅರ್ಜಿಗಳನ್ನು ನ್ಯಾಯಾಲಯವು ವಿಚಾರಣೆಗೆ ಕೈಗೆತ್ತಿಕೊಂಡಿದೆ. ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿ, ಚುನಾವಣಾ ಆಯೋಗವನ್ನೂ (Election Commission) ಪ್ರತಿವಾದಿಯಾಗಿಸಲು ಸೂಚನೆ ನೀಡಿತು.

ಪ್ರಕರಣ ಸಂಬಂಧ ಇಂದು ಯಾವುದೇ ಮಧ್ಯಂತರ ಆದೇಶ ನೀಡಲು ಹೈಕೋರ್ಟ್ ನಿರಾಕರಿಸಿತು. ಕರ್ನಾಟಕ ಸರ್ಕಾರ ಮತ್ತು ಚುನಾವಣಾ ಆಯೋಗದ ವಾದ ಆಲಿಸಬೇಕಿದೆ. ವಾರ್ಡ್ ವಾರು ಮತದಾರರ ಪಟ್ಟಿ ಸಿದ್ಧವಾಗಿದೆಯೇ ಕೇಳಬೇಕಿದೆ. ವಾದ ಮಂಡನೆ ಬಳಿಕವೇ ಮಧ್ಯಂತರ ಆದೇಶದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ನ್ಯಾಯಪೀಠವು ಹೇಳಿತು. ಪ್ರಕರಣದ ವಿಚಾರಣೆಯನ್ನು ಆಗಸ್ಟ್ 16ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಕರ್ನಾಟಕ ಸರ್ಕಾರವು ಅವೈಜ್ಞಾನಿಕವಾಗಿ ವಾರ್ಡ್ ಪುನರ್​ವಿಂಗಡನೆಗೆ ಆದೇಶ ಮಾಡಿದೆ. ಈ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಆಗಸ್ಟ್ 16ರವರೆಗೆ ಮೀಸಲಾತಿ ಪಟ್ಟಿ ಅಂತಿಮಗೊಳಿಸಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮೌಖಿಕ ಸೂಚನೆ ನೀಡಿತು.

ಹೈಕೋರ್ಟ್ ಆಕ್ಷೇಪ

ಬಿಬಿಎಂಪಿ ವಾರ್ಡ್​ಗಳ ಪುನರ್​ವಿಂಗಡನೆಯಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡಿದೆ ಎನ್ನುವುದು ಅರ್ಜಿದಾರರ ಮುಖ್ಯ ಆರೋಪವಾಗಿದೆ. ಗೋವಿಂದರಾಜನಗರ, ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್‌ಗೆ ಸರಾಸರಿ 30 ಸಾವಿರ ಜನಸಂಖ್ಯೆ ನಿಗದಿಪಡಿಸಲಾಗಿದೆ. ಇದರಿಂದ ವಾರ್ಡ್​ಗಳ ಸಂಖ್ಯೆಯೂ ಹೆಚ್ಚಾಗಿದೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್‌ಗೆ ಸರಾಸರಿ 39 ಸಾವಿರ ಜನಸಂಖ್ಯೆ ನಿಗದಿಪಡಿಸಲಾಗಿದೆ. ಇದರಿಂದಾಗಿ ಈ ಹಿಂದೆ ಈ ವಾರ್ಡ್​ನಲ್ಲಿ ಇದ್ದ 7 ವಾರ್ಡ್​ಗಳ ಸಂಖ್ಯೆ 6ಕ್ಕೆ ಇಳಿದಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

ವಕೀಲ ಇಸ್ಮಾಯಿಲ್‌ ಜಬೀವುಲ್ಲಾ ಸಲ್ಲಿಸಿರುವ ಅರ್ಜಿಯಲ್ಲಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಸೀಮಾ ನಿರ್ಣಯ ಆಯೋಗದ ಅಧ್ಯಕ್ಷರು, ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ರಾಜ್ಯ ಚುನಾವಣಾ ಆಯೋಗವನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.

ಕರ್ನಾಟಕ ಸರ್ಕಾರವು ಬಿಬಿಎಂಪಿ ಪುನರ್‌ ವಿಂಗಡಣೆಯ ಕರಡು ದಾಖಲೆಯನ್ನು ಕಳೆದ ಜೂನ್ 23ರಂದು ಪ್ರಕಟಿಸಿತ್ತು. ಈ ಪುನರ್​ವಿಂಗಡನೆಗೆ ಆಕ್ಷೇಪಣೆ ವ್ಯಕ್ತಪಡಿಸಿ ಜುಲೈ 7ರಂದು ಹಲವು ಅರ್ಜಿದಾರರು ಮನವಿ ಸಲ್ಲಿಸಿದ್ದರು. ಕೆಲವರು ಸುಪ್ರೀಂಕೋರ್ಟ್​ನಲ್ಲಿಯೂ ಪ್ರಶ್ನಿಸಿದ್ದರು. ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯಲಿ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

Follow us on

Related Stories

Most Read Stories

Click on your DTH Provider to Add TV9 Kannada